ಅಂಗನವಾಡಿ ಕಾರ್ಯಕರ್ತೆಯರ ರಸ್ತೆ ತಡೆ
ಕ.ಪ್ರ. ವಾರ್ತೆ, ತರೀಕೆರೆ, ಜ.13
ತಾಲೂಕಿನ ಅಂಗನವಾಡಿ ಮತ್ತು ಸಹಾಯಕಿಯರ ಫೆಡರೇಶನ್ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಎಐಟಿಯುಸಿ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ಹಾಗೂ ಜೈಲ್ ಭರೋ ಚಳವಳಿ ನಡೆಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರಾಜು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಅಂಗನವಾಡಿ ಆರಂಭವಾದಾಗಿನಿಂದ ಇದೆ. ಕಾರ್ಯಕರ್ತೆಯರಿಗೆ ಸರ್ಕಾರದ ಸಂಬಳ ಇಲ್ಲ, ಯಾವುದೇ ರೀತಿಯ ಸರ್ಕಾರಿ ಸೌಕರರ ಸೌಲಭ್ಯ ಇಲ್ಲ, ಆದರೆ ಸರ್ಕಾರ ಕಾರ್ಯಕರ್ತರಿಂದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದೆ. ಕೇವಲ ಗೌರವ ಧನ ಮಾತ್ರ ನೀಡಿ ಕೈತೊಳೆದು ಕೊಂಡಿದೆ, ಅವರಿಗೆ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಜೈಲಿನ ವಾತಾವರಣ: ಅಂಗನವಾಡಿ ಕಾರ್ಯಕರ್ತೆಯರು ಅಕ್ಷರಶಃ ಜೈಲಿನಲ್ಲಿ ಇದ್ದಂತೆ ಇದ್ದಾರೆ. ತಮ್ಮನ್ನು ತಾವು ಜೈಲ್ ಭರೋ ಚಳವಳಿ ನಡೆಸುತ್ತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಎಲ್ಲಾ ಸ್ಥರದಲ್ಲೂ ಕಾರ್ಯ ನಿರ್ವಹಿಸುವುದು ಅಂಗನವಾಡಿ ಕಾರ್ಯಕರ್ತಯರು, ಆದರೆ ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ, ಕಾರ್ಯಕರ್ತೆಯರಿಗೆ ಮೂಲ ಸೌಲಭ್ಯ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಇಂದು ದೈನಂದಿನ ಮಾರುಕಟ್ಟೆಯಲ್ಲಿ ಅಕ್ಕಿ, ದಿನಸಿ, ಅಡುಗೆ ಅನಿಲ ಮತ್ತಿತರರ ಪದಾರ್ಥಗಳನ್ನು ಕೊಳ್ಳುವುದು ಕಷ್ಟಕರವಾಗಿದೆ. ಇಂತಹ ಸಮಯದಲ್ಲೂ ಸರ್ಕಾರ ಇವರ ನೆರವಿಗೆ ಬಾರದಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷೆ ಕೆ.ಸಿ. ವಿಜಯಕುಮಾರಿ, ಪ್ರಧಾನ ಕಾರ್ಯದರ್ಶಿ
ಕೆ.ಟಿ. ಗಾಯತ್ರಿ, ಎನ್. ನಳಿನ, ಎನ್. ಸರೋಜಮ್ಮ, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ಕಾರ್ಯಕರ್ತೆಯರು ಭಾಗವಹಿಸಿದ್ದರು. ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

