ನವೀನ್ ವಿರುದ್ಧ ಪ್ರಕರಣ ಕೈಬಿಡಿ
ಕ.ಪ್ರ.ವಾರ್ತೆ ಟಿ ಬೆಂಗಳೂರು ಟಿ ಏ.24ಪೊಲೀಸ್ ಅಧಿಕಾರಿ ಮಂಜುನಾಥ ಬಂಡೆ ಹತ್ಯೆಯಾದಾಗ ಅಲ್ಲಿಯ ಐಜಿಪಿ ವಜೀರ್ ಅಹ್ಮದ್ ವರ್ಗಾವಣೆ ಮಾಡಲು ನಿರಾಕರಿಸಿದ್ದ ರಾಜ್ಯ ಸರ್ಕಾರ, ಒಬ್ಬ ಅಲ್ಪಸಂಖ್ಯಾತ ದನಗಳ್ಳ ಸತ್ತ ಕೂಡಲೇ ಪೊಲೀಸ್ ಅಧಿಕಾರಿ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ನಕ್ಸಲ್ ನಿಗ್ರಹ ಪಡೆ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅಲ್ಪಸಂಖ್ಯಾತ ರಾಜಕಾರಣಕ್ಕಾಗಿ ರಾಜ್ಯದ ಭದ್ರತೆ ವಿಚಾರ ಕಡೆಗಣಿಸುತ್ತಿದೆ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅವರು ಹೇಳಿದರು.ಪೊಲೀಸ್ ಸಿಬ್ಬಂದಿ ನವೀನ್ ನಾಯಕ್ ವಿರುದ್ಧದ ಪ್ರಕರಣ ಕೈಬಿಡುವಂತೆ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.ರಾಜ್ಯ ಸರ್ಕಾರದ ಈ ಕ್ರಮ ನಕ್ಸಲ್ ನಿಗ್ರಹ ಪಡೆಯ ನೈತಿಕ ಸ್ಥೈರ್ಯ ಕುಂದಿಸುತ್ತದೆ. ಮತ್ತೊಂದೆಡೆ ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ಪೊಲೀಸರು ಹಿಂಜರಿಯುತ್ತಾರೆ. ರಾಜ್ಯದಲ್ಲಿ ನಕ್ಸಲ್ ಹಾವಳಿ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ದನ ಕಳ್ಳನನ್ನು ಅಮಾಯಕ ಎಂದು ಬಿಂಬಿಸಿ ಪೊಲೀಸರ ವಿರುದ್ಧದ ಕ್ರಮ ಖಂಡನಾರ್ಹ ಎಂದರು.ಮೃತ ವ್ಯಕ್ತಿ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಕಾನೂನು ಬಾಹಿರವಾಗಿ 10 ಲಕ್ಷ ಪರಿಹಾರ ನೀಡಲಾಗಿದೆ. ಮೃತ ಕಬೀರ್ ವಿರುದ್ಧ ಮೂಡುಬಿದಿರೆ, ಬಜ್ಪೆ, ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ಗೋ ಕಳ್ಳತನ, ಅಕ್ರಮ ಸಾಗಾಟದ ಮೊಕದ್ದಮೆ ದಾಖಲಾಗಿದೆ. ಆದರೆ ಕಾಂಗ್ರೆಸ್ ಮುಖಂಡರಾದ ಜನಾರ್ದನ ಪೂಜಾರಿ, ರಮಾನಾಥ್ ರೈ, ಯು.ಟಿ.ಖಾದರ್, ಮೊಹಿದ್ದೀನ್ ಬಾವ ಅವರು ಕಬೀರ್ ಹಾಗೂ ಆತನ ತಂಡವನ್ನು ಅಮಾಯಕ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಇದರ ಫಲವಾಗಿಯೇ ಜಿಲ್ಲಾಡಳಿತವು ಗುಂಡು ಹಾರಿಸಿದ ನವೀನ್ ನಾಯಕ್ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅವರು ಆರೋಪಿಸಿದರು.ಮಹೀಂದ್ರಾ ವ್ಯಾನ್ನಲ್ಲಿ ಅಕ್ರಮವಾಗಿ 20 ದನಗಳನ್ನು ಕಬೀರ್ ಹಾಗೂ ಆತನ ತಂಡ ಸಾಗಿಸುತ್ತಿತ್ತು. ಇವರ ನಡತೆಯ ಬಗ್ಗೆ ಗೊಂದಲವಾದಾಗ ನಿಗ್ರಹ ಪಡೆಯ ಪೊಲೀಸರು ಗುಂಡು ಹಾರಿಸಿದ್ದಾರೆ. ತನ್ನ ಕಾರ್ಯ ನಿರ್ವಹಿಸಿದ ಪೊಲೀಸ ಸಿಬ್ಬಂದಿ ವಿರುದ್ಧವೇ ಕ್ರಮ ಜರುಗಿಸಿದರೆ, ಭವಿಷ್ಯದಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ನೈಜ ನಕ್ಸಲರ ವಿರುದ್ಧ ಕ್ರಮಕ್ಕೂ ಹೆದರುತ್ತಾರೆ. ಪೊಲೀಸ್ ಕಾರ್ಯಾಚರಣೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಶಾಸಕರು ಮೂಗು ತೂರಿಸುತ್ತಿರುವುದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಸಿ.ಟಿ.ರವಿ ಹೇಳಿದರು.ಮಸೀದಿಯಲ್ಲಿ ನಡೆದ ಹತ್ಯೆಯ ಬಗ್ಗೆ ಮೌನವೇಕೆ?: ಮದ್ಯ ಸೇವನೆ ಮಾಡಿ ಮಸೀದಿ ಪ್ರವೇಶಿಸಿದ ಎನ್ನುವ ಕಾರಣಕ್ಕೆ ಮುಳಬಾಗಿಲಿನಲ್ಲಿ ಇಮ್ರಾನ್ ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಆದರೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸರ್ಕಾರ, ಇವತ್ತಿನವರೆಗೆ ಇಮ್ರಾನ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿಲ್ಲ. ಪ್ರತಿಯೊಂದು ಪ್ರಕರಣದ ಗಂಭೀರವನ್ನು ಪರಿಗಣಿಸಿ ತನಿಖೆ ಮಾಡಬೇಕಾದ ಸರ್ಕಾರ, ಮತೀಯ ಅಂಶವನ್ನು ಪರಿಗಣಿಸುತ್ತಿರುವುದು ತಾಲೀಬಾನ್ ಸಂಸ್ಕೃತಿ ನೆನಪಿಸುತ್ತದೆ ಎಂದು ಸಿ.ಟಿ.ರವಿ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

