23ರಂದು ಪಶ್ಚಿಮಘಟ್ಟ ಉಳಿಸಿ ಸಮಾವೇಶ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಫೆ.19
ಪಶ್ಚಿಮಘಟ್ಟ ಉಳಿಸಿ ಸಂಘಟನಾ ಸಮಿತಿಯ ಆಶ್ರಯದಲ್ಲಿ ಬೆಂಗಳೂರಿನ ಕುಮಾರಪಾರ್ಕ್ನಲ್ಲಿರುವ ಗಾಂಧಿ ಭವನದಲ್ಲಿ ಫೆ.23ರಂದು ಪಶ್ಚಿಮಘಟ್ಟ ಉಳಿಸಿ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ.
ಈ ಸಮಾವೇಶವನ್ನು ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ಅವರು ಉದ್ಘಾಟಿಸಲಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ 6 ರಾಜ್ಯಗಳ 250ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಶ್ಚಿಮಘಟ್ಟ ಉಳಿಸಿ ಸಂಘಟನಾ ಸಮಿತಿ ಸದಸ್ಯ ರುದ್ರಯ್ಯ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಪಶ್ಚಿಮಘಟ್ಟದ ಪರಿಸರದಲ್ಲಿ ಕಳೆದ 50 ವರ್ಷಗಳಿಂದ ವಿನಾಶಕಾರಿ ಚಟುವಟಿಕೆಗಳು ನಡೆಯುತ್ತಿವೆ. ಅರಣ್ಯ ಮಾಫಿಯಾ, ಕಲ್ಲುಗಣಿ ಮಾಫಿಯಾ, ರಿಯಲ್ ಎಸ್ಟೇಟ್ ಹಾಗೂ ಕಾರ್ಪೋರೇಟ್ ಅಭಿವೃದ್ಧಿ ಮಾಫಿಯಾಗಳು ನಿರಂತರವಾಗಿ ಪಶ್ಚಿಮಘಟ್ಟಗಳನ್ನೂ ಲೂಟಿ ಮಾಡುತ್ತಿವೆ. ಈ ಲೂಟಿಯನ್ನು ವಿರೋಧಿಸಿ ನಡೆದ ಜನತಾ ಚಳವಳಿಯಿಂದಾಗಿ ಕೇಂದ್ರ ಸರ್ಕಾರ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಳ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ಈ ಆಯೋಗ 2011ರಲ್ಲಿ 510 ಪುಟಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.
85 ನದಿಗಳಿಗೆ ಅಪಾಯ: ಈ ವರದಿಯಲ್ಲಿ ಪರಿಸರ ಮೇಲಾಗಿರುವ ದುಷ್ಪರಿಣಾಮದ ಬಗ್ಗೆ ವಿವರಿಸಲಾಗಿದೆ. ಇಲ್ಲಿನ ಆದಿವಾಸಿಗಳ ಹಾಗೂ ಸ್ಥಳೀಯರಿಗೆ ಪ್ರಾಮುಖ್ಯತೆ ನೀಡಲಾಗಿದೆ. ಪಶ್ಚಿಮಘಟ್ಟ ಹಾಳಾದರೆ 85 ನದಿಗಳು ಬತ್ತಿ ಹೋಗುತ್ತವೆ ಎಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ವಾಸ್ತವಿಕತೆಯ ಚಿತ್ರಣವನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು.
ಆದರೆ, ಈ ವರದಿ ಜಾರಿಗೆ ತಂದರೆ ಪಶ್ಚಿಮಘಟ್ಟದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಾಫಿಯಾಕ್ಕೆ ಕಡಿವಾಣ ಬೀಳಲಿದೆ ಎಂಬ ಉದ್ದೇಶದಿಂದ ಮಾಧವ್ ಗಾಡ್ಗೀಳ್ ವರದಿಯನ್ನು ಪಕ್ಕಕ್ಕೆ ಸರಿಸಿ ಕಸ್ತೂರಿ ರಂಗನ್ ಸಮಿತಿ ರಚನೆ ಮಾಡಿ, ಆ ಸಮಿತಿ ವರದಿ ನೀಡುತ್ತಿದ್ದಂತೆ ಅದನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಎರಡು ಸಮಿತಿಗಳು ನೀಡಿರುವ ವರದಿಗಳನ್ನು ಬಹಿರಂಗಗೊಳಿಸಿ ಅವುಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸವಾಗಿರುವ ಜನರ ಅಭಿಪ್ರಾಯವನ್ನು ಪಡೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಂತರದಲ್ಲಿ ವರದಿ ಜಾರಿಗೆ ತರಬೇಕಾಗಿತ್ತು.
ಕೇಂದ್ರದ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟವನ್ನು ಮಾಡಿಕೊಂಡಿದ್ದಾರೆ. ಕೇಂದ್ರದ ಸಚಿವ ಶರದ್ ಪವಾರ್ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಎಕರೆ ಕಾಫಿ ತೋಟವನ್ನು ಹೊಂದಿದ್ದಾರೆ, ಮಾಜಿ ಸಚಿವ ಅನಿಲ್ ಲಾಡ್ ಚಿಕ್ಕಮಗಳೂರಿನಲ್ಲಿ ತೋಟವನ್ನು ಮಾಡಿಕೊಂಡಿದ್ದಾರೆ. ಹೀಗೆ ರಾಜಕೀಯ ಬಲಾಡ್ಯರು, ಆರ್ಥಿಕ ಸ್ಥಿತಿವಂತರು ಮಲೆನಾಡಿನಲ್ಲಿ ಭೂಮಿಯನ್ನು ಖರೀದಿ ಮಾಡಲು ಬರುತ್ತಿದ್ದಾರೆ. ಪಟ್ಟ ಜಮೀನಿನ ಜತೆಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ.
ಹಂತ ಹಂತವಾಗಿ ಹೋರಾಟ: ಬಹುರಾಷ್ಟ್ರೀಯ ಕಂಪನಿಗಳ, ಮಾಫಿಯಾಗಳ ಪರವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಕೈಬಿಡಬೇಕು. ಮಾಧವ ಗಾಡ್ಗೀಳ್ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟವನ್ನು ರೂಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಫೆ.23ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಾಧವ ಗಾಡ್ಗೀಳ್ ವರದಿಯ ಬಗ್ಗೆ ಮಲೆನಾಡಿನ ಜನರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಪಟ್ಟಭದ್ರಾಹಿತಸಕ್ತಿಗಳು ಕೆಲಸ ಮಾಡುತ್ತಿವೆ. ಸಣ್ಣ ಪುಟ್ಟ ಒತ್ತುವರಿದಾರರಲ್ಲಿ ಆತಂಕ ಸೃಷ್ಟಿ ಮಾಡುವ ಹೇಳಿಕೆಯನ್ನು ನೀಡಿ, ಅವರ ಹೆಸರಿನಲ್ಲಿ ಬಲಾಡ್ಯರು ಅಕ್ರಮ ಭೂಮಿಯಲ್ಲಿ ಉಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ (ಎಂ.ಎಲ್.)ನ ಮುಖಂಡರಾದ ಉಮೇಶ್, ಕರ್ನಾಟಕ ರೈತ ಸಂಘದ ಮುಖಂಡ ಉದ್ದಯ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

