ಚಿಕ್ಕಮಗಳೂರು

ರಾಜಕಾರಣದಲ್ಲಿ ನೈತಿಕ ಮೌಲ್ಯಗಳ ಅಧಃಪತನ

Published On :

ಕ.ಪ್ರ.ವಾರ್ತೆ, ಶೃಂಗೇರಿ, ಫೆ.3
ಪ್ರಸ್ತುತ ದಿನಗಳಲ್ಲಿ ಮೌಲ್ಯಾಧಾರಿತ ರಾಜಕಾರಣ ಕಣ್ಮರೆಯಾಗಿ ನೈತಿಕ ಮೌಲ್ಯಗಳ ಅಧಃಪತನ ಆಗುತ್ತಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಡಿವಿಜಿ- ಒಂದು ನೆನಪು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ರಾಜಕಾರಣದಲ್ಲಿ ಕೇವಲ ವ್ಯಕ್ತಿಗತ ಚಿಂತನೆ ಮಾಡಲಾಗುತ್ತಿದೆ. ಸಮಾಜ, ಸಮಾಜದ ಬದುಕಿನ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಇದೆ. ನಿಸ್ವಾರ್ಥ ರಾಜಕಾರಣ ಕಣ್ಮರೆಯಾಗಿ ಸ್ವಾರ್ಥ ರಾಜಕಾರಣ ನಡೆಯುತ್ತಿದೆ.
ಜನಪ್ರತಿನಿಧಿಗಳು ಸಮಾಜ ಸೇವಕರು, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಡಿವಿಜಿ ಅವರಂತಹ ನೈತಿಕ ಮೌಲ್ಯಗಳು, ಕ್ಲಿಷ್ಟ ವ್ಯಕ್ತಿತ್ವ ನಮಗೆ ಆದರ್ಶಪ್ರಾಯವಾಗಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಡಿವಿಜಿ ತತ್ವ ಪಾಲಿಸಿ:  ಕನ್ನಡ ಸಾಹಿತ್ಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ಡಿವಿಜಿ ಅವರ ಕೊಡುಗೆ ಅನುಪಮವಾದುದು. ಮಂಕುತಿಮ್ಮನ ಕಗ್ಗದಂತಹ ಕೃತಿಯನ್ನು ರಚಿಸಿ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರ ಮರೆಯಲಾರದಂತಹ ವ್ಯಕ್ತಿಯಾಗಿದ್ದಾರೆ. ಕನ್ನಡಿಗರು ಸದಾ ನೆನಪಿಸಿಕೊಳ್ಳುತ್ತಿರಬೇಕು. ಇವರ ತತ್ವ, ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ವೈಚಾರಿಕ ಪ್ರಜ್ಞೆ ಬೆಳೆಯಲಿ:  ಹಳ್ಳಿಯ ಜನರ ಬದುಕು ಪಟ್ಟಣದತ್ತ ಕೇಂದ್ರೀಕೃತವಾಗುತ್ತಿದೆ. ಡಾ.ಕಸ್ತೂರಿ ರಂಗನ್ ವರದಿ, ಡಾ.ಮಾಧವ ಗಾಡ್ಗಿಳ್ ವರದಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ.
ಈ ವರದಿಗಳಿಗಿಂತ ಮೊದಲಿನಿಂದಲೇ ಹಳ್ಳಿಗಾಡಿನ ಜನರು ಪ್ರಾಚೀನ ಕಾಲದಿಂದಲೇ ತಮ್ಮ ಬದುಕಿನೊಂದಿಗೆ ಪರಿಸರ ಕಾಪಾಡಿಕೊಂಡೇ ಬಂದಿದ್ದಾರೆ. ಪರಿಸರದೊಂದಿಗೆ ತಮ್ಮ ಬದುಕು ಸಾಗಿಸುತ್ತಿದ್ದಾರೆ. ಜನರಲ್ಲಿ ವೈಚಾರಿಕಪ್ರಜ್ಞೆ ಬೆಳೆಸಬೇಕಿದೆ. ವೈಚಾರಿಕ ಚಳವಳಿಗಳು ನಡೆಯಬೇಕಿದೆ. ಪ್ರಕೃತಿ ಒಂದಿಲ್ಲೊಂದು ರೀತಿಯಲ್ಲಿ ಬದುಕಲು ದಾರಿ ತೋರಿಸಿಕೊಡುತ್ತದೆ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಾಜು ಡಿವಿಜಿ ಅವರ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಎನ್. ತೆರದಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನೆಮ್ಮಾರ್ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕ ಕೆ.ಎಂ. ಗೋಪಾಲ್, ತಾ. ಕಸಾಪ ಅಧ್ಯಕ್ಷ ಗಿಣಿಕಲು ಸುರೇಂದ್ರ, ಕ್ಷೇತ್ರ ವಕೀಲರ ಸಂಘದ ಅಧ್ಯಕ್ಷ ನಟಶೇಖರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಕುರ್ಡಿ ಶಂಕರಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಸತ್ಯನಾರಾಯಣ, ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಉಪನ್ಯಾಸಕ ಪರಶುರಾಮ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಕಳವಳಿ ಕಳಸಪ್ಪ ಸ್ವಾಗತಿಸಿದರು. ಸೂರ್ಗೋಡು ಕೃಷ್ಣಮೂರ್ತಿ ನಿರೂಪಿಸಿ, ಹೆಗ್ಗದ್ದೆ ಶಿವಾನಂದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.