ಚಿಕ್ಕಮಗಳೂರು

ಶೃಂಗೇರಿ: ನಾಳೆಯಿಂದ ಕೃಷಿ ಉತ್ಸವ

Published On :

ನರಸಿಂಹರಾಜಪುರ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಶೃಂಗೇರಿ ಕ್ಷೇತ್ರಮಟ್ಟದ ಕೃಷಿ ಉತ್ಸವ-2014 ಕಾರ್ಯಕ್ರಮವು ಫೆ.8, 9ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7ರಂದು ಮಧ್ಯಾಹ್ನ 3 ಗಂಟೆಗೆ ಬಸ್ತಿಮಠದಿಂದ ವಾಟರ್ ಟ್ಯಾಂಕ್‌ವರೆಗೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಫೆ.8ರಂದು ಬೆಳಗ್ಗೆ 9 ಗಂಟೆಗೆ ಬಸ್ತಿಮಠದಿಂದ ಪೂರ್ಣ ಕುಂಭದೊಂದಿಗೆ ಗಣ್ಯ ವ್ಯಕ್ತಿಗಳು, ಅತಿಥಿಗಳು, ಕೃಷಿಕರೊಂದಿಗೆ ಡೊಳ್ಳು ಕುಣಿತ, ವೀರಗಾಸೆ, ಎತ್ತಿನಗಾಡಿ, ಸ್ತಬ್ಧಚಿತ್ರದೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
10 ಗಂಟೆಗೆ ಉದ್ಘಾಟನೆ:  ಶನಿವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಸ್ತಿಮಠದ ಶ್ರೀ ಶಾಂತಿಭೂಷಣ ಲಕ್ಷ್ಮೀಸೇನ ಭಟ್ಟಾಕರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಡಿ.ಎನ್. ಜೀವರಾಜ್ ಉದ್ಘಾಟಿಸಲಿದ್ದಾರೆ. ಸಂಸದ ಜಯಪ್ರಕಾಶ ಹೆಗಡೆ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಶಾಸಕ ಸಿ.ಟಿ.ರವಿ ಮುಂತಾದವರು ಭಾಗವಹಿಸಲಿದ್ದಾರೆ.
ಸಮಾರೋಪ:  ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ. ರಾಜ್ಯ ಕೃಷಿ, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ಮುಂತಾದವರು ಭಾಗವಹಿಸಲಿದ್ದಾರೆ. ಎರಡು ದಿನಗಳ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಕೃಷಿಗೆ ಪೂರಕ ವಿಚಾರಗಳ ಮೇಲೆ ತಜ್ಞರು ಭಾಗವಹಿಸುವ ಒಟ್ಟು 4  ಗೋಷ್ಠಿಗಳು ನಡೆಯಲಿದೆ.
50ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಜಾನುವಾರುಗಳ ಪ್ರದರ್ಶನ ಹಾಗೂ ಸ್ಪರ್ಧೆ, ವಿವಿಧ ತಳಿಗಳ ಶ್ವಾನ ಸ್ಫರ್ಧೆ, ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಿಂದ ಕ್ಷೇತ್ರಮಟ್ಟದ ಜಾನಪದ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಮಹಿಳಾ ಗೋಷ್ಠಿ:  ಚಿಕ್ಕಮಗಳೂರು ಜಿಲ್ಲೆಯಲ್ಲೇ ಪ್ರಥಮವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೃಷಿ ಮಹಿಳಾ ಗೋಷ್ಠಿ ಏರ್ಪಡಿಸಲಾಗಿದೆ. ಎರಡು ದಿನಗಳಲ್ಲಿ ಒಟ್ಟು 13000 ಜನರು ಸೇರುವ ನಿರೀಕ್ಷೆ ಇದೆ. ಸಹಕಾರ ಸಾರಿಗೆ ಮತ್ತು ಕೆಕೆಬಿ ಬಸ್ಸುಗಳಲ್ಲಿ ಕೃಷಿ ಉತ್ವವಕ್ಕೆ ಆಗಮಿಸುವವರು ಗುರುತಿನ ಪತ್ರ ನೀಡಿದರೆ ಶೇ.30 ರಷ್ಟು ರಿಯಾಯ್ತಿ ದರದಲ್ಲಿ ಪ್ರಯಾಣಿಸಬಹುದಾಗಿದೆ. ಕೃಷಿ ಉತ್ಸವಕ್ಕೆ ಎಲ್ಲಾ ಕೃಷಿಕರು ಆಗಮಿಸಬೇಕು ಎಂದರು.
ಯೋಜನಾಧಿಕಾರಿ ಹಾಗೂ ಕೃಷಿ ಉತ್ಸವ ಸಮಿತಿ ಕಾರ್ಯದರ್ಶಿ ಕು.ಉಮಾವತಿ ತಿಳಿಸಿದರು. ಸಾಗತ ಸಮಿತಿ ಗೌರವಾಧ್ಯಕ್ಷ ನೀಲೇಶ್, ಉಪಾಧ್ಯಕ್ಷ ಪ್ರಶಾಂತ ಶೆಟ್ಟಿ, ಕೋಶಾಧಿಕಾರಿ ಕೆ.ವಿ. ವಸಂತಕುಮಾರ್, ಭೀಮನರಿ ಪ್ರಶಾಂತ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.