ಚಿಕ್ಕಮಗಳೂರು

ಸರ್ಕಾರದಲ್ಲಿರುವವರು ಜನಸೇವಕರೇ ವಿನಃ ಒಡೆಯರಲ್ಲ

Published On :

ಕ.ಪ್ರ.ವಾರ್ತೆ  ಶೃಂಗೇರಿ  ಫೆ.2
ದೇಶ, ಅಧಿಕಾರ ನಮ್ಮದು. ಇಲ್ಲಿ ಯಾರೂ ನಮ್ಮನ್ನು ಆಳುತ್ತಿಲ್ಲ. ಸರ್ಕಾರದಲ್ಲಿರುವವರು ಜನಸೇವಕರೇ ಹೊರತು ಒಡೆಯರಲ್ಲ. ಈ ದೃಷ್ಟಿಯಲ್ಲಿ ನಮ್ಮ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಜನತೆಯ ಅದ್ಭುತ ಶಕ್ತಿ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ತಿಳಿಸಿದರು.
ತಾಲೂಕು ಅಡ್ಡಗದ್ದೆಯಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಧಾರವಾಡದ ಸಮಾಜ ಪರಿವರ್ತನಾ ಸಮುದಾಯ, ತುಮಕೂರಿನ ಜನಸಂಗ್ರಾಮ ಸಂಘಟನೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪರಿಸರ ಮತ್ತು ಜೀವ ವೈವಿಧ್ಯತಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ರಾಜಕೀಯ ಸ್ಥಿತಿ ಹದಗೆಟ್ಟಿದೆ. ಅಧಿಕಾರದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತ, ಅಕ್ರಮ ಆಸ್ತಿ ಸಂಪಾದನೆ ಹೆಚ್ಚುತ್ತಿವೆ. ದೇಶವನ್ನು ಕೊಳ್ಳೆ ಹೊಡೆಯುತ್ತಿರುವುದರಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ಉದ್ಭವಿಸಿದೆ. ಜನಸಾಮಾನ್ಯರು ಎಚ್ಚೆತ್ಚು ಸಂಘಟಿತರಾಗಿ ಹೋರಾಡಬೇಕು. ಆಗಲೇ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಭ್ರಷ್ಟರನ್ನು, ಸ್ವಾರ್ಥ ರಾಜಕಾರಣಿಗಳನ್ನು, ಅಕ್ರಮ ಆಸ್ತಿ ಸಂಪಾದಿಸಿಕೊಂಡವರನ್ನು ಜೈಲಿಗೆ ಕಳುಹಿಸಬೇಕು. ಜನರ ಹಣ ತಿಂದ ಭ್ರಷ್ಟಾಚಾರಿಗಳಿಗೆ ತಕ್ಕಪಾಠ ಕಲಿಸಬೇಕು. ಜನರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವವರಿಗೆ ಚೆಂಚಲಗೂಡು, ಹಿಂಡಲಗಾ, ಪರಪ್ಪನ ಅಗ್ರಹಾರದ ದಾರಿ ತೋರಿಸುವ ಶಕ್ತಿ ಜನತೆಗಿದೆ ಎಂದರು.
ಭ್ರಷ್ಟರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ದೇಶದ ಕಾನೂನು ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಕಾನೂನು ಸಂವಿಧಾನಕ್ಕಿಂತ ಯಾರು ದೊಡ್ಡವರಲ್ಲ. ಬಳ್ಳಾರಿ ಗಣಿಗಾರಿಕೆ ಹಗರಣದಲ್ಲಿ ಕಾನೂನಿನ ದುರ್ಬಳಕೆ ಮಾಡಲು ಹೊರಟ ಜನಾರ್ದನ ರೆಡ್ಜಿ ಜೈಲುಪಾಲಾದರು. ಭೂಕಬಳಿಕೆ ಪ್ರಕರಣದಲ್ಲಿ ಶಾಸಕರು, ಸಚಿವರು ಸಾಕಷ್ಟು ಜನ ಜೈಲು ಸೇರಿದರು. ಬಿ.ಎಸ್. ಯಡಿಯೂರಪ್ಪ ಜೈಲು ಸೇರಿದ್ದರೂ, ಸದಾನಂದಗೌಡ, ಜೀವರಾಜ್ ಎಲ್ಲರು ಭ್ರಷ್ಟರೆ ಎಂದರು.
ಕೇಂದ್ರ ಸರ್ಕಾರ ಸಣ್ಣ ಹಿಡುವಳಿದಾರರ ಭೂಮಿಗಳನ್ನು ವಶಪಡಿಸಿಕೊಂಡು ಸಾವಿರಾರು ಎಕರೆ ಭೂಮಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕಾರ್ಖಾನೆ ಆರಂಭಿಸಲು ನೀಡುತ್ತಿವೆ. ಜಮೀನು ಕಳೆದುಕೊಂಡ ಲಕ್ಷಾಂತರ ರೈತರು ಬೀದಿಪಾಲಾಗುತ್ತಿದ್ದಾರೆ. ರೈತರ ಆತ್ಮಹತ್ಯೆಯಂತಹ ದಾರಿ ತುಳಿದಿದ್ದಾರೆ. ಉಳುವವನೇ ಭೂಮಿಯ ಒಡೆಯನಾಗಬೇಕು ಎಂದರು.
ಪ್ರಗತಿ ಪರ ಕೃಷಿಕ ರತ್ನಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು.ಪರಿಸರ ತಜ್ಞರಾದ ಡಾ. ಸುಭಾಷ್‌ಚಂದ್ರ, ಯತಿರಾಜ್, ಕೆ.ಎಂ. ಸೋಮಶೇಖರ್, ಮಹೇಂದ್ರ, ತಾಪಂನ ಪುಷ್ಪಲಕ್ಷ್ಮಿ ನಾರಾಯಣ, ಬಷೀರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಳವಳಿ ಕಳಸಪ್ಪ ಸ್ವಾಗತಿಸಿ, ಪತ್ರಕರ್ತ ಪ್ರಭಾಕರ ಕಾರಂತ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ್ ನಿರೂಪಿಸಿದರು.

ಭ್ರಷ್ಟರಲ್ಲ, ಮಹಾಭ್ರಷ್ಟರು
ಶೃಂಗೇರಿ ಶಾಸಕ ಜೀವರಾಜ್, ಸದಾನಂದ ಗೌಡರು ಜಾಣಮರಿಗಳಲ್ಲ. ಅವರೂ ಮಹಾ ಭ್ರಷ್ಟರು. ಅವರ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನ್ನಲ್ಲಿ ಸಾಕಷ್ಟು ದಾಖಲೆಗಳಿವೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ತಿಳಿಸಿದರು.
  ಅವರು ಅಡ್ಡಗದ್ದೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪರಿಸರ ಮತ್ತು ಜೀವವೈವಿಧ್ಯ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದಾಗ ಬಿಜೆಪಿ ಕಾರ್ಯಕರ್ತರೊಬ್ಬ ಜೀವರಾಜ್ ಅವರನ್ನು ಭ್ರಷ್ಟರ ಸಾಲಿಗೆ ಸೇರಿಸಿದ್ದೀರಿ, ಈ ಬಗ್ಗೆ ನಿಮಗೆ ದಾಖಲೆಗಳಿವೆಯೇ, ಯಾವ ಆಧಾರದ ಮೇಲೆ ಹೇಳುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದರು.
ಅಕ್ರಮ ಸಾಗವಾನಿ ನಾಟ ಸಾಗಾಟ, ಮರಗಳನ್ನು ಕಡಿದು ಸಾಗಾಟ ಮಾಡಿರುವುದು, ಬಿಡಿಎ ಐದು ಅಂತಸ್ತಿನ ಮಹಡಿ ನಿರ್ಮಾಣ ಇತ್ಯಾದಿ ಸಾಕಷ್ಟು ದಾಖಲೆಗಳಿವೆ. ಸದಾನಂದ ಗೌಡರು. ಜೀವರಾಜ್ ಕೇವಲ ಭ್ರಷ್ಟರಲ್ಲ. ಮಹಾಭ್ರಷ್ಟರು. ತಾನು ಯಾರಿಗೂ ಹೆದರುವುದಿಲ್ಲ ಎಂದವರು ಈ ಸಂದರ್ಭದಲ್ಲಿ ಹೇಳಿದರು..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.