20 ನಿಮಿಷ 20 ಸುದ್ದಿ
'ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಿ'
ಚಿಕ್ಕಮಗಳೂರು: ಮಕ್ಕಳಿಗೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಹೇಳಿದ್ದಾರೆ. ನಗರದ ಕುವೆಂಪು ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಮಂಜುಶ್ರೀ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು. ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಬಡ ಮಕ್ಕಳಿಗೆ ಸಂಸ್ಥೆ ವತಿಯಿಂದ ನೀಡಲಾದ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಭಾರತದ ಭವಿಷ್ಯವಿರುವುದು ಶಾಲೆಗಳಲ್ಲಿ, ಅಲ್ಲಿ ಮಕ್ಕಳಿಗೆ ದೊರೆಯುವ ಶಿಕ್ಷಣದ ಆಧಾರದ ಮೇಲೆ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಚ್. ಜನಾರ್ದನರಾವ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಜಗದೀಶ್, ಪೋಷಕರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಶಿಲ್ಪ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಹೆಬ್ಬಾರೆ ಸಂತೋಷ್ರಾವ್ ಸ್ವಾಗತಿಸಿದರು. ನಿರ್ಮಲ ವಂದಿಸಿದರು.
40 ಲಕ್ಷ ತೆರಿಗೆ ವಸೂಲಿ
ಚಿಕ್ಕಮಗಳೂರು: ನಗರಸಭೆಯಿಂದ ನಗರದಲ್ಲಿ ನಡೆಸುತ್ತಿರುವ ತೆರಿಗೆ ವಸೂಲಾತಿ ಆಂದೋಲನದಲ್ಲಿ ನೀರು, ಮನೆ, ಮಳಿಗೆ ಮತ್ತು ವಿವಿಧ ಕಂದಾಯಗಳು ಸೇರಿದಂತೆ 40 ಲಕ್ಷ ವಸೂಲಿ ಮಾಡಲಾಗಿದೆ ಎಂದು ಕಂದಾಯಾಧಿಕಾರಿ ಪಿ. ಗುರುಮೂರ್ತಿ ತಿಳಿಸಿದ್ದಾರೆ. ನಗರದ ಮಧುವನ ಲೇಔಟ್ ಮತ್ತು ಬಸವನಹಳ್ಳಿಯಲ್ಲಿ ಶನಿವಾರ ತೆರಿಗೆ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡು ನಂತರ ಮಾಹಿತಿ ನೀಡಿ, ಅಂಡೇಛತ್ರ, ಗವನಹಳ್ಳಿ, ಉಂಡೇದಾಸರ ಹಳ್ಳಿ ಸೇರಿದಂತೆ ಕಳೆದ 11 ದಿನಗಳಿಂದ 70ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಕಂದಾಯ ವಸೂಲಾತಿ ಆಂದೋಲನದಲ್ಲಿ ಭಾಗವಹಿಸಿ 40 ಲಕ್ಷ ಸಂಗ್ರಹಿಸಿದ್ದೇವೆ. ಸಾರ್ವಜನಿಕರು ಸ್ಪಂದಿಸುತ್ತಿದ್ದಾರೆ. ಕೆಲವರು ಸ್ವತಃ ಬಂದು ತೆರಿಗೆ ಬಾಕಿಯನ್ನು ಕಟ್ಟುತ್ತಿದ್ದಾರೆ. ಆಯಾ ವಾರ್ಡ್ಗಳಲ್ಲಿ ನಗರಸಭೆ ಸದಸ್ಯರು ಮತ್ತು ಮಾಜಿ ಸದಸ್ಯರು ಸಹಕರಿಸುತ್ತಿದ್ದಾರೆ ಎಂದು ಹೇಳಿದರು. ನಗರಸಭೆ ಮಾಜಿ ಸದಸ್ಯ ಬಿ.ಎಂ. ಸಂದೀಪ್ ಮಾತನಾಡಿ, ಸರ್ಕಾರದ ತೆರಿಗೆ ಕಟ್ಟಬೇಕಾದುದು ನಮ್ಮ ಕರ್ತವ್ಯ. ಸಾರ್ವಜನಿಕರು ಕಂದಾಯ ಕಟ್ಟಲು ಸ್ವಯಂಪ್ರೇರಿತರಾಗಿ ಬಂದು ಸಹಕರಿಸುತ್ತಿರುವುದು ಸ್ವಾಗತಾರ್ಹವಾದುದು ಎಂದರು. ಪೌರಾಯುಕ್ತ ನಾಗಭೂಷಣ್, ವ್ಯವಸ್ಥಾಪಕ ಕಾಂತರಾಜ್, ಸಿಬ್ಬಂದಿಗಳಾದ ರಮೇಶ್ ನಾಯ್ಡು, ದೀಪಕ್, ಮಮತ ಹಾಜರಿದ್ದರು.
ಸಂತ್ರಸ್ತರಿಗೆ ಚೆಕ್ ವಿತರಣೆ
ಚಿಕ್ಕಮಗಳೂರು: ದೌರ್ಜನ್ಯದಲ್ಲಿ ನೊಂದ ಪ.ಜಾತಿ, ಪ.ಪಂಗಡದವರಿಗೆ ಆರ್ಥಿಕವಾಗಿ ಸದೃಢರಾಗಿಸುವ ಉದ್ದೇಶದಿಂದ ಸರ್ಕಾರ ಪರಿಹಾರಧನ ನೀಡಲಾಗುತ್ತಿದೆ ಎಂದು ಡಿಸಿ ಬಿ.ಎಸ್.ಶೇಖರಪ್ಪ ಹೇಳಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದೌರ್ಜನ್ಯಕ್ಕೊಳಗಾಗಿ ನೊಂದ ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 45 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 37 ಪ್ರಕರಣಗಳಲ್ಲಿ ಪರಿಹಾರಧನ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. 8 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದರು. ಪಸ್ತುತ ಸಾಲಿನಲ್ಲಿ 27 ಪ್ರಕರಣಗಳಲ್ಲಿ ಈಗಾಗಲೇ ಪರಿಹಾರಧನ ವಿತರಣೆ ಮಾಡಲಾಗಿದ್ದು, ಇಂದು 16 ಪ್ರಕರಣಗಳಲ್ಲಿ 16 ಜನ ಸಂತ್ರಸ್ತರಿಗೆ 6.68 ಲಕ್ಷ ವಿತರಣೆ ಮಾಡಲಾಗುತ್ತಿದೆ ಎಂದ ಅವರು, 6 ಜನರಿಗೆ ತಲಾ 15 ಸಾವಿರ, ಒಬ್ಬರಿಗೆ 18 ಸಾವಿರ, 9 ಜನರಿಗೆ ತಲಾ 60 ಸಾವಿರ ಪರಿಹಾರಧನ ನೀಡಲಾಗುತ್ತಿದೆ. ಪರಿಹಾರದ ಹಣ ಬ್ಯಾಂಕುಗಳಲ್ಲಿ ಠೇವಣಿ ಇಟ್ಟುಕೊಳ್ಳುವುದರೊಂದಿಗೆ ಉಪಯುಕ್ತ ಸಂದರ್ಭದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಜಿಪಂ ಸಿಇಒ ಪಿ.ಬಿ. ಕರುಣಾಕರ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.
ತಾಲೂಕು ಖಜಾನೆ ಕಡತ ಪರಿಶೀಲನೆ
ಮೂಡಿಗೆರೆ: ವೃದ್ಧರು, ಅಂಗವಿಕಲರು, ನಿವೃತ್ತರು ಸೇರಿದಂತೆ ಅನೇಕರಿಗೆ ಸಹಕಾರಿ ಆಗಲೆಂದು ಸರ್ಕಾರ ನಿಮ್ಮ ಕಚೇರಿಯ ಮೂಲಕ ಹಣ ಬಿಡುಗಡೆ ಮಾಡುತ್ತದೆ. ಅದನ್ನು ಸಮರ್ಪಕವಾಗಿ ಬಿಡುಗೊಡೆಗೊಳಿಸಿ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಶೇಖ್ಹುಸೇನ್ ತಾಲೂಕು ಖಜಾನೆ ಅಧಿಕಾರಿಗಳಿಗೆ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅವರು, ತಾಲೂಕು ಖಜಾನೆ ಇಲಾಖೆಗೆ ಹಠಾತ್ ಭೇಟಿ ನೀಡಿದ ಅವರು ಕಡತಗಳನ್ನು ಪರಿಶೀಲಿಸಿ ಸಿಬ್ಬಂದಿಗಳೊಂದಿಗೆ ಅವರು ಮಾತನಾಡಿದರು. ಮೂಡಿಗೆರೆ ಖಜಾನೆ ಇಲಾಖೆಯ ಬಗ್ಗೆ ಹಲವು ದೂರುಗಳು ಬರುತ್ತಿವೆ. ಫಲಾನುಭವಿಗಳಿಂದ ಮತ್ತು ಶಿಕ್ಷಕರಿಂದ ವಿವಿಧ ಇಲಾಖೆಯ ನೌಕರರಿಂದ ಪರ್ಸೆಂಟೇಜ್ ಪಡೆಯದೆ ಹಣ ಬಿಡುಗೊಡೆಗೊಳಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಇನ್ನಾದರೂ ಪರ್ಸೆಂಟೇಜ್ ಆಮಿಷ ಪಡೆಯದೇ ಕೆಲಸ ನಿರ್ವಹಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಳಾದ ಅಶೋಕ್ ಮತ್ತು ಉಮೇಶ್ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಸ್ಪರ್ಧಿಸುವುದೇ ಮುಖ್ಯ
ಶೃಂಗೇರಿ: ವಿದ್ಯಾರ್ಥಿಗಳು ಪಠ್ಯಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆ ಮುಖ್ಯ ಎಂದು ಪ್ರಾಚಾರ್ಯ ಪ್ರೊ. ಕೆ.ಜಿ. ಸಿದ್ದಲಿಂಗೇಗೌಡ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಶಾರೀರಿಕ ಸದೃಢತೆ ಅಗತ್ಯ. ವಿದ್ಯಾಥಿಗಳು ಯೌವನದಲ್ಲಿಯೇ ಶಾರೀರಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಲಿಕೆ ಜೊತೆಗೆ ಜೀವನನುಭವವನ್ನು ಅಳವಡಿಸಿಕೊಳ್ಳಬೇಕು. ಒಳ್ಳೆಯ ಮನಸ್ಸು, ಸದೃಢ ಶರೀರದಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಕ್ರೀಡೆಗಳು ಮನುಷ್ಯನ ಸದೃಢ, ಸಮೃದ್ಧ ಬದುಕಿಗೆ ಸ್ಫೂರ್ತಿ ಆಗುತ್ತದೆ. ಕ್ರೀಡೆಗಳು ಆಚರಣೆಗಳು, ಜನರಲ್ಲಿ ಸ್ನೇಹ-ಬಾಂಧವ್ಯ ಮೂಡಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯಶಾಸ್ತ್ರ ವಿಭಾಗದ ಆಶಾಲತಾ, ಡಾ.ಹರಿಕುಮಾರ್, ರಾಜ್ಯಶಾಸ್ತ್ರ ವಿಭಾಗದ ಎನ್.ಆರ್. ಹೆಗಡೆ, ಮಮತಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಅಬ್ದುಲ್ ಕುನ್ಹಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಎಲ್ಲಾ ಕ್ಷೇತ್ರದಲ್ಲೂ ಕೆಜೆಪಿ ಸ್ಪರ್ಧೆ
ಚಿಕ್ಕಮಗಳೂರು: ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕೆಜೆಪಿ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಕೆಜೆಪಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ. 13 ಕ್ಷೇತ್ರಗಳ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮಾ.16ರ ನಂತರ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೆಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿಯ ಕುತಂತ್ರದಿಂದ ಅವರು ಹರಕೆಯ ಕುರಿಯಾಗಲಿದ್ದಾರೆ. ಯಡಿಯೂರಪ್ಪ ಈ ಚುನಾವಣೆಯಲ್ಲಿ ಗೆದ್ದರೆ ತಾವು ತಲೆ ಬೋಳಿಸಿಕೊಂಡು ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುವುದಾಗಿ ಹೇಳಿದರು. ತಮ್ಮ ಪಕ್ಷಕ್ಕೆ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಪ್ರಧಾನ ಕಾರ್ಯದರ್ಶಿ ಸಲಿಂ ಖಾನ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಉಪಸ್ಥಿತರಿದ್ದರು.
20ರಂದು ನಂದಿ ವಿಗ್ರಹ ಉದ್ಘಾಟನೆ
ಚಿಕ್ಕಮಗಳೂರು: ತುಮಕೂರಿನ ಸಿದ್ಧಲಿಂಗೇಶ್ವರಸ್ವಾಮಿ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ನಂದಿ ವಿಗ್ರಹ ಫೆ.20ರಂದು ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. 14 ಅಡಿ ಎತ್ತರ, 22 ಅಡಿ ಉದ್ದದ ಸುಮಾರು 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಗ್ರಹ ಬೆಳಗ್ಗೆ 10.30ಕ್ಕೆ ನಡೆಯಲಿರುವ ಡಾ. ಶಿವಕುಮಾರಶ್ರೀಗಳ 106ನೇ ಜನ್ಮ ದಿನೋತ್ಸವ, ಗುರುವಂದನಾ ಮಹೋತ್ಸವದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಕಾಮನಕೆರೆ ಶಶಿಧರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು. ಗುರುವಂದನಾ ಕಾರ್ಯಕ್ರಮ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರದ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಸಿದ್ಧಗಂಗಾ ಮಹಿಳಾ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಕಾನೂನು ಸಚಿವ ಟಿ.ಬಿ. ಜಯಚಂದ್ರ ಆಂಗ್ಲ ಪ್ರೌಢಶಾಲೆಯ ಕಟ್ಟಡ ಉದ್ಘಾಟಿಸಲಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ದಾಸೋಹ ಭವನ ಉದ್ಘಾಟಿಸಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕನ್ನಡ ಬಿ.ಎ. ಇಂಟಿಗ್ರೇಟೆಡ್ ಕಾಲೇಜಿನ ಕಟ್ಟಡ, ಸಿದ್ದಗಂಗಾ ಡಿಇಡಿ ಕಾಲೇಜಿನ ಕಟ್ಟಡವನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ ಎಂದರು.
'ಯುವಶಕ್ತಿ ಸದ್ಬಳಕೆಯಾಗಲಿ'
ಶೃಂಗೇರಿ: ಯುವಶಕ್ತಿ ದೇಶದ ಶಕ್ತಿ. ರಾಷ್ಟ್ರ, ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನಾಂಗದ ಪಾತ್ರ ಮಹತ್ತರವಾಗಿದೆ. ಯುವಶಕ್ತಿಯ ಸದ್ಬಳಕೆ ಆಗಬೇಕೆ ಹೊರತು ದುರ್ಬಳಕೆ ಆಗಬಾರದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶೃಂಗೇರಿ ಶಿವಣ್ಣ ಹೇಳಿದರು. ಪಟ್ಟಣದ ಕನ್ನಡ ಭವನದಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜೆಸಿ ಎನ್.ಸಿ.ಪಾಂಡುರಂಗ ತರಬೇತಿ ನೀಡಿ ಮಾತನಾಡಿ, ವಿದ್ಯಾಥಿಗಳಿಗೆ ತಮ್ಮ ಬಗ್ಗೆ ಅರಿವು ಮೂಡಿಸಿಕೊಳ್ಳುವ ಪರಿಪಾಠ ಇರಬೇಕು. ಪಠ್ಯ ವಿಷಯಗಳ ಜೊತೆಗೆ ಇತರೆ ವಿಷಯಗಳತ್ತಲೂ ಆಸಕ್ತಿ ವಹಿಸಬೇಕು. ಉತ್ತಮ ಸಾಹಿತ್ಯ ಕೃತಿಗಳು, ವೃತ್ತ ಪತ್ರಿಕೆಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇವುಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ರೂಪಿಸುವ ಸಾಧನಗಳಾಗಿವೆ ಎಂದರು. ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್ಎಸ್ಎಸ್ ಅಧಿಕಾರಿ ಶ್ರೀಮಂದಾರ, ಇತಿಹಾಸ ಉಪನ್ಯಾಸಕ ವಿನಾಯಕ ಮತ್ತಿತರರು ಉಪಸ್ಥಿತರಿದ್ದರು. ವಿನಾಯಕ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಜನಧ್ವನಿ ಸಮಾಲೋಚನಾ ಸಭೆ
ಕಡೂರು: ಹಿಂದೆ ಅಸ್ತಿತ್ವದಲ್ಲಿದ್ದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ 3 ಹಂತದಲ್ಲಿ ಉಂಟಾಗುತ್ತಿರುವ ಲೋಪಗಳಿಂದಾಗಿ ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತಿಲ್ಲ. ರಾಹುಲ್ ಗಾಂಧಿ ಮಾರ್ಗದರ್ಶನದಂತೆ ಜನರೊಂದಿಗೆ ಸಮಾಲೋಚನಾ ಕಾರ್ಯ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದರು. ಪಟ್ಟಣದ ಕಾಳಿ ಕಾಂಪ್ಲೆಕ್ಸ್ನ ಸಭಾ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಸ್ಥಳೀಯ ಆಡಳಿತ ಮಟ್ಟದ ಜನಪ್ರತಿಧಿಗಳೊಂದಿಗೆ ಜನಧ್ವನಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಸಮಾಲೋಚನಾ ಸಮಿತಿ ಅಧ್ಯಕ್ಷ ಹಾಗೂ ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ ಸಂದೀಪ್ ಮಾತನಾಡಿ, ಸಭೆ ಆಶಯದಂತೆ ಸ್ಥಳೀಯ ಆಡಳಿತ ಮಟ್ಟದಲ್ಲಿ ಬದಲಾವಣೆ ತರುವ ಮೂಲಕ ಜನರಿಗೆ ನೇರವಾಗಿ ಸವಲತ್ತು ಹಾಗೂ ಉತ್ತಮ ಆಡಳಿತ ನಿರೀಕ್ಷೆ ಮಾಡಬಹುದಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಮುಖಂಡರಾದ ಎಚ್.ಎಂ. ಲೋಕೇಶ್, ಸಾವಿತ್ರಿ ಗಂಗಪ್ಪ, ಕೆ.ಜಿ. ಶ್ರೀನಿವಾಸಮೂರ್ತಿ, ಪುರಸಭಾ ಸದಸ್ಯರಾದ ಎಂ. ಸೋಮಶೇಖರ್, ಎನ್. ಬಷೀರ್ಸಾಬ್, ರೇಣುಕಾರಾಧ್ಯ, ಬಳ್ಳೇಕೆರೆ ವಿಶ್ವನಾಥ್, ರಂಗನಾಥ್, ತಮ್ಮಯ್ಯಪ್ಪ, ಬಾಸೂರು ಚಂದ್ರಮೌಳಿ, ಕೋಳಿ ಮುದಿಯಪ್ಪ ಇದ್ದರು.
ಸಮಸ್ಯೆ ಪರಿಹಾರಕ್ಕೆ ಸೂಚನೆ
ಕಡೂರು: ತಾಪಂ ಸಭಾಂಗಣದಲ್ಲಿ ಶಾಸಕ ವೈಎಸ್ವಿ ದತ್ತ ಅಧ್ಯಕ್ಷತೆಯಲ್ಲಿ, ಜಿಪಂ ಅಧ್ಯಕ್ಷೆ ಪದ್ಮ ಚಂದ್ರಪ್ಪ, ತಾಪಂ ಅಧ್ಯಕ್ಷ ಬಸವರಾಜು ಸಮ್ಮುಖದಲ್ಲಿ ಕೆಡಿಪಿ ಸಭೆ ನಡೆಯಿತು. ಕರಡಿ, ಚಿರತೆ ಕಾಟ, ಕಡೂರು ಸಾರ್ವಜನಿಕ ಆಸ್ಪತ್ರೆಗೆ ಬಾರದ ವೈದ್ಯರು, ಔಷಧಿ ಕೊರತೆ, 31 ಗಂಗಾ ಕಲ್ಯಾಣಕ್ಕೆ 625 ಅರ್ಜಿ, ಕಾಡಲ್ಲಿ ನೀರಿಲ್ಲದೆ ನಾಡಿಗೆ ಬರುತ್ತಿರುವ ಪ್ರಾಣಿಗಳು, ಬರ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಶಾಲೆಗಳಿಗೆ ಅಡುಗೆ ಅನಿಲ ಕೊರತೆ ಬಗ್ಗೆ ಅಧ್ಯಕ್ಷ ಬಸವರಾಜು ಪ್ರಸ್ತಾಪಿಸಿದಕ್ಕೆ ಉತ್ತರಿಸಿದ ಬಿಸಿ ಊಟದ ಅಧಿಕಾರಿ ರಾಮು, ಸಿಲಿಂಡರ್ ಮುಗಿದಿರುವುದರಿಂದ ಸಿಲಿಂಡರ್ ವ್ಯತ್ಯಯವಾಗುತ್ತಿದೆ ಎಂದರು. ಆಗ ಸಿಲಿಂಡರ್ ವಿತರಕರು, ಡಿಸಿ ಅವರ ಜತೆ ಈ ಸಂಬಂಧ ಮಾತನಾಡುತ್ತೇನೆ ಎಂದರು. ಮೆಸ್ಕಾಂ ಅಧಿಕಾರಿಗಳು ಟಿಸಿ ಪೂರೈಕೆ ಮಾಡಿ ಜನರಿಗೆ ನೀರು ಕೊಡಬೇಕು ಎಂದು ದತ್ತ ಹೇಳಿದಾಗ, ರಾತ್ರಿ ವೇಳೆ 3 ಗಂಟೆ, ಹಗಲು 4 ಗಂಟೆ ತ್ರೀಫೇಸ್ ಕರೆಂಟ್ ನೀಡಲಾಗುತ್ತಿದೆ ಎಂದು ಎಇಇ ಪರಶುರಾಮ್ ಉತ್ತರಿಸಿದರು. ಜಿಪಂ ಸದಸ್ಯರಾದ ಬಿ.ಪಿ. ನಾಗರಾಜ್, ಚಿಕ್ಕಮ್ಮ, ಶಶಿರೇಖಾ ಎಂ.ಆರ್.ಟಿ. ಸುರೇಶ್, ಮಾಲಿನಿಬಾಯಿ ರಾಜಾ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಕಾರ್ಯಾಗಾರ ಉದ್ದೇಶ ಕಾನೂನು ಅರಿವು
ಕಡೂರು: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹಲವಾರು ಕಾಯಿದೆ ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವ ಹಿನ್ನೆಲೆಯಲ್ಲಿ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಡೂರು ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕೆ. ಶ್ರೀನಿವಾಸಗೌಡ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳಾ ಸಂರಕ್ಷಣಾ ಕಾಯಿದೆ ಕುರಿತ 2 ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು. ವಕೀಲ ಎನ್. ಶೇಖರ್ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಕ್ಷಮ್ಯ ಅಪರಾಧ. ಇದನ್ನು ತಡೆಗಟ್ಟಲು ಹಲವಾರು ಕಾಯಿದೆಗಳಿದ್ದು, ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದರು. ಹಿರಿಯ ಪ್ರಧಾನ ನ್ಯಾಯಧೀಶರಾದ ರುಡಾಲ್ ಫಿರೇರಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಅನುರೇವು, ವಕೀಲರಾದ ಕೆ.ಎನ್. ಬೊಮ್ಮಣ್ಣ, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್. ದೇವರಾಜ್, ಸಿಡಿಪಿಒ ರಂಗನಾಥ್, ವ್ಯವಸ್ಥಾಪಕ ರಂಗನಾಥ್ ಮುಂತಾದವರು ಭಾಗವಹಿಸಿದ್ದರು.
ಸಹಕಾರ ಸಂಘಕ್ಕೆ ಆಯ್ಕೆ
ತರೀಕೆರೆ: ಪಟ್ಟಣದ ಸರ್ಕಾರಿ ನೌಕರರ ಸಹಕಾರ ಸಂಘ ನಿ.ದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಟಿ.ಎಚ್. ಹಾಲುವಜ್ರಪ್ಪ, ಟಿ.ಎಂ. ಗೋವಿಂದಪ್ಪ, ಟಿ. ಚಂದ್ರಪ್ಪ, ಎನ್. ಚಂದ್ರಶೇಖರ್, ಎಸ್. ಹೇಮರಾಜ್, ಎಚ್.ಆರ್. ಪರಮೇಶ್ವರಪ್ಪ, ಕೆ. ಉಮೇಶ್ ಹಿಂದುಳಿದ ವರ್ಗದ ಕ್ಷೇತ್ರದಿಂದ ಎಸ್.ಟಿ. ತಿಪ್ಪೇಶಪ್ಪ ಪ.ಜಾತಿ.ಪ.ವರ್ಗ ಮೀಸಲು ಕ್ಷೇತ್ರದಿಂದ ಟಿ. ಕರಿಬಸಪ್ಪ, ಮಹಿಳಾ ಕ್ಷೇತ್ರದಿಂದ ಸುಮ ಸಿ.ಎಂ. ಮಹಾಲಕ್ಷ್ಮಿ ಭಟ್ ಅವರು ಆಯ್ಕೆಯಾಗಿದ್ದಾರೆ.
ಸಂತಾಪೆ: ಬುಧವಾರ ಸಮೀಪದ ಸಖರಾಯಪಟ್ಟಣದ ಬಳಿ ವಾಹನ ಅಪಘಾತದಲ್ಲಿ ನಿಧನರಾದ ತರೀಕೆರೆ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ಸೈಫುಲ್ಲಾ ಅವರ ನಿಧನಕ್ಕೆ ಶಾಸಕ ಜಿ.ಎಚ್. ಶ್ರೀನಿವಾಸ್, ಪುರಸಭಾ ಸದಸ್ಯ ಟಿ.ಜಿ. ಅಶೋಕ್ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸುರೇಶ್ ಚಂದ್ರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಪಘಾತದ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭಾ ಸದಸ್ಯ ಟಿ.ಜಿ. ಅಶೋಕ್ಕುಮಾರ್ ಭೇಟಿ ನೀಡಿದ್ದರು.
6 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಸ್ಪರ್ಧೆ
ಚಿಕ್ಕಮಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 6 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆ ಸ್ಪರ್ಧೆ ಮಾಡಲಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಜೇವರ್ಗಿ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ. ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಧಾರಾವಾಡ, ಹಾವೇರಿ ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಧಾರಾವಾಡ ಅಥವಾ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು. ರಾಜ್ಯದ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಂಘಟನೆ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಸಂಘಟನೆ 34 ಜನರ ಚುನಾವಣಾ ಸಮಿತಿ ರಚನೆ ಮಾಡಿದೆ. ಫೆ. 11ರಿಂದ ಪ್ರವಾಸ ಕೈಗೊಂಡಿದ್ದು, ಈಗಾಗಲೇ 5 ಕ್ಷೇತ್ರಗಳಲ್ಲಿ ಮೊದಲ ಹಂತದ ಪ್ರವಾಸ ಮುಗಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಮಹೇಶ್ಕುಮಾರ್, ಮುಖಂಡರಾದ ಶೃಂಗೇರಿ ಅರ್ಜುನ್, ಮಂಜುನಾಥ್, ಶಾರದಮ್ಮ ಹಾಗೂ ಸರಸ್ವತಿ ಉಪಸ್ಥಿತರಿದ್ದರು.
ಕಂದಾಯ ಪರಿಷ್ಕರಣಾ ಸಮಿತಿ ಸಭೆ
ನರಸಿಂಹರಾಜಪುರ: ಕಡಹಿನಬೈಲು ಗ್ರಾಪಂ ಕಚೇರಿ ಆವರಣದಲ್ಲಿ ಕಂದಾಯ ಪರಿಷ್ಕರಣಾ ಸಮಿತಿ ಸಭೆ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಈ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಮನೆ ಹಾಗೂ ನೀರಿನ ಕಂದಾಯ ಪರಿಷ್ಕರಣೆ ಮಾಡುವ ಸಂದರ್ಭ ಬಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಕಂದಾಯವನ್ನು ಮತ್ತೊಮ್ಮೆ ಪರಷ್ಕರಿಸಬೇಕು ಎಂದು ಗ್ರಾಮಸ್ಥರ ಒತ್ತಾಯದ ಮೇರೆಗೆ ಕಂದಾಯ ಪರಿಷ್ಕರಣಾ ಸಮಿತಿ ರಚಿಸಲಾಗಿತ್ತು. ಗುರುವಾರ ನಡೆದ ಸಮಿತಿ ಸಭೆಯಲ್ಲಿ ಕಂದಾಯ ಪರಿಷ್ಕರಣೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಪಿ.ಡಿ.ಒ ರಾಜು ವಿಜಯನ್ ಹಾಗೂ ಕೆಲವು ಸದಸ್ಯರು ಕಂದಾಯ ಏರಿಸಬೇಕಾದ ಅನಿವಾರ್ಯತೆ ಇದೆ. ಗ್ರಾಮ ಪಂಚಾಯ್ತಿಯ ಖರ್ಚು, ವೆಚ್ಚಗಳು ಜಾಸ್ತಿಯಾಗಿದೆ. ವಿದ್ಯುತ್ ಬಿಲ್ ಸಹ ಜಾಸ್ತಿಯಾಗಿದೆ. ಈ ಹಿಂದೆ ನಿಗದಿ ಮಾಡಿದ್ದ ಗರಿಷ್ಠ ಮತ್ತು ಕನಿಷ್ಠ ಕಂದಾಯದ ಮಧ್ಯೆ ಕಂದಾಯ ನಿಗದಿ ಮಾಡೋಣ ಎಂದು ಮನವಿ ಮಾಡಿದರು. ಆದರೆ ಸಮಿತಿಯ ಬಹುತೇಕ ಸದಸ್ಯರು ಈ ಸಲಹೆ ಒಪ್ಪದೆ ಇರುವುದರಿಂದ ತೀವ್ರ ಚರ್ಚೆ ನಡೆದು ಅಂತಿಮವಾಗಿ ಕನಿಷ್ಠ ಕಂದಾಯ ನಿಗದಿ ಮಾಡಲು ಕಂದಾಯ ಪರಿಷ್ಕರಣಾ ಸಮಿತಿ ತೀರ್ಮಾನಿಸಿತು. ಸಭೆಯಲ್ಲಿ ಸದಸ್ಯರು, ಅಧಿಕಾರಿಗಳಿದ್ದರು.
ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ
ತರೀಕೆರೆ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ನೇರಲಕೆರೆ ಗ್ರಾಮದಲ್ಲಿ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆಯನ್ನು ಏರ್ಪಡಿಸಲಾಗಿತ್ತು. ನವೋದಯ ಪಬ್ಲಿಕ್ ಶಾಲೆ ಮುಖ್ಯೋಪಾಧ್ಯಾಯ ಯೋಗೀಶ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಡಿ.ಇ.ಒ. ಅಶ್ವಿನಿ, ಒಕ್ಕೂಟದ ಅಧ್ಯಕ್ಷೆ ಗೀತಾ, ಮೇಲ್ವಿಚಾರಕರಾದ ಅನಿಲ್ ಕುಮಾರ್, ಸಮನ್ವಯಾಧಿಕಾರಿ ಮಲ್ಲಮ್ಮ, ಸುಮಾ, ಚಂದ್ರಶೇಖರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರೌಢಶಾಲೆಯಲ್ಲಿ ಶ್ರಮದಾನ
ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯ ಬಾಳೆಹೊಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ತೋಟದೂರು ಕಾರ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಳಸ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಜಯಕರ್, ತೋಟದೂರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಮಧು, ಕವಿತ ಒಕ್ಕೂಟದ ಅಧ್ಯಕ್ಷ ಚೇತನ, ಸಂಘದ ಪದಾಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಆರ್ಟಿಇ ಜಾಗೃತಿ ಜಾಥಾ
ತರೀಕೆರೆ: ಆರ್ಟಿಇ ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಸ್ವಾಮಿ ವಿವೇಕಾನಂದ ಶಾಲಾ ಮಕ್ಕಳಿಂದ ಪಟ್ಟಣದ ಬೀದಿ, ಸಂತೆಗಳಲ್ಲಿ ಜಾಥಾ ಏರ್ಪಡಿಸಲಾಗಿತ್ತು. ಆರ್ಟಿಇ ಕಾಯ್ದೆ ನೋಡೆಲ್ ಅಧಿಕಾರಿ ಟಿ. ಚಂದ್ರಪ್ಪ ಮಾತನಾಡಿ, ಉಚಿತ ಶಿಕ್ಷಣ ಹಕ್ಕು ಕಾಯ್ದೆ ಇದು ಮಕ್ಕಳ ಹಕ್ಕು. 6 ರಿಂದ 14 ವರ್ಷದ ವಯೋವುತಿಯ ಒಳಗಿನ ಮಕ್ಕಳಿಗಾಗಿ ಶೇ. 25 ಮೀಸಲು ಒದಗಿಸಿ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಲಾಗಿದೆ. ಎಚ್ಐವಿ ಪೀಡಿತ ಮಕ್ಕಳು, ವಿಕಲಚೇತನ ಮಕ್ಕಳು, ವಲಸೆ ಹಾಗೂ ಬೀದಿ ಮಕ್ಕಳಿಗೆ ನೇರ ದಾಖಲಾತಿಗೆ ಆವಕಾಶವಿದೆ. ಈ ಕಾಯ್ದೆಯಡಿ ಮಕ್ಕಳನ್ನು ದಾಖಲಿಸಿ ಶಿಕ್ಷಣ ಹಕ್ಕು ಕಾಯ್ದೆಯ ಉಪಯೋಗ ಪಡೆಯಬೇಕು ಎಂದು ತಿಳಿಸಿದರು. ಶಾಲೆ ಶಿಕ್ಷಕರಾದ ಗಿರೀಶ್, ಮಿಥುನ್, ತೇಜಸ್ವಿ, ಅಕ್ಷತ, ನವೀನ್ಕುಮಾರ್ ಮತ್ತಿತರರು ಭಾಗವಹಿಸಿದ್ದರು.
18ರಂದು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ
ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಫೆ. 18 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಟಿ.ಸಿ. ಪದ್ಮ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆ
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯ ಆಡಳಿತ ಸುಧಾರಣೆ ವಿಭಾಗ, ಸೇಂಟ್ ಜೋಸೆಫ್ ಕಾಲೇಜು, ಬೆಂಗಳೂರು ಹಾಗೂ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸಹಯೋಗದಲ್ಲಿ ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆಗೆ ಹಾಜರಾಗಲು ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆ.24 ರಂದು ತರಬೇತಿ ತರಗತಿಗಳು ಪ್ರಾರಂಭವಾಗಲಿದೆ. ಮಾಹಿತಿಗಾಗಿ ಡಿಸಿ ಕಾರ್ಯಾಲಯವನ್ನು ಸಂಪರ್ಕಿಸಿ.
ಹೃದ್ರೋಗ ತಪಾಸಣೆ ಶಿಬಿರ: ದಾವಣಗೆರೆ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್, ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು 16ರಂದು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞ ಡಾ. ಧನಂಜಯ್ ಅವರು ಹೃದಯ ರೋಗ ತಪಾಸಣೆ ನಡೆಸಲಿದ್ದಾರೆ. ಬಿ.ಪಿ.ಎಲ್, ಅಂತ್ಯೋದಯ, ತಾತ್ಕಾಲಿಕ ಪಡಿತರ ಚೀಟಿ, ಯಶಸ್ವಿನಿ ಕಾರ್ಡ್ ಹೊಂದಿರುವವರು, 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಚೇತನದಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

