ಚಿಕ್ಕಮಗಳೂರು

ಬಜೆಟ್ನಲ್ಲಿ ಜಿಲ್ಲೆಗೆ ಅನ್ಯಾಯ: ಖಂಡನೆ

Published On :

ಚಿಕ್ಕಮಗಳೂರು: ಬಜೆಟ್ನಲ್ಲಿ ಜಿಲ್ಲೆಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಸದನದೊಳಗೆ, ಹೊರಗೆ ಹೋರಾಟ ನಡೆಸಲಾಗುವುದು ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಜಿಲ್ಲೆಗೆ ಅನ್ಯಾಯವಾಗಿದೆ. ಇಲ್ಲಿನ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್ನ ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಇದರ ಹೊಣೆ ಹೊರಬೇಕು. ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅದನ್ನು ಸರಿಪಡಿಸುವ ಕೆಲಸ ಮಾಡಲಿ, ಇಲ್ಲದೆ ಹೋದರೆ ನಮ್ಮೊಂದಿಗೆ ಹೋರಾಟಕ್ಕೆ ಇಳಿಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಕೆಲವೆಡೆ ಮೆಡಿಕಲ್ ಕಾಲೇಜುಗಳಿದ್ದರೂ ಮತ್ತೆ ಕಾಲೇಜು ಮಂಜೂರು ಮಾಡಲಾಗಿದೆ. ಈ ಸಾಲಿನ ಬಜೆಟ್ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಗಿತ್ತು. ಹಾಲು ಒಕ್ಕೂಟಕ್ಕೂ ಹಣ ಮೀಸಲಿಡುವಂತೆ ತಿಳಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ಭರವಸೆ ನೀಡಿದ್ದರು.
ಆದರೆ, ಬಜೆಟ್ ಮಂಡಿಸಿದ ನಂತರವೇ ತಿಳಿಯಿತು ನಮ್ಮ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬುದು. ನಮ್ಮ ಜಿಲ್ಲೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಹೇಳಿದರು.
ವರ್ಗಾವಣೆ ದಂಧೆ: ಅಡಕೆ ಬೆಳೆ ಪುನಶ್ಚೇತನಕ್ಕೆ ನಮ್ಮ ಜಿಲ್ಲೆಗೆ ಬಿಡುಗಡೆಯಾಗಿದ್ದು 3.70 ಕೋಟಿ ಮಾತ್ರ. ಅಂದರೆ ಒಂದು ಹೆಕ್ಟೇರ್ಗೆ 6 ಸಾವಿರ. ಅಡಕೆ ಗಿಡವಾರು ಲೆಕ್ಕ ಮಾಡಿದರೆ ಪ್ರತಿ ಗಿಡಕ್ಕೆ 80 ನೀಡಲಾಗಿದೆ. ಜಿಲ್ಲೆಯಲ್ಲಿ ಅಡಕೆ ಬೆಳೆಗಾರರು ತುಂಬಾ ಕಷ್ಟದಲ್ಲಿದ್ದಾರೆ.
ಅವರಿಗಾಗಿ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿತ್ತು. ಇದು, ಆಳುವ ಪಕ್ಷದ ಜನಪ್ರತಿನಿಧಿಗಳ ವೈಫಲ್ಯ. ಅವರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ.
ಕಾಮಗಾರಿಗಳಲ್ಲಿ ಪರ್ಸೆಂಟೇಜ್ ರಾಜಕೀಯದಲ್ಲಿ ಮುಳುಗಿದ್ದಾರೆ. ಅಭಿವೃದ್ಧಿ ಕಾಮಗಾರಿಗೆ ತಡೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಕರ ವಸೂಲಿ ಕುಸಿತ: ರಾಜ್ಯದಲ್ಲಿ ಕರ ವಸೂಲಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈವರೆಗೆ ಶೇ.68ರಷ್ಟು ಕರ ವಸೂಲಾಗಿದೆ. ಇನ್ನು 11 ಸಾವಿರ ಕೋಟಿ ಕರ ವಸೂಲಿಯಾಗಬೇಕಾಗಿದೆ. ಮುಂದಿನ ಎರಡು ತಿಂಗಳೊಳಗೆ ಇದನ್ನು ವಸೂಲಿ ಮಾಡುವುದು ಸಾಧ್ಯವಿಲ್ಲ.
ಈ ವರ್ಷದ ಬಜೆಟ್ ನೋಡಿದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ಈಗ ನೀಡಿರುವ ಸವಲತ್ತು ಕಡಿಮೆ ಮಾಡಬೇಕು. ಇಲ್ಲದೆ ಹೋದರೆ ಸಾಲ ಮಾಡಬೇಕು. ಇದು ಕಾಂಗ್ರೆಸ್ ಪಕ್ಷಕ್ಕೆ ವೋಟಿನ ತಾತ್ಕಾಲಿಕ ಲಾಭ ಕೊಡಬಹುದು. ಆದರೆ, ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲ ಬಂದಿದೆ. ಇದನ್ನು ಎದುರಿಸಲು ಯಾವುದೇ ಕ್ರಮ ವಹಿಸಿಲ್ಲ. ಈ ಬಜೆಟ್ ನೋಡಲು ಸುಂದರವಷ್ಟೇ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.