ಜಿಲ್ಲಾಧಿಕಾರಿ ಕಚೇರಿಗೆ ನಿವೇಶನ ರಹಿತರ ಮುತ್ತಿಗೆ
ಚಿಕ್ಕಮಗಳೂರು: ನಿವೇಶನಕ್ಕೆ ಆಗ್ರಹಿಸಿ ಸಿಪಿಐ ನೇತೃತ್ವದಲ್ಲಿ ನಿವೇಶನ ರಹಿತರು ನಗರದಲ್ಲಿ ಬುಧವಾರ ಜಾಥಾ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಸುತ್ತ ಮುತ್ತ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಪ್ರತಿಭಟನೆ ನಡೆಸದಂತೆ ಈ ಹಿಂದೆ ಜಿಲ್ಲಾಡಳಿತ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಪ್ರತಿಭಟನಾಕಾರರು ಉಲ್ಲಂಘಿಸಿ, ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಕುಳಿತರು.
ಬಳಿಕ ಪ್ರತಿಭಟನಾಕಾರರನ್ನು ಮುಖಂಡರು ಮನವೊಲಿಸಿದ ನಂತರ ಸಮೀಪದಲ್ಲಿ ಹಾಕಿದ್ದ ಪೆಂಡಲ್ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಬಡವರಿಗೆ ಸೂರಿಲ್ಲ: ಈವರೆಗೆ ಅಧಿಕಾರ ನಡೆಸಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಸೂರು ನಿರ್ಮಿಸಲು ಬಡವರಿಗೆ 2 ಗುಂಟೆ ಜಾಗವನ್ನು ನೀಡುವಲ್ಲಿ ವಿಫಲವಾಗಿವೆ. ರಾಜ್ಯದಲ್ಲಿ ಶೇ. 50 ಕುಟುಂಬಗಳಿಗೆ ಸೂರಿಲ್ಲ, ಪಟ್ಟಣದ ಕೊಳಚೆ ಪ್ರದೇಶದಲ್ಲಿ ಕೂಲಿ ಲೈನುಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ಬಡವರು ಜೀವನ ನಡೆಸುತ್ತಿದ್ದಾರೆ. ಈ ಜನರಿಗೆ ಶುದ್ಧ ನೀರಿಲ್ಲ, ಕೈಗಳಿಗೆ ಕೂಲಿ ಇಲ್ಲ, ಮಕ್ಕಳಿಗೆ ಶಿಕ್ಷಣವಿಲ್ಲ ಮತ್ತು ಪೌಷ್ಟಿಕಾಂಶದ ಕೊರತೆ, ಸರಿಯಾದ ಆರೋಗ್ಯ ಸೌಲಭ್ಯಗಳಿಲ್ಲ ಇದ್ಯಾವುದು ಕೂಡ ಸರ್ಕಾರದ ಕಣ್ಣಿಗೆ ಬೀಳುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ತಮ್ಮ ಭಾಷಣದಲ್ಲಿ ಹೇಳಿದರು. ನಿವೇಶನಕ್ಕೆ ಆಗ್ರಹಿಸಿ ಮೂಡಿಗೆರೆ ತಾಲೂಕು ಪಂಚಾಯ್ತಿ ಎದುರು 29 ದಿನಗಳ ಕಾಲ ಧರಣಿ ನಡೆಸಿದ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಸ್ಥಳಕ್ಕೆ ಬಂದು, ತುರ್ತಾಗಿ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ, ಈವರೆಗೆ ಯಾವುದೇ ಕ್ರಮ ವಹಿಸಿಲ್ಲ, ಜಿಲ್ಲೆಯ ಕೆಲವೆಡೆ ಬಡವರಿಗೆ ನಿವೇಶನ ನೀಡಲು ಭೂಮಿ ಗುರುತು ಮಾಡಿದರೆ, ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಆ ಪ್ರಕ್ರಿಯೆಯನ್ನು ತಡೆ ಹಿಡಿಯುವ ಕೆಲಸ ಮಾಡಿವೆ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ರಾಧಾ ಸುಂದರೇಶ್, ಮಂಜುನಾಥ್, ವಿಜಯಕುಮಾರ್, ರಘು, ಜಾರ್ಜ್ ಆಸ್ಟೀನ್ ಹಾಗೂ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

