ಬಿರುಗಾಳಿಗೆ ಧರೆಗುರುಳಿದ ಗಿಡಮರ
ಕ.ಪ್ರ.ವಾರ್ತೆ ತರೀಕೆರೆ ಏ.27
ಇಲ್ಲಿಗೆ ಸಮೀಪದ ಹೊಸಮನೆ ಗೇಟ್, ವಡ್ಡರದಿಬ್ಬ, ಬಸವನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 4 ಗಂಟೆ ಸಮಯದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಬೀಸಿದ ಭಾರೀ ಬಿರುಗಾಳಿಗೆ ಕೆಲವೆಡೆ ಮನೆ, ಶಾಲೆಗಳ ಮೇಲ್ಛಾವಣಿ ಹಾರಿಹೋಗಿವೆ. ತೋಟದ ಬೆಳೆಗಳು, ಹಲವು ಮರಗಳು ಧರೆಗುರುಳಿವೆ.
ಈ ಮೂರು ಗ್ರಾಮಗಳಲ್ಲಿ ಬೀಸಿದ ಗಾಳಿಯ ರಭಸಕ್ಕೆ ಅಡಕೆ, ತೆಂಗು ಮತ್ತು ಸಾಗುವಾನಿ ಮರಗಳು ತರಗೆಲೆಗಳಂತೆ ಧರೆಗುರುಳಿವೆ. ಕೆಲವು ಮರಗಳು ಸೀಳಿಹೋಗಿವೆ. ಮರಗಳಲ್ಲಿದ್ದ ಅಡಕೆ ಕಾಯಿ, ಗುಳ್ಳುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ತೆಂಗಿನ ಮರಗಳು ಬುಡಮೇಲಾಗಿವೆ.
ಬಸವನಹಳ್ಳಿಯಲ್ಲಿ ಹತ್ತಾರು ಮನೆಗಳ ಮೇಲ್ಛಾವಣಿಗಳು ದೂರಕ್ಕೆ ಹಾರಿಹೋಗಿವೆ. ಸೂರು ಕಳೆದುಕೊಂಡವರು ಆತಂಕಕ್ಕೀಡಾಗಿದ್ದಾರೆ. ಶಿವಣ್ಣ ಎನ್ನುವವರ ತೋಟದಲ್ಲಿ 300ಕ್ಕೂ ಹೆಚ್ಚು ಅಡಕೆ ಮರಗಳು, 20ಕ್ಕೂ ಹೆಚ್ಚು ತೆಂಗಿನ ಮರಗಳು, ಗೊನೆ ಬಿಟ್ಟ ಬಾಳೆ ಮರಗಳು, ಸಾಗುವಾನಿ ಮರಗಳು ನೆಲಕ್ಕುರುಳಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿದೆ.
ಲೋಕೇಶ್ವರ ಎನ್ನುವವರ ತೋಟದಲ್ಲಿ ಸಾಲು ಸಾಲು ಅಡಕೆ, ತೆಂಗು, ಬಾಳೆ ಬೆಳೆ ನೆಲಕ್ಕುರುಳಿದೆ. ಗುಡ್ಡದಬೀರನಹಳ್ಳಿಯಲ್ಲಿ ಸಮುದಾಯ ಭವನದ ಶೀಟುಗಳೆಲ್ಲಾ ಗಾಳಿಗೆ ಹಾರಿಹೋಗಿದ್ದರೆ, ಬಸವನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾರಿಹೋಗಿದೆ. ಸುದೈವದಿಂದ ರಜಾ ದಿನವಾದ್ದರಿಂದ ಶಾಲೆ ಮುಚ್ಚಿತ್ತು.
ನೆಲಕ್ಕುರುಳಿದ ವಿದ್ಯುತ್ ಕಂಬ: ಶನಿವಾರ ಸಂಜೆ 4 ಗಂಟೆ ಸಮಯದಲ್ಲಿ ವಡ್ಡರದಿಬ್ಬ, ಬಸವನಹಳ್ಳಿ, ಮತ್ತು ಹೊಸಮನೆ ಗೇಟ್ ಸುತ್ತಮುತ್ತ ಆಕಾಶದಲ್ಲಿ ಭಾರೀ ಪ್ರಮಾಣದಲ್ಲಿ ದಟ್ಟಮೋಡ ಆವರಿಸಿತ್ತು. ಮಿಂಚು, ಗುಡುಗು, ಸಿಡಿಲು ಆರಂಭವಾಗಿ ಉತ್ತಮ ಮಳೆ ಆಗಬಹುದೇನೋ ಎಂಬುದು ಎಲ್ಲರ ನಿರೀಕ್ಷೆ ಇತ್ತು.
ಆದರೆ, ಆದದ್ದೇ ಬೇರೆ. ಇದ್ದಕ್ಕಿದ್ದ ಹಾಗೆ, ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ ಎಂಬ ಅರಿವು ಬಾರದಂತೆ ಸುಂಟರಗಾಳಿ ಬೀಸತೊಡಗಿತು. ಅರ್ಧಗಂಟೆಯಲ್ಲಿ ಪರಿಸ್ಥಿತಿ ಮೊದಲಿದ್ದಕ್ಕಿಂತ ತೀರಾ ಭಿನ್ನವಾಗಿತ್ತು ಎಂದು ನೊಂದ ರೈತ ಬಸವನಹಳ್ಳಿಯ ರೈತರು ತಿಳಿಸಿದ್ದಾರೆ.
ಶಾಸಕರ ಭೇಟಿ: ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಅಧಿಕಾರಿಗಳೊಂದಿಗೆ ಸಮಸ್ಯೆಗೆ ತುತ್ತಾದ ಗ್ರಾಮಗಳು, ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಇ ಸಂದರ್ಭ ಗ್ರಾ.ಪಂ. ಸದಸ್ಯರಾದ ಗೋವಿಂದಪ್ಪ, ಎಚ್.ಎನ್. ಮಂಜುನಾಥ್ ಮತ್ತು ಗ್ರಾಮಸ್ಥರು ಸೇರಿದಂತೆ ಹಲವರು ಈ ಸ್ಗದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

