ಚಿಕ್ಕಮಗಳೂರು

ಸಂಸ್ಕೃತಿ ಅರಿವು ಪ್ರವಾಸದ ಉದ್ದೇಶ

Published On :

ಮೂಡಿಗೆರೆ: ಶಾಲೆಯಿಂದ ಪ್ರವಾಸ ಹೊರಟ ವಿದ್ಯಾರ್ಥಿಗಳು ಎಲ್ಲ ಹಂತದಲ್ಲೂ ಎಚ್ಚರಿಕೆ ವಹಿಸುವಂತೆ ತಾಲೂಕು ಪಂಚಾಯಿತಿ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್ ಹೇಳಿದರು. ಪಟ್ಟಣದ ಶಾಸಕರ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ 5 ದಿನಗಳ ಶೈಕ್ಷಣಿಕ ಪ್ರವಾಸ ಕರ್ನಾಟಕ ದರ್ಶನ 2013- 14ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಸರ್ಕಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ತನ್ನದೆ ಖರ್ಚಿನಲ್ಲಿ ಶಾಲಾ ಪ್ರವಾಸ, ಊಟ, ತಿಂಡಿ, ಕುಡಿವ ನೀರಿನ ವ್ಯವಸ್ಥೆ ಮಾಡಿದೆ. ಐತಿಹಾಸಿಕ ಸ್ಥಳಗಳನ್ನು ತೋರಿಸುವ ವ್ಯವಸ್ಥೆಯನ್ನು ಮಾಡಿದೆ. ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳನ್ನು ನೋಡಿ ಅಲ್ಲಿಯ ವಾಸ್ಯವಿಕತೆ, ಅಂದಿನ ಆಡಳಿತದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಹಕಾರಿ ಆಗಿದೆ ಎಂದರು. ತಹಸೀಲ್ದಾರ್ ಶಿವರಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗಿಯೇ ಇರದೆ, ಐತಿಹಾಸಿಕ ತಾಣಗಳತ್ತ ಭೇಟಿ ನೀಡಿ, ಕಲೆ ಮತ್ತು ಸಂಸ್ಕೃತಿ ಅಧ್ಯಯನ ಮಾಡಬೇಕು ಎಂಬುದೇ ಈ ಪ್ರವಾಸ ಯೋಜನೆ ಉದ್ದೇಶ ಎಂದರು.
ಗ್ರಾಮೀಣ ಅಂಚೆ ನೌಕರರ ಮುಷ್ಕರ
ತರೀಕೆರೆ: ಇಲ್ಲಿಗೆ ಸಮೀಪದ ಶಿವನಿ ಅಂಚೆ ಕಚೇರಿಯಲ್ಲಿ ಮಂಗಳವಾರ ಅಜ್ಜಂಪುರ, ಶಿವನಿ ಉಪ ಅಂಚೆ ಕಚೇರಿಯ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾ.ಯಿಸಿ ಶಿವನಿ ಅಂಚೆ ಕಚೇರಿಯ ಮುಂದೆ ಧರಣಿ ನಡೆಸಿದರು.
ಪ್ರಸನ್ನ, ವೇಣುಗೋಪಾಲ್ ಶಿವನಿ, ಚಂದ್ರಪ್ರಕಾಶ್ ತ್ಯಾಗದಕಟ್ಟೆ, ರಂಗನಾಥ, ಸುರೇಶ್ ದಂದೂರು, ತಿಪ್ಪೇಶ್ ಶಿವನಿ ರೇಲ್ವೆ ನಿಲ್ದಾಣ, ಗೋವಿಂದಪ್ಪ ಶಿವನಿ, ಮಂಜಪ್ಪ, ವೇಣುಗೋಪಾಲ್ ಗಡೀಹಳ್ಳಿ ಅವರು ಧರಣಿ ಮುಷ್ಕರದಲ್ಲಿ ಭಾಗವಹಿಸಿದ್ದರು. ಜಿಡಿಎಸ್ ನೌಕರರನ್ನು ಪೌರ ನೌಕರರೆಂದು ಪರಿಗಣಿಸಿ ಇಲಾಖೆ ನೌಕರರಿಗೆ ಕೊಡುವ ಎಲ್ಲಾ ಸೌಲಭ್ಯ ಕೊಡುವುದು, ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳುವುದು, ಅನುಕಂಪದ ಆಧಾರದ ನೌಕರಿಯ ಸೌಲಭ್ಯವನ್ನು ಶೇ.100ರಷ್ಟು ಕೊಡುವುದು, ಪೋಸ್ಟ್‌ಮನ್ ಮತ್ತು ಎಂಟಿಎಸ್‌ಗಳ ಶೇ.25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡುವುದು, ಹೊರಗುತ್ತಿಗೆ ಆಧಾರದ ಮೇಲೆ ಶೇ.25 ರಷ್ಟು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನು ತುಂಬುವುದು, ಶೇ.50ರಷ್ಟು ಡಿ.ಎ. ಮರ್ಜರ್ ಮಾಡುವುದು, 1-1-2006 ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ಕಾಂಟಿಜೆಂಟಿ ಪಾರ್ಟ್ ಟೈಂ ನೌಕರರಿಗೆ ಡಿ.ಎ. ಕೊಡುವುದು ಎಂದು ಆಗ್ರಹಿಸಿದರು.
'ನಮೋ ಪ್ರಧಾನಿ
ಆಗುವುದು ನಿಶ್ಚಿತ'
ತರೀಕೆರೆ:  ನರೇಂದ್ರ ಮೋದಿ ಪ್ರಧಾನಿಯಾಗುವುದು ಯುವಕರ ಮಹತ್ವದ ಆಕಾಂಕ್ಷೆಯಾಗಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್ ತಿಳಿಸಿದ್ದಾರೆ.
ಅವರು, ತಾಲೂಕು ಬಿಜೆಪಿ ಯುವ ಮೋರ್ಚಾವತಿಯಿಂದ ಸೋಮವಾರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ ಏರ್ಪಾಡಾಗಿದ್ದ ನಮೋ ಟೀ ಸ್ಟಾಲ್ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ನಾಗರೀಕನು ಚುನಾವಣೆಗೆ ನಿಲ್ಲುವ ಹಕ್ಕು ಇದೆ, ಯಾರದೇ ಗುತ್ತಿಗೆ ಅಲ್ಲ, ಇದು ಜನತೆಯ ಚುನಾವಣೆಯಾಗಿದೆ, ರಾಷ್ಟ್ರದ ಭವಿಷ್ಯ ನಿರ್ಮಾಣದ ಹಂತದಲ್ಲಿದೆ. ಟೀ, ಕಡ್ಲೆಕಾಯಿ ಮಾರುವವರು ಪ್ರಧಾನಿಯಾಗಬಹುದು  ಎಂದು ತಿಳಿಸಿದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಯಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕಟ್ಟ ಕಡೆಯ ವ್ಯಕ್ತಿಯೂ ದೇಶದ ಪ್ರಧಾನಿಯಾಗಬಹುದು, ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಯ ಎಂದು ತಿಳಿಸಿದರು.  ಬಿಜೆಪಿ ತಾಲೂಕು ಅಧ್ಯಕ್ಷ ಕರಕುಚ್ಚಿ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಜಿ. ಸದಾನಂದ್ ಮತ್ತಿತರರು ಮಾತನಾಡಿದರು. ಟಿ.ಎಂ. ಭೋಜರಾಜ್, ದುಗ್ಲಾಪುರ ಮಂಜುನಾಥ್, ಶಿವಮೂರ್ತಿ, ಸುನೀಲ್, ವಿಜಯಕುಮಾರ್, ನೀಲಮ್ಮ, ಯುವ ಮೋರ್ಚಾ ಸದಸ್ಯರು, ಪಕ್ಷದ ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಅಸಲು, ಬಾಕಿ ಪಾವತಿಗೆ ಅವಕಾಶ
ಕಡೂರು:  ಇಲ್ಲಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಭೂ ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಸ್ತಿಯಾಗಿರುವ ರೈತರಿಗೆ ಸರ್ಕಾರ ರಿಯಾಯಿತಿ ಸೌಲಭ್ಯ ನೀಡಿದ್ದು, ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ರಿಯಾಯಿತಿ ಪಡೆಯಬಹುದು ಎಂದು ಬ್ಯಾಂಕಿನ ವ್ಯವಸ್ಥಾಪಕ ಸಿ.ಮಂಜುನಾಥ್ ಮತ್ತು ಮುಖ್ಯ ಲೆಕ್ಕಾಧಿಕಾರಿ ಅನಿಲಕುಮಾರ್ ತಿಳಿಸಿದ್ದಾರೆ. ಸುಸ್ತಿ ಕಾಲದ ತೀರುವಳಿ ಯೋಜನೆ ಹೊಸದಾಗಿ ಜಾರಿಗೆ ಬಂದಿದೆ. ಸಾಲ ಪಡೆದ ರೈತರು ಸಾಲ ಕಟ್ಟಲು 2014ರ ಮಾ.21 ರಿಂದ 31 3-2014 ರವರೆಗೆ ಬಾಕಿ ಮತ್ತು ಅಸಲು ಬಡ್ಡಿ ಪಾವತಿ ಮಾಡಲು ಅವಕಾಶವಿದೆ ಎಂದಿದ್ದಾರೆ. ಈ ಅವಕಾಶದಿಂದ ಸುಸ್ತಿ ಬಡ್ಡಿಯ ರಿಯಾಯಿತಿ ಪ್ರಯೋಜನ ಪಡೆಯಬಹುದಾಗಿದೆ. ಶೇ.72ರಷ್ಟು ಸಾಲ ವಿತರಣೆಯಾಗಿದೆ. ರೈತರು ಮೇಲ್ಕಾಣಿಸಿದ ದಿನಾಂಕದ ಒಳಗೆ ಮರುಪಾವತಿಸಿ ರಿಯಾಯಿತಿ ಸೌಲಭ್ಯ ಪಡೆಯಲು ಕೋರಿದ್ದಾರೆ.
ಶಿಕ್ಷಣ: ಶಾಲಾ
ಮಕ್ಕಳಿಂದ ಜಾಥಾ
ತರೀಕೆರೆ: ಪಟ್ಟಣದ ಅರುಣೋದಯ ಶಾಲಾ ಮಕ್ಕಳು ಮಕ್ಕಳ ಉಚಿತ ಶಿಕ್ಷಣ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಬಸವೇಶ್ವರ ಬೀದಿ, ಎಂ.ಜಿ. ರಸ್ತೆ ಮತ್ತು ಬಿ.ಎಚ್. ರಸ್ತೆಗಳಲ್ಲಿ ಜಾಥಾ ನಡೆಸಿ, ಮಕ್ಕಳನ್ನು ಶಾಲೆಗೆ ಸೇರಿಸಿ, ಆರ್‌ಟಿಇ ಕಾಯ್ದೆ ಅಡಿಯಲ್ಲಿ, ಪಡೆಯಿರಿ, ಪಡೆಯಿರಿ, ಉಚಿತ ಶಿಕ್ಷಣ ಪಡೆಯಿರಿ ಎಂಬ ಘೋಷಣೆಗಳ ಮೂಲಕ ಜನರಲ್ಲಿ ಈ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದರು. ತಾಲೂಕಿನ ಆರ್‌ಟಿಇ ನೋಡೆಲ್ ಅಧಿಕಾರಿ ಟಿ. ಚಂದ್ರಪ್ಪ ಅವರು ಜಾಥಾದಲ್ಲಿ  ಇದ್ದರು.
ನಿರ್ದೇಶಕರ
ಅವಿರೋಧ ಆಯ್ಕೆ
ನರಸಿಂಹರಾಜಪುರ: ಯಡಗೆರೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್‌ನ 2014-15 ರಿಂದ 2018-19 ನೆ ಸಾಲಿನವರೆಗೆ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಯಸ್ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಆರ್. ರವಿಕುಮಾರ್ ತಿಳಿಸಿದ್ದಾರೆ.
ನಿರ್ದೇಶಕರು: ವೈ.ಎಸ್. ಸುಬ್ರಮಣ್ಯ, ಎಲ್.ಡಿ. ನವೀನ್, ಜಿ.ಎಸ್. ಮಹಾಬಲ, ಆರ್. ದೇವಾನಂದ್, ಎಚ್.ಕೆ. ಭಾಸ್ಕರ ರಾವ್, ಎಚ್.ಎ. ಕೃಷ್ಣಮೂರ್ತಿ, ಜಿ.ಎಸ್. ನಟರಾಜ್, ಜಿ.ಎಸ್. ಪ್ರಸನ್ನ ಕುಮಾರ್, ಕೆ.ಪಿ. ಕೃಷ್ಣಾನಂದ, ಅಣ್ಣಪ್ಪ, ರಾಮಣ್ಣ ಭಂಡಾರಿ, ವೈ.ಎಸ್. ಕೃಷ್ಣಮೂರ್ತಿ, ಬಿ.ಪಿ. ಸದಾನಂದ, ಎಸ್.ಎಸ್. ಶೇಷಗಿರಿ, ಕೆ.ಎಸ್.ಸುಬ್ರಮಣ್ಯ, ಶ್ರೀಮತಿ.
23ರಂದು ವೀರಶೈವ ಸಮಾಜದ ಸಭೆ
ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರ ಮಟ್ಟದ ವೀರಶೈವ ಸಮಾಜ ಭಾಂಧವರ ಸಂಘವನ್ನು ಪುನಶ್ಚೇತನಗೊಳಿಸಲು ಫೆ.23 ರಂದು ಬೆಳಗ್ಗೆ 11 ಗಂಟೆಗೆ ರಂಭಾಪುರೀ ಪೀಠದ ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಸಭೆ ಕರೆಯಲಾಗಿದೆ.  ತಾಲೂಕಿನ ವಿವಿಧೆಡೆ ನೆಲೆಸಿರುವ ವೀರಶೈವ ಭಾಂಧವರು ಈ ಸಭೆಗೆ ಆಗಮಿಸಿ ಸದಸ್ಯತ್ವ ನೋಂದಾಯಿಸಿಕೊಳ್ಳಬೇಕೆಂದು ತಾಲೂಕು ವೀರಶೈವ ಮುಖಂಡ ನರಸಿಂಹರಾಜಪುರದ ರವಿಶಂಕರ್ ಕೋರಿದ್ದಾರೆ. ಮಾಹಿತಿಗಾಗಿ  9449620358, 9591371044  ಸಂಪರ್ಕಿಸಿ.
ಪೂರ್ವ ಸಿದ್ಧತಾ ಸಭೆ
ತರೀಕೆರೆ: ಸಂತ ಸೇವಾಲಾಲ್ ಸ್ವಾಮಿಯವರ 275ನೇ ಜಯಂತ್ಯುತ್ಸವದ ಅಂಗವಾಗಿ ಪೂರ್ವಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿತ್ತು. ವೈ.ಆರ್. ಯೋಗೇಂದ್ರಕುಮಾರ್ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಚ್.ಎ. ಲೋಕ್ಯಾನಾಯ್ಕ, ಎಚ್. ರಾಮಪ್ಪ, ಕೀರ್ಯಾನಾಯ್ಕ, ಬಿ. ಕೃಷ್ಣಾನಾಯ್ಕ, ಬಿ. ಶೇಖರಾನಾಯ್ಕ, ಬಿ. ಉಮೇಶ್ ನಾಯ್ಕ, ವಿಜಯನಾಯ್ಕ, ಶಿವಶಂಕರನಾಯ್ಕ ಮತ್ತು ತಾಲೂಕಿನ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. ಮಾರ್ಚ್ ಮೊದಲ ವಾರದಲ್ಲಿ ಸ್ವಾಮಿಯವರ 275ನೇ ಜಯಂತ್ಯುತ್ಸವ ಆಚರಣೆಗೆ ಒಪ್ಪಿಗೆ ಸೂಚಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.