ಚಿಕ್ಕಮಗಳೂರು

20 ನಿಮಿಷ 20 ಸುದ್ದಿ

Published On :

'ಕ್ರಿಯಾಶೀಲತೆಗೆ ಆದ್ಯತೆ ಇರಲಿ'
ಕೊಪ್ಪ:  ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಇಲ್ಲದಿದ್ದಲ್ಲಿ ಖಿನ್ನತೆ ಆವರಿಸಿ ಎಲ್ಲಾ ರಂಗದಲ್ಲಿ ವಿಫಲತೆ ಹೊಂದುವ ಅಪಾಯವಿದೆ. ಕಲಿಕೆ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿ,  ಕ್ರಿಯಾಶೀಲರಾಗುವಂತೆ ಶಾರದಾ ವಿದ್ಯಾಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಕಳಸಪ್ಪ ಹೇಳಿದರು. ಇಲ್ಲಿನ ಶಾರದಾ ವಿದ್ಯಾಮಂದಿರದಲ್ಲಿ ಶುಕ್ರವಾರ ನಡೆದ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ತಹಸೀಲ್ದಾರ್ ಶ್ರೀಧರಮೂರ್ತಿ ಪಂಡಿತ್ ಮಾತನಾಡಿದರು. ರಾಷ್ಟ್ರೀಯ ಪೈಕಾ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತನಾದ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿ ತಿಲಕ್ ಆರ್. ಕೊಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ಎಸ್.ಆರ್. ಪ್ರಿಯಾಂಕ್, ಶ್ವೇತಾ, ಅಭಿಷೇಕ್ ಎಚ್.ಎಂ. ಅವರಿಗೆ ಉದ್ಯಮಿ ನವೀನ್ ಜೈನ್ ನೀಡಿರುವ ನಿರ್ಮಲಮ್ಮ ಸ್ಮಾರಕ ದತ್ತಿನಿಧಿ ಪುರಸ್ಕಾರ ನೀಡಲಾಯಿತು. ಬಾಲ ಪ್ರತಿಭೆ ಶ್ರೇಯಾ ಆರ್.ಭಟ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಕೆ.ಆರ್.ಸತೀಶ್, ಪ್ರಾಚಾರ್ಯ ಎಚ್.ಎಸ್. ಕೃಷ್ಣಕುಮಾರ್ ಮುಖ್ಯಶಿಕ್ಷಕಿ ಸರಸ್ವತಿ, ತೀರ್ಪುಗಾರರಾದ ಪ್ರದೀಪ್, ರಜಾಕ್, ಸಾಫಲ್ ಸ್ಫೂರ್ತಿ ಮುಂತಾದವರಿದ್ದರು.

ಇಂದು ದೇಗುಲ ಪ್ರಾರಂಭೋತ್ಸವ
ಬೀರೂರು: ಪಟ್ಟಣದ ಬೇಟೆ ರಂಗನಾಥಸ್ವಾಮಿಯ ನೂತನ ದೇವಾಲಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಹುಲಬೆಂಕಿ ಬೀರಲಿಗೇಂಶ್ವರಸ್ವಾಮಿ, ಗ್ರಾಮದೇವತೆ ಅಂತರಘಟ್ಟಮ್ಮ, ಚೋಮದೇವ, ಬಾಣಪ್ಪ ಮತ್ತು ಗರ್ಜೆಯ ಅರಕಲಮ್ಮನವರ ದೇವರುಗಳ ಭಾನುವಾರ ಆಹ್ವಾನದೊಂದಿಗೆ ಪ್ರತಿಷ್ಠಾಪನೆ ನಡೆಯಲಿದೆ.  9ರಂದು ಮಹಾಮಂಗಳಾರತಿ, ತೀರ್ಥ ಪ್ರಸಾದ, ಸಂಜೆ  6.30ಕ್ಕೆ 108 ಕಳಸ ಪ್ರತಿಷ್ಟಾಪನೆ, ಮಹಾಪೂಜೆ,ಮಹಾಮಂಗಳಾರತಿ ನಡೆಯಲಿದೆ. ಫೆ10ರ ಸೋಮವಾರ ಬೆಳಗ್ಗೆ  ಕಲಾಹೋಮ  ಕುಂಭಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ, ಅನ್ನ ಸಂತರ್ಪಣೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹೆಬ್ಬಾಳದ ರಾಮರೂಢ ಸ್ವಾಮಿ ಮಠದ ಸದ್ಗುರು ಸಹಜಾನಂದ ಸರಸ್ವತಿ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ.  ಧಾರ್ಮಿಕ ಸಮಾರಂಭವನ್ನು ಶಾಸಕ ವೈ.ಎಸ್.ವಿ. ದತ್ತ ಉದ್ಘಾಟಿಸಲಿದ್ದಾರೆ. ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ.ಎಸ್. ರಾಮಚಂದ್ರಪ್ಪ, ಗೌರಾವಾಧ್ಯಕ್ಷ ಬಿ.ವಿ. ಜಯರಾಂ ಅಧ್ಯಕ್ಷತೆ ವಹಿಸಲಿದ್ದಾರೆ.  ಉಪನ್ಯಾಸಕ ಎಚ್.ಎಂ. ನಾಗರಾಜರಾವ್ ಉಪನ್ಯಾಸ ನೀಡಲಿದ್ದಾರೆ ಎಂದು ಗಂಗಾಮತಸ್ಥರ ಸಂಘ, ಬೇಟೆ ರಂಗನಾಥ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಕೋರಿದೆ.

ಸಂಪೂರ್ಣ ಸೌರಶಕ್ತಿ ಗ್ರಾಮ ಲಕ್ಯಾ
ಚಿಕ್ಕಮಗಳೂರು: ಲಕ್ಯಾ ಗ್ರಾಮ ಸಂಪೂರ್ಣ ಸೌರಶಕ್ತಿ ಗ್ರಾಮವಾಗಿಸಬೇಕೆಂದು ಕಾವೇರಿ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು, ಕೊಡಗು ಪ್ರಾದೇಶಿಕ ವ್ಯವಸ್ಥಾಪಕ ಎಚ್.ಎಸ್. ಗುರುನಾಥ ಕರೆ ನೀಡಿದ್ದಾರೆ. ಕಾವೇರಿ ಗ್ರಾಮೀಣ ಬ್ಯಾಂಕ್ ಇತ್ತೀಚೆಗೆ ಹಮ್ಮಿಕೊಂಡಿರುವ ಉಳಿತಾಯ ಖಾತೆ ಸಂಗ್ರಹಣಾ ಅಭಿಯಾನದ ಅಂಗವಾಗಿ ಲಕ್ಯಾ ಗ್ರಾಮದ ಗೌರಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಗ್ರಾಮಸ್ಥರ ಸಭೆಯಲ್ಲಿ 52 ಮನೆಗಳಿಗೆ ಸೌರ ದೀಪಕ್ಕಾಗಿ ನೆರವು ವಿತರಿಸಿ ಅವರು ಮಾತನಾಡಿದರು. ವಿದ್ಯುತ್ ಶಕ್ತಿ ಅಭಾವ ಎಲ್ಲೆಡೆ ಸಾರ್ವತ್ರಿಕವಾಗಿದೆ. ಮಳೆಯ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆ ನಿರೀಕ್ಷೆಯಷ್ಟು ಆಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ ಪೂರೈಕೆ ನಿಯಮಿತವಾಗಿರುವುದಿಲ್ಲ. ಬದಲಿ ಇಂಧನಗಳ ಬಳಕೆ ಅನಿವಾರ್ಯ. ಪ್ರಕೃತಿದತ್ತವಾಗಿ ಸಿಗುವ ಸೂರ್ಯಶಕ್ತಿ ಬಳಸಿ ವಿದ್ಯುತ್ ದೀಪ ಬೆಳಗಿಸಿಕೊಳ್ಳುವುದರಿಂದ ಪವರ್ ಕಟ್ ಕಾಟ ತಪ್ಪಿಸಿಕೊಳ್ಳಬಹುರು. ಬೇಸಿಗೆಯ ಸಂದರ್ಭ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೌರ ದೀಪಗಳು ಬಹಳಷ್ಟು ಸಹಕಾರಿ ಎಂದರು.  ಗ್ರಾಮದ ಮುಖಂಡ ಎಲ್.ಜಿ. ಶಿವಸ್ವಾಮಿ, ಈಶ್ವರಪ್ಪ, ಹಳೇ ಲಕ್ಯಾದ ಸಿದ್ದೇಗೌಡ, ಗಿರೀಶ್ ಮಾತನಾಡಿದರು.

ರಸ್ತೆ ಅಗಲೀಕರಣ: ನಾಳೆ ಪ್ರತಿಭಟನೆ
ಮೂಡಿಗೆರೆ: ಪಟ್ಟಣದ ಕಡೂರು-ಮಂಗಳೂರು ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಓಡಾಡದ ಪರಿಸ್ಥಿತಿ ಉಂಟಾಗಿದ್ದು, ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡುವಂತೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಫೆ.10 ಸೋಮವಾರದಂದು ರಸ್ತೆ ತಡೆ ನಡೆಸಲಾಗುವುದು ಎಂದು ರೈತ ಸಂಘ  ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪ ಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ರಸ್ತೆ ಅಗಲೀಕರಣ ಮಾಡುವಂತೆ ಕಳೆದ 2 ವರ್ಷದಿಂದ ನಿರಂತರ ಸಭೆ ನಡೆಸುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹೆದ್ದಾರಿ ವಿಸ್ತರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರೆ ಶಾಸಕರು ಕೇವಲ ನಾಮ್ ಕೇ ವಾಸ್ತೆ ಸಭೆ ನಡೆಸಿ ಭರವಸೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಸಿ.ಪಿ.ಐನ ಬಿ.ಕೆ.ಲಕ್ಷ್ಮಣ್ ಕುಮಾರ್ ಮಾತನಾಡಿ. ರಸ್ತೆ ಕಿರಿದಾಗಿದ್ದು, ಪಾದಾಚಾರಿಗಳು ಭಯದಲ್ಲೇ ಸಂಚರಿಸಬೇಕಾಗಿದೆ ಎಂದರು. ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು ಮಾತನಾಡಿ, ಜಿಲ್ಲಾಧಿಕಾರಿ ಮತ್ತಿತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣ ಮಾಡುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.


'ಅಡಕೆ; ಪರಿಹಾರಕ್ಕೆ ಪ್ರಯತ್ನ'
ಶೃಂಗೇರಿ: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಗೆ ಹಳದಿ ಎಲೆ ರೋಗ ತಗುಲಿ ರೈತರ ಬದುಕು ಸಂಕಷ್ಟದಲ್ಲಿರುವಾಗ ಈ ಭಾಗದ ರೈತರ ಸಮಸ್ಯೆ ಅರಿತು ಹೋರಾಟ ನಡೆಸಿ, ಸಂಸದನಾಗಿರದಿದ್ದರೂ, ಗೋರಕ್ ಸಿಂಗ್ ನಿಯೋಗ ಈ ಭಾಗಕ್ಕೆ ಬಂದು ವರದಿ ತಯಾರಿಸಲು ಕಾರಣ ಕರ್ತನಾದವನೇ ನಾನು ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು. ಅವರು ಪಟ್ಟಣದ ತಾಲೂಕು ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತಪರ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.  ಬೆಳೆಗಾರರ ಸಮಸ್ಯೆ ಅರಿವು ನನಗಿದೆ. ಅಂದಿನಿಂದಲೂ ನಿರಂತರವಾಗಿ ರೈತರ ಪರ ಹೋರಾಡುತ್ತಲೇ ಇದ್ದೇನೆ. ಸಮಸ್ಯೆ ಪರಿಹಾರಕ್ಕೆ ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಹಣಕಾಸು ಸಚಿವ ಚಿದಂಬರಂ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಈಗ ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಪ್ಯಾಕೇಜ್ ಬಗ್ಗೆ ಹೋರಾಟ ನಡೆಯುತ್ತಿದೆ. ಆದರೆ ಹಂತಹಂತವಾಗಿ ಪ್ರಯತ್ನ ಮಾಡುತ್ತಿದ್ದು, ಈಗಾಗಲೇ ಕೊಳೆರೋಗಕ್ಕೆ ಪರಿಹಾರ ಪ್ಯಾಕೇಜ್ ಬಿಡುಗಡೆಗೊಳಿಸಲಾಗಿದೆ. ಹಿಂದಿನ ಯಾವುದೇ ಸರ್ಕಾರ ಕೊಳೆರೋಗ ಪರಿಹಾರ ನೀಡಿರಲಿಲ್ಲ. ಆದರೆ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದವರು ಪ್ರಶ್ನಿಸಿದರು.

ಹಂಪ್ಸ್ ಹಾಕಿಸಲು ಒತ್ತಾಯ
ಚಿಕ್ಕಮಗಳೂರು: ನಗರದ ವಿವಿಧೆಡೆ ರಸ್ತೆಗಳಲ್ಲಿ ಹಂಪ್ಸ್ ಹಾಕಿಸುವಂತೆ ಆಗ್ರಹಿಸಿ ಜೆಡಿಎಸ್ ಮುಖಂಡ ಕೆ. ಭರತ್ ಅವರು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ದಿನದಿಂದ ದಿನಕ್ಕೆ ನಗರದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ಅದೇ ರೀತಿ ನಗರದ ಜನಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ವಾಹನಗಳ ಅಪಘಾತಗಳ ಸಂಖ್ಯೆಯೂ ಕೂಡ ಅಧಿಕವಾಗಿದೆ. ಇಲ್ಲಿನ ಎಂ.ಜಿ. ರಸ್ತೆ, ಐ.ಜಿ. ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳು ಕಿರಿದಾಗಿದ್ದು, ವಾಣಿಜ್ಯ ಮಳಿಗೆಗಳು, ನರ್ಸಿಂಗ್ ಹೋಂಗಳು, ಕಲ್ಯಾಣ ಮಂಟಪಗಳು ವಾಹನ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಂಡಿಲ್ಲ. ಪಾದಚಾರಿಗಳ ಹಾಗೂ ವಾಹನ ಚಾಲಕರ ಹಿತದೃಷ್ಟಿಯಿಂದ ಇಲ್ಲಿನ ಐ.ಜಿ. ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ, ಅಶ್ವಿನಿ ಕಾಂಪ್ಲೆಕ್ಸ್ ಮುಂಭಾಗ, ಸಿಂಡಿಕೇಟ್ ಮತ್ತು ಹನುಮಂತಪ್ಪ ಸರ್ಕಲ್, ಎ.ಐ.ಟಿ. ಸರ್ಕಲ್, ಮಲ್ಲಂದೂರು ರಸ್ತೆಯ ಖಾಸಗಿ ಬಸ್ ನಿಲ್ದಾಣಗಳಲ್ಲಿ ಜಿಗ್ ಜಾಗ್ ಉಬ್ಬು ನಿರ್ಮಿಸಿ ಎಚ್ಚರಿಕೆ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ದೇವರಾಜ್, ರಕ್ಷಿತ್, ಪ್ರಶಾಂತ್ ಹಾಜರಿದ್ದರು.

ಕುಷ್ಠರೋಗ ನಿರ್ಮೂಲನಾ ದಿನಾಚರಣೆ
ಶೃಂಗೇರಿ: ಕುಷ್ಟರೋಗ ನರಸಂಬಂಧಿತ ಕಾಯಿಲೆಯಾಗಿದ್ದು, ಇದು ಶಾಪವಲ್ಲ ಆದ್ದರಿಂದ  ಕುಷ್ಠರೋಗಿಗಳನ್ನು ಮಾನವೀಯತೆಯಿಂದ ಕಾಣಬೇಕು ಎಂದು ಡಾ. ಅನಿತ್ ಕುಮಾರ್ ತಿಳಿಸಿದರು. ಅವರು ಪಟ್ಟಣದ ಅಭಿನವ ವಿದ್ಯಾತೀರ್ಥ ಪ್ರೌಢಶಾಲಾ ಆವರಣದಲ್ಲಿ ರೋಟರಿ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದು ದೇಹದ ಯಾವುದೇ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು. ಕೆಂಪು ಮಿಶ್ರಿತ ಬಣ್ಣ, ಬೆವರದಿರುವಿಕೆ ಪ್ರಮುಖ ಲಕ್ಷಣಗಳಾಗಿವೆ. ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ವ್ಯಕ್ತಿ ಗಾಬರಿಗೊಳ್ಳುವ ಅಗತ್ಯವಿಲ್ಲ. ಆತಂಕ ಪಡದೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಬಹುದು ಎಂದರು. ರೋಟರಿ ಸಂಸ್ಥೆ ಅಧ್ಯಕ್ಷ ಡಿ. ಮಹೇಶ್ ಕಾರ್ಯಾಗಾರ ಉದ್ಘಾಟಿಸಿದರು. ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸುಧಾಕರ್, ಭಾಸ್ಕರ್ ಕುಷ್ಠರೋಗ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ನವೋದಯ ಪರೀಕ್ಷೆ: ಡಿಸಿ ಭೇಟಿ
ಚಿಕ್ಕಮಗಳೂರು: ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಶನಿವಾರ ಭೇಟಿ ನೀಡಿ ವೀಕ್ಷಿಸಿದರು. ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತಹಸೀಲ್ದಾರ್ ಶಿವೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮತ್ತಿತರ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ವೀಕ್ಷಣೆ ನಡೆಸಿದರು. ಬಾಳೆಹೊನ್ನೂರು ಸೀಗೋಡಿನ ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ 15 ಕೇಂದ್ರಗಳಲ್ಲಿ ಒಟ್ಟು 3629 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅವರಲ್ಲಿ 3372 ಜನ ಇಂದು ಹಾಜರಿದ್ದಾರೆ ಎಂದರು. 15 ಪರೀಕ್ಷಾ ಕೇಂದ್ರಗಳಿಗೆ 186 ಕೊಠಡಿ ಮೇಲ್ವಿಚಾರಕರು, 15 ಜನ ಪರೀಕ್ಷಾ ಅಧೀಕ್ಷಕರು, 15 ಜನ ವೀಕ್ಷಕರು, 8 ಜನ ಮೇಲ್ವಿಚಾರಕರಾಗಿ ಬಿಇಒರಿಗಳನ್ನು ನೇಮಿಸಲಾಗಿದ್ದು, ಇವರಿಗೆ ಮಾರ್ಗದರ್ಶನರಾಗಿ ಡಿಡಿಪಿಐ ನೇಮಕಾತಿ ಮಾಡಲಾಗಿದೆ ಎಂದರು. ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ದೆಹಲಿಯವರು ಮೇ ತಿಂಗಳಲ್ಲಿ ಪ್ರಕಟಿಸಲಿದ್ದಾರೆ ಎಂದರು.

ರಾಜಕೀಯಕ್ಕೆ ಉತ್ಸವ: ಅಸಮಾಧಾನ
ನರಸಿಂಹರಾಜಪುರ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕೃಷಿಕರಿಗೆ ಉತ್ತೇಜನ ನೀಡುವ ಸಲುವಾಗಿ ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕೃಷಿ ಉತ್ಸವ ಉದ್ಘಾಟನಾ ಸಮಾರಂಭವನ್ನು ವಿವಿಧ ಪಕ್ಷಗಳ ಜನಪ್ರತಿನಿಧಿಗಳು ವಿರೋಧ ಪಕ್ಷಗಳನ್ನು ಟೀಕಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ವೇದಿಕೆಯನ್ನು ಬಳಸಿಕೊಂಡಿದ್ದು, ಆಯೋಜಕರಿಗೆ, ರೈತರಿಗೆ ಅಸಮಾಧಾನ ತಂದಿದೆ. ಪಕ್ಷತೀತವಾದ ಕೃಷಿ ಉತ್ಸವ ಯಾವುದೇ ರಾಜಕೀಯ ಕಾರ್ಯಕ್ರಮವಾಗಿರಲಿಲ್ಲ. ಆದರೂ, ಜನಸ್ತೋಮ ಕಂಡ ಜನಪ್ರತಿನಿಧಿಗಳಿಗೆ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬೇರೆ ಪಕ್ಷಗಳ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರೂ, ಲೆಕ್ಕಿಸದೆ ಟೀಕಾ ಪ್ರಹಾರ ನಡೆಸಿದರು.
ಆಯೋಜಕರಿಗೆ ಮುಜುಗರ: ಕೃಷಿಕರ ಸಮಸ್ಯೆಗೆ ಆರೋಗ್ಯಕರ ಚರ್ಚೆ ನಡೆಸಿ ಪರಿಹಾರ ಕಂಡಕೊಳ್ಳಬೇಕಾಗಿದ್ದ ವೇದಿಕೆ ರಾಜಕೀಯ ಸಮರದ ವೇದಿಕೆಯಾಗಿ ಮಾರ್ಪಾಟಾಗಿ ಕಾರ್ಯಕ್ರಮ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯಸ್ಥರು ಮುಜುಗರ ಅನುಭವಿಸಬೇಕಾಯಿತು.

11ರಂದು ನಗರಕ್ಕೆ ಶೃಂಗೇರಿಶ್ರೀ
ಚಿಕ್ಕಮಗಳೂರು:  ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ  ಮಹಾಸ್ವಾಮಿಗಳು ಫೆ.11ರಂದು ನಗರಕ್ಕೆ ಅಗಮಿಸಲಿದ್ದಾರೆ. ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ಸಂಜೆ 5 ಗಂಟೆಗೆ ಆಗಮಿಸುವ ಶ್ರೀಗಳನ್ನು ಬಸವನಹಳ್ಳಿ ಮಾಧ್ಯಮಿಕ ಶಾಲಾವರಣದಲ್ಲಿ ಮಂಗಳವಾದ್ಯ, ವೇದಘೋಷ ಮತ್ತು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ನಂತರ ಶ್ರೀಗಳು ಬಸವನಹಳ್ಳಿ ಮುಖ್ಯ ರಸ್ತೆ ಮೂಲಕ ಶಂಕರಮಠಕ್ಕೆ ಆಗಮಿಸಲಿದ್ದು, ಶ್ರೀಗಳಿಗೆ ಧೂಳಿ ಪಾದಪೂಜೆ ನಡೆಸಲಾಗುವುದು. ರಾತ್ರಿ 8.30 ಕ್ಕೆ ಶ್ರೀಗಳು ಚಂದ್ರಮೌಳೇಶ್ವರ ವಿಗ್ರಹಕ್ಕೆ ಪೂಜೆ ನೆರವೇರಿಸುವರು. ಮರುದಿನ ಬುಧವಾರ ಶ್ರೀಗಳು ಸಮೀಪದ ರಾಂಪುರಕ್ಕೆ ತೆರಳಿ ಅಲ್ಲಿ ನೂತನವಾಗಿ ನಿರ್ಮಿಸಿರುವ ಈಶ್ವರ ದೇವಾಲಯದ ಕುಂಬಾಭಿಷೇಕದಲ್ಲಿ ಭಾಗವಹಿಸಲಿದ್ದಾರೆ.
ಕ್ರೀಡಾಭಾರತಿಗೆ ವಿಧ್ಯುಕ್ತ ಚಾಲನೆ
ಶಿವಮೊಗ್ಗ: ಕ್ರೀಡಾಭಾರತಿ ರಾಷ್ಟ್ರೀಯ ಸಂಸ್ಥೆಯ ಶಿವಮೊಗ್ಗ ಘಟಕಕ್ಕೆ ಇತ್ತೀಚೆಗೆ ವಿಧ್ಯುಕ್ತ ಚಾಲನೆ ದೊರೆಯಿತು. ಇಲ್ಲಿನ ಕೋಟೆ ರಸ್ತೆ ವಾಸವಿ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎನ್.ಎಲ್. ನಾಯಕ್ ಕ್ರೀಡಾಭಾರತಿ ಘಟಕ ಉದ್ಘಾಟಿಸಿದರು.

ಗ್ರಾಮೀಣ ಕ್ರೀಡೆ ಸಂಸ್ಕೃತಿಯ ಪ್ರತೀಕ
ಚಿಕ್ಕಮಗಳೂರು: ಹಳ್ಳಿಗಾಡಿನ ಪ್ರದೇಶಗಳಲ್ಲಿ ಕಬ್ಬಡಿ, ವಾಲಿಬಾಲ್, ಕುಸ್ತಿಯಂತಹ ಗ್ರಾಮೀಣ ಕ್ರೀಡೆಗಳು ನಡೆಯುತ್ತಿರುವುದರಿಂದ ನಮ್ಮ ಸಂಸ್ಕೃತಿ ಜೀವಂತವಾಗಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ಸ್ವಾಮಿ ವಿವೇಕಾನಂದರ 150 ನೇ ವಷಾಚರಣೆ ಅಂಗವಾಗಿ ತಾಲೂಕಿನ ಕೆರೆಮಕ್ಕಿ ಗ್ರಾಮದ ಆಟದ ಮೈದಾನದಲ್ಲಿ ಬೈಗೂರು ಮತ್ತು ಕೆರೆಮಕ್ಕಿ ಗ್ರಾಮಸ್ಥರ ಸಹಕಾರದಲ್ಲಿ ಸ್ಥಳೀಯ ಯುವಕರು ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಕೆರೆಮಕ್ಕಿ ಮಹೇಶ್ ಮಾತನಾಡಿ, ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ಹೊನಲು ಬೆಳಕಿನ ಪಂದ್ಯಾವಳಿ ಆಯೋಜಿಸಿದ್ದು, ಜಿಲ್ಲೆಯ 13 ತಂಡಗಳು ಭಾಗವಹಿಸಿವೆ. ಜಿಲ್ಲಾಮಟ್ಟದ ಕ್ರೀಡೆಯ ಮೂಲಕ ಗ್ರಾಮೀಣ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಈ ಕ್ರೀಡೆ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ 25000, ದ್ವಿತೀಯ ಬಹುಮಾನ 15000 , ಆಕರ್ಷಕ ಟ್ರೋಫಿ ನೀಡಿ ವಿಜೇತ ತಂಡಗಳನ್ನು ಗೌರವಿಸಲಾಗುವುದೆಂದರು.  ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ, ತರಬೇತುದಾರರಾದ ವಿನುತಾ, ಮುಖಂಡರಾದ ಶ್ರೀಧರ್, ಶ್ರೀನಿಧಿ, ಶಾಂತೇಗೌಡ, ಮಂಜುನಾಥ್, ರಮೇಶ್ ಇದ್ದರು.

ವಿಗ್ರಹ ಪುನರ್ ಪ್ರತಿಷ್ಠಾಪನೆ
ಚಿಕ್ಕಮಗಳೂರು: ಇಲ್ಲಿನ ಗವನಹಳ್ಳಿಯಲ್ಲಿ ಸುಮಾರು 40 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಲಿಂಗೇಶ್ವರಸ್ವಾಮಿಯ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ, ಜಗದ್ಗುರುಗಳಾದ ಶೃಂಗೇರಿ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಫೆ.12 ರಂದು ದೇವಾಲಯ ಲೋಕಾರ್ಪಣೆಗೊಳ್ಳಲಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ. ಗವನಹಳ್ಳಿಯ ಈ ದೇವಾಲಯ ಪುರಾತನ ಕಾಲದ್ದಾಗಿದ್ದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸ್ಥಳೀಯ ಸಾಮಿಲ್ ಮಾಲೀಕರು, ಗವನಹಳ್ಳಿ, ಶ್ರೀನಿವಾಸ ನಗರ, ರಾಂಪುರ, ಶಕ್ತಿನಗರ, ತೇಗೂರು ಸೇರಿದಂತೆ ಈ ಭಾಗದ ಸುತ್ತ ಮುತ್ತಲ ಗ್ರಾಮಸ್ಥರು ನೀಡಿದ ಸಹಾಯಹಸ್ತದಿಂದ ದೇವಾಲಯ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುರು ಪ್ರಾರ್ಥನೆ, ಗಣಪತಿಹೋಮ, ಪುಣ್ಯಾಹ, ಸಂಕಲ್ಪ, ಕಳಶ ಸ್ಥಾಪನೆ ಸೇರಿದಂತೆ ಫೆ.10 ರಿಂದ ಆರಂಭವಾಗುವ ಪೂಜಾಕೈಂಕರ್ಯಗಳು ಫೆ. 12 ರಂದು ಪ್ರತಿಷ್ಠಾಂಗಹೋಮದೊಂದಿಗೆ ಆರಂಭವಾಗಿ ಶೃಂಗೇರಿ ಶ್ರೀಗಳ ಆಗಮನದ ನಂತರ, ಪ್ರಾಣ ಪ್ರತಿಷ್ಠೆ ಮಹಾಮಂಗಳಾರತಿ ಮೂಲಕ ದೇವಾಲಯ ಜೀರ್ಣೋದ್ಧಾರ ಕಾರ್ಯವಾಗಲಿದೆ.

ಇಂದು ಕಾಫಿ ಫೌಂಡೇಷನ್ ಉದ್ಘಾಟನೆ
ಚಿಕ್ಕಮಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅರಳುಗುಪ್ಪೆ ಗೌರಮ್ಮ ಬಸವೇಗೌಡರು ಸ್ಥಾಪಿಸಿರುವ  ಯೂನಿವರ್ಸಲ್ ಕಾಫಿ ಫೌಂಡೇಷನ್ 9.9.9. ಭಾನುವಾರ ಲೋಕಾರ್ಪಣೆಗೊಳ್ಳಲಿದೆ. 2 ಕೋಟಿ ಠೇವಣಿಯಿರಿಸಿ ವಾರ್ಷಿಕ ಬಡ್ಡಿಯನ್ನು ಶಿಕ್ಷಣ, ಕ್ರೀಡೆ, ಸಾಹಿತ್ಯ, ನೈರ್ಮಲ್ಯ, ಪುರಾತನ ದೇವಾಲಯಗಳ ಜೀರ್ಣೋದ್ಧಾರದಂತಹ ಸೇವಾ ಕಾರ್ಯಗಳಿಗೆ ವಿನಿಯೋಗಿಸುವ ಮಹತ್ವದ ಯೋಜನೆ ಫೌಂಡೇಷನ್ ಹೊಂದಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ವಿಶೇಷ ಯೋಜನೆ ಹೊಂದಲಾಗಿದೆ ಎಂದು ಗೌರಮ್ಮ ಬಸವೇಗೌಡ ತಿಳಿಸಿದ್ದಾರೆ. ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಆಟದ ಮೈದಾನದಲ್ಲಿ ವಿಶೇಷ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ವಿಶ್ರಾಂತ ಲೋಕಾಯುಕ್ತ ನಾಡೋಜ ಸಂತೋಷ ಹೆಗ್ಡೆ ಅವರು ಕಾಫಿ ಫೌಂಡೇಷನ್ ಲೋಕಾರ್ಪಣೆಗೊಳಿಸುವರು. ಶಾಸಕ ಸಿ.ಟಿ. ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮತ್ತು ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಶೇಖರಪ್ಪ, ಜಿಲ್ಲಾ ಎಸ್ಪಿ ಆರ್. ಚೇತನ್, ಕಾಫಿ ಬೆಳೆಗಾರರಾದ ಶಾಂತಮಲ್ಲೇಗೌಡ, ರೇಣುಕಾರ್ಯ ಇರುವರು.

ಕೈತೋಟ, ತಾರಸಿ ತೋಟ ಅನುಷ್ಠಾನ
ಶಿವಮೊಗ್ಗ: ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮವನ್ನು ಜಿಲ್ಲೆಯ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮದಡಿ ತರಕಾರಿ, ಹಣ್ಣು ಉತ್ಪಾದನೆ ಬಗ್ಗೆ ನಗರವಾಸಿಗಳಿಗೆ ಮಾಹಿತಿ ನೀಡಿ ತರಕಾರಿ ಬೆಳೆಯಲು ಸೂಕ್ತ ತಾಂತ್ರಿಕ ಮಾರ್ಗದರ್ಶನ ನೀಡಿ ಇಲಾಖೆಯಿಂದಲೇ ಸಣ್ಣ ಪ್ರಮಾಣದಲ್ಲಿ ತರಕಾರಿ ಬೀಜಗಳು ಮತ್ತು ಬಯೋವುಕ್ಸ್ (ಪಾಟಿಂಗ್ ಮಿಕ್ಸರ್) ನೀಡಲಾಗುವುದು. ಮನೆಯ ಹತ್ತಿರ ಕೈತೋಟಗಳಲ್ಲಿ ಅಥವಾ ತಾರಸಿ ಮೇಲೆ ತರಕಾರಿ ಬೆಳೆಯಲಿಚ್ಛಿಸುವ ಅವಕಾಶವಿರುವ ಆಸಕ್ತ ನಗರವಾಸಿಗಳು ತಮ್ಮ ಹೆಸರನ್ನು ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ತಾಂತ್ರಿಕ ಸಹಾಯಕ ವೆಂಕಟೇಶ್ ಭದ್ರಾವತಿ, ಮೊ. 9900046094, ನಂದಿನಿ ಶಿವಮೊಗ್ಗ, ಮೊ. 9900046115 ಅಥವಾ ದಿನಕರ ಜಾಧವ್, ಮೊ. 7259032362 ಸಂಪರ್ಕಿಸಬಹುದು.

ನಾಳೆ ಪ್ರಮಾಣಪತ್ರ: ರೈ
ಶಿವಮೊಗ್ಗ: ಎಸ್.ಆರ್. ಹಿರೇಮಠ್ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಮಾರ್ಚ್ 10ರಂದು ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರಿಸುತ್ತಾ, ರಾಜ್ಯದಲ್ಲಿ 2.05 ಲಕ್ಷ ಎಕರೆ ಅರಣ್ಯ ಒತ್ತುವರಿ ಆಗಿದೆ. ಈ ಒತ್ತುವರಿ ತೆರವಿಗೆ ಮಾಸ್ಟರ್ ಪ್ಲಾನ್ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದರು.
ಸಂಪುಟ ಉಪ ಸಮಿತಿ ರಚನೆ: ಅರಣ್ಯ ಹಾಗೂ ಕಂದಾಯ ಇಲಾಖೆಗಳು ಗಡಿ ಗುರುತಿಸುವಿಕೆಗೆ ಜಂಟಿ ಸಮೀಕ್ಷೆ ನಡೆಸಲು ಮುಂದಾಗಿವೆ. ಈ ಕಾರ್ಯ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದ ಸಚಿವರು, ಸಿ ಮತ್ತು ಡಿ ಭೂಮಿ, ಬಗರ್ ಹುಕುಂ ಹಾಗೂ ಒತ್ತುವರಿ ಸಮಸ್ಯೆ ಪರಿಶೀಲನೆಗೆ ಸರ್ಕಾರವು ಈಗಾಗಲೇ ಸಂಪುಟ ಉಪ ಸಮಿತಿ ರಚಿಸಿದೆ ಎಂದು ತಿಳಿಸಿದರು. ಕಸ್ತೂರಿ ರಂಗನ್ ವರದಿಯ ಸಮಗ್ರ ಅಧ್ಯಯನ ದೃಷ್ಟಿಯಿಂದ ಸಮಿತಿ ರಚಿಸಲಾಗಿದೆ. ವರದಿಯ ಸಾಧಕ ಬಾಧಕಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ರಾ.ಹೆ. ದುರಸ್ತಿ ಶೀಘ್ರ ಪೂರ್ಣ
ಮೂಡಿಗೆರೆ: ರಾ.ಹೆ.234ರ ರಸ್ತೆ ಡಾಂಬರೀಕರಣ, ಚರಂಡಿ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸಕಲೇಶಪುರದ ಶಿರಾಡಿ ಘಾಟಿ ರಸ್ತೆಯ ಇನ್ನೊಂದು ಭಾಗದ ಕಾಮಗಾರಿ ಇನ್ನು ಹದಿನೈದು ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅಷ್ಟರಲ್ಲಿ ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದರೊಂದಿಗೆ ಘಾಟಿಯಲ್ಲಿ ಚಲಿಸುವ ವಾಹನಗಳು ಮೂಡಿಗೆರೆ - ಕೊಟ್ಟಿಗೆಹಾರ -ಚಾರ್ಮಾಡಿ ಘಾಟ್ ಮುಖಾಂತರ ಚಲಿಸಲಿದೆ.  ಚಾರ್ಮಾಡಿ ಘಾಟಿಯ ಮೂಡಿಗೆರೆ ವ್ಯಾಪ್ತಿಯ ಕಾಮಗಾರಿ ಸೋಮನಕಾಡಿನ ಬಳಿಯಿಂದ ಪ್ರಾರಂಭವಾಗಿದ್ದು, ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ನ ವರೆಗೆ ನಡೆಯಲಿದೆ ಎಂದು ಕಿರಿಯ ಎಂಜಿನಿಯರ್ ದಿನೇಶ್ ಮಾಹಿತಿ ನೀಡಿದರು.
ನಾಳೆ ಪ್ರತಿಷ್ಠಾಪನೆ
ನರಸಿಂಹರಾಜಪುರ: ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಿರುವ ಕರಿಬಸವೇಶ್ವರ ದೇವಸ್ಥಾನ ಪ್ರತಿಷ್ಠಾಪನಾ  ಮಹೋತ್ಸವ ಫೆ. 8ರ ಶನಿವಾರದಿಂದ ಪ್ರಾರಂಭಗೊಂಡಿದ್ದು, ಫೆ.10 ರ ಸೋಮವಾರದವರೆಗೆ ನಡೆಯಲಿದೆ. ಶನಿವಾರ ಸಂಜೆ 5 ಗಂಟೆಗೆ ಕಲಶ ಪ್ರತಿಷ್ಠೆ, ದೇವತಾ ಆವಾಹನೆ, ವಾಸ್ತು ಮಂಡಲ ಪೂಜೆ ಮೊದಲಾದ ಕಾರ್ಯಕ್ರಮ ನಡೆಯಿತು.

24ರಿಂದ ಕೊಪ್ಪ ಸಾಹಿತ್ಯ ಸಮ್ಮೇಳನ
ಕೊಪ್ಪ:  ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ.24 ಮತ್ತು 25 ರಂದು ಬಸರಿಕಟ್ಟೆ ಸದ್ಗುರು ಪ್ರೌಢಶಾಲಾ ಆವರಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೃಷಿ ತಜ್ಞ ಡಾ. ಜಿ.ಎಸ್. ಮಹಾಬಲ ಆಯ್ಕೆಯಾಗಿದ್ದಾರೆ. ಬಸರಿಕಟ್ಟೆಯಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ ಪರಿಷತ್ ಪೂರ್ವಭಾವಿ ಸಭೆಯಲ್ಲಿ ಇವರ ಆಯ್ಕೆ ಪ್ರಕಟಿಸಲಾಯಿತಲ್ಲದೆ, ಶಾಸಕ ಡಿ.ಎನ್. ಜೀವರಾಜ್ ಗೌರವಧ್ಯಕ್ಷರಾಗಿರುವ ಸ್ವಾಗತ ಸಮಿತಿಗೆ ಬಾಳೆಮನೆ ನಟರಾಜ್, ಕಳಸಪ್ಪ, ಎಸ್.ಎನ್. ರಾಮಸ್ವಾಮಿ, ಎಚ್.ಎಂ. ಸತೀಶ್ ಉಪಾಧ್ಯಕ್ಷರಾಗಿದ್ದರೆ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸದ್ಗುರು ಪ್ರೌಢಶಾಲೆ ಕಾರ್ಯದರ್ಶಿ ಜಿ.ಸಿ.ಗೋಪಾಲಕೃಷ್ಣ, ಸಂಪನ್ಮೂಲ ಸಮಿತಿಯಲ್ಲಿ ಜಿ.ಪಂ. ಸದಸ್ಯ ಕುಕ್ಕಡಿಗೆ ರವೀಂದ್ರ, ತಲವಾನೆ ಪ್ರಕಾಶ್, ಎಂ.ಆರ್. ಪದ್ಮನಾಭ ಒಳಗೊಂಡ ಸಮತಿ ಕಾರ್ಯನಿರ್ವಹಿಸಲಿದೆ. ಪರಿಷತ್ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನ ಅಂಗವಾಗಿ ಬಸರಿಕಟ್ಟೆ ಜನಾರ್ಧನಸ್ವಾಮಿ ದೇವಸ್ಥಾನದಿಂದ ಹೊರಡುವ ಭುವನೇಶ್ವರಿದೇವಿ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಕವಿಗಳು, ಬಸ್ರಿಕಟ್ಟೆ ಗೋಪಾಲ್, ಎಚ್.ಎಸ್. ಇನೇಶ್ ಹಾಗೂ ಬಿ.ಆರ್. ಕಿರಣ್‌ರಲ್ಲಿ ನೋಂದಾಯಿಸಲು ಕೋರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.