ದಲಿತರು ಉನ್ನತ ಹುದ್ದೆಗೇರಲಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.28
ದಲಿತ ಮತ್ತು ಹಿಂದುಳಿತ ಜಾತಿಯವರು ಸಂವಿಧಾನದತ್ತ ಸವಲತ್ತುಗಳನ್ನು ಬಳಸಿಕೊಳ್ಳುವ ಮುಖಾಂತರ ಉನ್ನತ ಹುದ್ದೆ ಅಲಂಕರಿಸಿದರೆ ಆರ್ಥಿಕ ಸ್ವಾವಲಂಬನೆ ಪಡೆಯುವುದರ ಜೊತೆಗೆ ಸಮಾಜದ ಎಲ್ಲರಿಂದಲೂ ಗೌರವ ಪಡೆಯಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಮೋಟಮ್ಮ ಹೇಳಿದ್ದಾರೆ.
ತಾಲೂಕಿನ ಕೆಸರಿಕೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಸ್ವಾಭಿಮಾನಿಗಳಾಗಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳು ಬೇರೆ ಬೇರೆ ಇಲಾಖೆಯಲ್ಲಿರುವ ವಿವಿಧ ಹುದ್ದೆಗಳನ್ನು ಪಡೆಯುವತ್ತ ಮುನ್ನುಗ್ಗಬೇಕು ಎಂದರು.
ಸಮಾರಂಭದಲ್ಲಿ ನೆರೆದಿದ್ದ ಮಕ್ಕಳಿಂದ ತಮ್ಮ ಭವಿಷ್ಯದ ಕನಸುಗಳ ಬಗ್ಗೆ ಪ್ರಮಾಣ ಮಾಡಿಸಿದ ಮೋಟಮ್ಮನವರು ಹಾಡು ಹೇಳುವುದರ ಮುಖಾಂತರ ನೀತಿ ಪಾಠ ಬೋಧಿಸಿದರು.
ಅಂಬೇಡ್ಕರ್ ವಿಚಾರಧಾರೆಗಳನ್ನು ಕುರಿತು ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಪ್ರೊ. ಬಿ. ತಿಪ್ಪೇರುದ್ರಪ್ಪ, ಅಂಬೇಡ್ಕರ್ ಮಹಾಚೇತನವಾಗಿದ್ದರು. ಅವರು ರಚಿಸಿದ ಭಾರತ ಸಂವಿಧಾನ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಹೇಳಿದರು.
ಮಕ್ಕಳಿಗೆ ಪುಸ್ತಕ ವಿತರಿಸಿದ ಯುರೇಕಾ ಅಕಾಡೆಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ದಲಿತರು ತಮ್ಮ ಕೀಳಿರಿಮೆಯಿಂದ ಹೊರ ಬರಬೇಕು. ಕೇವಲ ಬೇರೆ ಸಮಾಜದವರನ್ನು ದ್ವೇಷಿಸುವುದರಿಂದ ಯಾವುದೇ ಪ್ರಯೋಜನವಾಗದು. ಬದಲಾಗಿ ನಾವು ನಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡುವುದು. ಉನ್ನತ ಶಿಕ್ಷಣ ಪಡೆಯುವುದು ಹಾಗೂ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳುವುದರ ಮುಖಾಂತರ ಸಮಾಜದ ಮುಖ್ಯವಾಹಿನಿಗೆ ಪ್ರವೇಶ ಮಾಡಬೇಕು, ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಮಹತ್ವ ನೀಡಬೇಕು. ಬೇರೆಯವರನ್ನು ನಾವು ಗೌರವಿಸಿದಾಗ ಅವರು ನಮ್ಮನ್ನು ಪ್ರೀತಿಸುತ್ತಾರೆ ಎಂದರು.
ದುಶ್ಚಟಗಳಿಗೆ ಬಲಿಯಾಗದಿರಿ: ಜನತಾದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ. ಭರತ್ ಮಾತನಾಡಿ, ಯುವಕರು ಒಗ್ಗಟಿನಿಂದ ಊರಿನ ಅಭಿವೃದ್ಧಿಗೆ ಶ್ರಮಿಸಬೇಕು. ಅಲ್ಲದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ಎಂ.ಎಸ್. ಅನಂತ್, ಗ್ರಾಪಂ ಮಾಜಿ ಸದಸ್ಯ ಹಣೆಸೇಮಕ್ಕಿ ಲಕ್ಷ್ಮಣ, ಕಾಂಗ್ರೆಸ್ ಮುಖಂಡ ಸಿದ್ದರಾಜು, ಗ್ರಾಮದ ಮುಖಂಡ ರಾಜಶೇಖರ್ ಉಪಸ್ಥಿತರಿದ್ದರು. ರೋಹಿತ್ ಸ್ವಾಗತಿಸಿ, ಚೇತನ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

