ಚಿಕ್ಕಮಗಳೂರು

ಮೋದಿ ಸಾಧನೆ ಮನೆಮನೆಗೆ ಮನವರಿಕೆ

Published On :

ಕ.ಪ್ರ.ವಾರ್ತೆ, ಕಡೂರು, ಫೆ.11
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಹಗರಣಗಳ ದುರಾಡಳಿತ ಮತ್ತು ನರೇಂದ್ರ ಮೋದಿ ಅವರ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವು ಕಡೂರು ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕಡೂರು ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ ಹೇಳಿದರು.
ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನೆ ಮನೆಗೆ ಬಿಜೆಪಿ ಕಾರ್ಯಕ್ರಮವು ಆರಂಭದಿಂದಲೂ ಉತ್ತಮವಾಗಿ ನಡೆಯುತ್ತಿದೆ. ಜನರಿಗೆ ಕರಪತ್ರದ ಮೂಲಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಪರವಾಗಿ ಮಾಡಿದ ಸಾಧನೆ ಮತ್ತು ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಮನವರಿಕೆ ಮಾಡುವ ಕಾರ್ಯಕ್ರಮವು ಶೇ.50ರಷ್ಟು ಮುಗಿದಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಅಭಿಯಾನ ಮುಕ್ತಾಯವಾಗಲಿದೆ ಎಂದರು.
ಬಿಜೆಪಿಗೆ ಶಕ್ತಿ ತುಂಬಬೇಕು:  ಪಂಡಿತ್ ದೀನ್ ದಯಾಳ್ ಅವರ ತ್ಯಾಗದಿಂದ ಹುಟ್ಟಿದ ಬಿಜೆಪಿಯು ಇಂದು ದೇಶಾದ್ಯಂತ ಇರುವ ಬಡವರು ಹಾಗೂ ಜನಸಾಮಾನ್ಯರಿಗೆ ಬಿಜೆಪಿಯೇ ಉತ್ತಮ ಪಕ್ಷ ಎಂಬುದು ಮನವರಿಕೆಯಾಗಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ಪಂಡಿತ್ ದೀನ್ ದಯಾಳ್ ಅವರ ಆದರ್ಶ ಅಳವಡಿಸಿಕೊಂಡು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.
ಪಕ್ಷ ಸಜ್ಜು:  ಬಿಜೆಪಿಯ ನಿಯೋಜಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಬೇಕೆಂಬ ಆಸೆಯು ಹಿರಿಯರು ಸೇರಿದಂತೆ ಯುವ ಸಮೂಹದ್ದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಜಯಭೇರಿ ಬಾರಿಸಲು ಎಲ್ಲ ರೀತಿಯಿಂದಲೂ ಪಕ್ಷವು ಸಜ್ಜಾಗುತ್ತಿದೆ ಎಂದರು.
ಬಿಜೆಪಿಯ ಯುವ ಮೋರ್ಚಾ ಘಟಕದಿಂದ ಕಡೂರು ಪಟ್ಟಣದ ಮೂರ್ನಾಲ್ಕು ಕಡೆ ಟೀ ಸ್ಟಾಲ್ ತೆರೆದು ಒಂದು ದಿನ ಉಚಿತವಾಗಿ ಟೀ ವಿತರಿಸಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಕಾರ್ಯಕ್ರಮ ಕೂಡ ಮೋರ್ಚಾದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ರಾಜೇಶ್ ಹಾಗೂ ಕಾಂತರಾಜು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ:  ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದೇ ಬಿಜೆಪಿಯ ಮೂಲ ಮಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರನ್ನು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ದುಡಿಯಬೇಕು ಎಂದರು.
ಬಿಜೆಪಿ ಮುಖಂಡ ಕೆ.ಎಚ್.ಎ. ಪ್ರಸನ್ನ ಪಂಡಿತ್ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ದೀನ್ ದಯಾಳರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡು ಸುಭದ್ರ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ಬಿ.ಸೋಮೇಶ್, ನಗರ ಮೋರ್ಚಾ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ರಾಜೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್, ಕೋಟೆ ಆನಂದ್, ತಾಲೂಕು ಕಾರ್ಯದರ್ಶಿ ಶಿವಶಂಕರ್, ಕುರುಬಗೆರೆ ಮಹೇಶ್, ಪ್ರಕಾಶ್, ಮಂಜುನಾಥ್, ಉಪಸ್ಥಿತರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.