ತಾಲೂಕು ಕಚೇರಿಗೆ ಶಾಸಕರ ದಿಢೀರ್ ಭೇಟಿ
ತರೀಕೆರೆ: ದಿಕ್ಕು ದೆಸೆ ಇಲ್ಲದಂತೆ ಅನಾಥವಾಗಿ ಚೆಲ್ಲಾಪಿಲ್ಲಿಯಾಗಿ ಮತ್ತು ರಾಶಿ ರಾಶಿಯಾಗಿ ಬಿದ್ದಿದ್ದ ಆಹಾರ ಇಲಾಖೆಯ ಅಮೂಲ್ಯ ದಾಖಲೆ ದರ್ಶನ, ಕಂದಾಯ ಇಲಾಖೆಯಲ್ಲಿ ಸರಿಯಾದ ಕಾರಣವನ್ನೇ ಕೊಡದೇ ಅರ್ಜಿದಾರರಿಗೆ ಅರ್ಜಿ ಹಿಂತಿರುಗಿಸಿದ ಪ್ರಸಂಗ, ವಿತರಣೆಯಾಗದೇ ಉಳಿದ ವೃದ್ಧಾಪ್ಯ ವೇತನ ಅರ್ಜಿ, ಈ ರೀತಿಯ ಹಲವು ಅವ್ಯವಸ್ಥೆ ಶನಿವಾರ ಮಿನಿ ವಿಧಾನಸೌಧಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಜಿ.ಎಚ್. ಶ್ರೀನಿವಾಸ್ ಅವರನ್ನೇ ದಂಗು ಬಡಿಸುವಂತಿತ್ತು.
ಮಿನಿ ವಿಧಾನಸೌಧದ ಹೆಬ್ಬಾಗಿಲ ಪಕ್ಕದ ಕೊಠಡಿಯಲ್ಲಿ ಅನಾಥವಾಗಿ ರಾಶಿರಾಶಿಯಾಗಿ ಬಿದ್ದಿದ್ದ ಆಹಾರ ಇಲಾಖೆಯ ಅಮೂಲ್ಯ ದಾಖಲೆ ಹಲವು ಫೈಲ್ಗಳನ್ನು ನೋಡಿ ಶಾಸಕರಿಗೆ ಮತ್ತು ಸಾರ್ವಜನಿಕರಿಗೆ ಆಶ್ಚರ್ಯವಾಯಿತು.
ಯಾರು ಹೊಣೆ: ಕೊಠಡಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಫೈಲ್, ದಾಖಲೆಗಳು ಏಕೆ ಹೀಗೆ ಅನಾಥವಾಗಿ ಬಿದ್ದಿದೆ, ಯಾವುದಾದರೂ ಫೈಲು, ಕಾಗದಪತ್ರ ಕಳೆದುಹೋದರೆ ಯಾರು ಇದಕ್ಕೆ ಹೊಣೆ ಎಂದು ಶಾಸಕರು ಅಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದರು.
ಆಹಾರ ಇಲಾಖೆ ಕೊಠಡಿ ದುರಸ್ತಿಯಲ್ಲಿದೆ. ಮಳೆಯಿಂದ ಸೋರಿ ಕಾಗದ ಪತ್ರಗಳನ್ನು ರಕ್ಷಿಸುವ ಸಲುವಾಗಿ ಇಲ್ಲಿಡಲಾಗಿದೆ ಎಂದು ಉತ್ತರ ಬಂತು. ಕಾಗದ ಪತ್ರಗಳು ರಾಶಿ ರಾಶಿಯಾಗಿ ಅನಾಥವಾಗಿ ನೆಲದ ಮೇಲೆ ಬಿದ್ದಿದ್ದುರ ಕುರಿತು ಅಸಮಧಾನ ವ್ಯಕ್ತಪಡಿಸಿದ ಶಾಸಕರು ಕೂಡಲೇ ಅವುಗಳನ್ನು ಜೋಡಿಸಿಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಲೇವಾರಿಯಾಗದ ಜಾತಿ ಅರ್ಹತಾ ಪತ್ರ: ತಾಲೂಕು ಕಚೇರಿಯಲ್ಲಿ ಶಾಸಕರು ಜಾತಿ ಸರ್ಟಿಫಿಕೇಟುಗಳ ಕಡತ ಪರಿಶೀಲಿಸಿ ಅನೇಕ ಅರ್ಹತಾ ಪತ್ರಗಳು ಏಕೆ ವಿಲೇವಾರಿಯಾಗದೇ ಹಾಗೆಯೇ ಉಳಿದು ಕೊಂಡಿದೆ ಎಂದು ಪ್ರಶ್ನಿಸಿದಾಗ ಕಲ್ಲತ್ತಿಪುರ ಮತ್ತು ಬಾವಿಕೆರೆ ರೆವೆನ್ಯೂ ಇನ್ಸ್ಪೆಕ್ಟರ್ ಮಹಜರು ಹೇಳಿಕೆ ಪಡೆದಿಲ್ಲ ಎಂಬ ದೂರು ಕೇಳಿಬಂತು.
ಜಾತಿ ಅರ್ಹತಾ ಪತ್ರ ಮತ್ತು ಆದಾಯ ಪತ್ರಗಳನ್ನು ತಡಮಾಡದೇ ಕೂಡಲೇ ಅರ್ಜಿದಾರರಿಗೆ ವಿತರಿಸಬೇಕು, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಇತ್ಯಾದಿ ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಿ ಸಂಬಂಧಿಸಿದ ಅರ್ಜಿದಾರರಿಗೆ ವಿತರಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಶ್ರೀನಿವಾಸ್ ಸುದ್ದಿಗಾರರೊಡನೆ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳ ಅರ್ಜಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು. ಶಾಸಕರು ಸಬ್ರಿಜಿಸ್ಟರ್ ಕಚೇರಿ, ತಾಲೂಕು ಕಚೇರಿಯ ಎಲ್ಲ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

