ಚಿಕ್ಕಮಗಳೂರು

'ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ'

Published On :

ಕಡೂರು: ಬೇಸಿಗೆ ಹತ್ತಿರವಿರುವುದರಿಂದ ಕಡೂರು, ಬೀರೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಜನ- ಜಾನುವಾರುಗಳಿಗೆ ಅಗತ್ಯ ನೀರು ಹಾಗೂ ಮೇವಿನ ಕೊರತೆ ಬಾರದಂತೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಶೇಖರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬರ ಸ್ಥಿತಿಯ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನೀರು ಮತ್ತಿತರ ಸಮಸ್ಯೆಗಳಿಗೆ ಜನವರಿ 14ರೊಳಗೆ ಕ್ರಿಯಾಯೋಜನೆ ತಯಾರಿಸಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಆದೇಶಿಸಿದರು.
ತಾಪಂ, ಪುರಸಭೆ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಪಶು ವೈದ್ಯಕೀಯ ಇಲಾಖೆಯ ವಿವರ ಕೇಳಿದಾಗ ಪಶು ವೈದ್ಯಾಧಿಕಾರಿ ಲಿಂಗರಾಜು ಮಾಹಿತಿ ನೀಡಿ, ತಾಲೂಕಿನಲ್ಲಿ ಮೇವಿನ ಸಮಸ್ಯೆ ಇಲ್ಲ.
ಪ್ರತಿ ರಾಸಿಗೆ ತಲಾ 5 ಕೆಜಿ ಮೇವು ಅಗತ್ಯವಿದ್ದು, ಒಟ್ಟಾರೆ ಪ್ರತಿದಿನ 610 ಟನ್ ಮೇವು ಬೇಕು. ತಾಲೂಕಿನಲ್ಲಿ ರಾಗಿ, ಜೋಳ, ಹಿಂಗಾರು ಜೋಳಗಳಿಂದ ಸುಮಾರು 1.28 ಟನ್ ಮೇವು ಲಭ್ಯವಿದ್ದು, ಮುಂದಿನ 6 ತಿಂಗಳವರೆಗೆ ಮೇವಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಉತ್ತರಿಸಿದರು.
ಅನೇಕ ಗ್ರಾಮಗಳಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳಲ್ಲಿ ಅಂತರ್ಜಲದ ಕೊರತೆಯಿಂದ ನೀರಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಅವರಿಗೆ ನೀರಿನ ಸಮಸ್ಯೆಗೆ ಸಂಬಂಧಪಟ್ಟಂತೆ ಕ್ರಿಯಾಯೋಜನೆಯ ಮಾಹಿತಿ ನೀಡಿ ಎಂದಾಗ ಪ್ರಭಾಕರ್‌ರಾವ್, ತಾಲೂಕಿನ ಒಟ್ಟು 71 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, 47 ಗ್ರಾಮಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಬೇಕು.
ಟ್ಯಾಂಕರ್ ಮೂಲಕ ನೀರು ನೀಡುವ ಗ್ರಾಮಗಳಿಲ್ಲ ಎಂದು ಉತ್ತರಿಸಿದಾಗ, ಕುಡಿಯುವ ನೀರಿಗೆ ಬಂದಿರುವ 8.99 ಕೋಟಿ ಅನುದಾನದಲ್ಲಿ ಕೇವಲ 2 ಕೋಟಿ ಮಾತ್ರ ಖರ್ಚಾಗಿರುವ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ವರದಿ ತರಿಸಿ: ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೂಕಪ್ಪಗೌಡ ಅವರಿಗೆ, ತಾಲೂಕಿನ ಗ್ರಾಪಂ ಕಾರ್ಯದರ್ಶಿಗಳ ಮೂಲಕ ವರದಿ ತರಿಸಿಕೊಂಡು ಕಚೇರಿಯಲ್ಲಿ ಪುರಸಭೆ ಸೇರಿದಂತೆ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿ ಜನರ ದೂರು ದಾಖಲಿಸಿ ತಮ್ಮ ಗಮನಕ್ಕೆ ತರಬೇಕು.
ಟಾಸ್ಕ್‌ಫೋರ್ಸ್ ಸಭೆ ನಡೆಸಿ ತಮ್ಮ ಅಧೀನದಲ್ಲಿರುವ ಗ್ರಾಮ ಲೆಕ್ಕಿಗರ ಹಾಗೂ ರಾಜಸ್ವ ನಿರೀಕ್ಷಕರಿಂದ ವರದಿ ತರಿಸಿಕೊಳ್ಳಬೇಕೆಂದು ತಹಸೀಲ್ದಾರರಿಗೆ ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿಗಳು ತಾಲೂಕಿನಾದ್ಯಂತ ಪ್ಲೋರೈಡ್ ನೀರಿನ ಮಾದರಿ ಸಂಗ್ರಹಿಸಿ ವರದಿ ನೀಡುವಂತೆ ಡಾ ಎಸ್. ಕೆ. ಪ್ರಭುಗೆ ಸೂಚಿಸಿದರು.
ತರೀಕೆರೆ ಉಪವಿಭಾಗಾಧಿಕಾರಿ ಅನುರಾಧ, ತಹಸೀಲ್ದಾರ್ ತಿಮ್ಮಾಭೋವಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.