ಚಿಕ್ಕಮಗಳೂರು

ಸಾರಾಯಿ ನಿಷೇಧದಿಂದ ಆರ್ಥಿಕ ಸಂಕಷ್ಟ

Published On :

ಚಿಕ್ಕಮಗಳೂರು: ರಾಜ್ಯದಲ್ಲಿ ಮದ್ಯ ನಿಷೇಧ ಸುಲಭದ ಕೆಲಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮದ್ಯ ನಿಷೇಧ ಹೇಳಬಹುದಷ್ಟೇ, ಆದರೆ, ಅದು ಜಾರಿಗೆ ತರುವುದು ಕಷ್ಟ ಎಂದು ತರೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡುವಾಗ ತಿಳಿಸಿದರು.
ಸಾರಾಯಿ ಕುಡಿತದಿಂದ ಬಹಳಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಾರಾಯಿ ನಿಷೇಧ ಮಾಡಬೇಕು ಎಂದು ಮಹಿಳೆಯರು ಬಹಳ ಒತ್ತಾಯಿಸಿದ್ದರು. ಅದ್ದರಿಂದ ಹಿಂದಿನ ಸರ್ಕಾರ ಸಾರಾಯಿ ನಿಷೇಧ ಮಾಡಿತ್ತು. ಆದರೆ, ಸಾರಾಯಿ ಕುಡಿಯುವುದನ್ನು ಬಿಟ್ಟು ಬೇರೆ ಮದ್ಯ ಕುಡಿಯಲು ಆರಂಭಿಸಿದರು. ಇದರಿಂದಾಗಿ ಇನ್ನಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಕಾರಣದಿಂದಲೇ ಸಾರಾಯಿ ನಿಷೇಧ ಮಾಡಬಾರದಿತ್ತು ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಗುಜರಾತ್‌ನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ, ಅಲ್ಲಿ ಮದ್ಯಪಾನ ಮುಂದುವರಿದಿದೆ. ರಾಜ್ಯದಲ್ಲಿಯೂ ಹಿಂದಿನ ಸರ್ಕಾರ ಸಾರಾಯಿ ನಿಷೇಧ ಮಾಡಿದೆ. ಮತ್ತೆ ಸಾರಾಯಿ ಮಾರಾಟದ ಚಿಂತನೆ ನಡೆಸಿಲ್ಲ ಎಂದು ಹೇಳಿದರು.
ಗೌಡರಿಗೇನು ತೊಂದ್ರೆ?: ಅಹಿಂದ ನಾವು  ಹುಟ್ಟು ಹಾಕಿದ ಸಂಘಟನೆ ಅಲ್ಲ. ಕಳೆದ 10 ವರ್ಷದ ಹಿಂದೆಯೇ ಹಿಂದುಳಿದವರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಅವರ ದಶಮಾನೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿದ್ದರು. ಅದುದರಿಂದ ಭಾಗವಹಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು. ಅಹಿಂದ ಒಂದು ಭ್ರಮೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಿಶ್ಲೇಷಣೆ ಮಾಡಿರುವ ಬಗ್ಗೆ ಸುದ್ದಿಗಾರರು ಕೇಳಿದ  ಪ್ರಶ್ನೆಗೆ ಹಿಂದುಳಿದ ವರ್ಗಗಳು ಸಂಘಟಿತರಾಗಿ ಸಮಾವೇಶ ನಡೆಸಿದರೆ ಇವರಿಗೇನು ತೊಂದರೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಹಿಂದ ಒಂದಾದರೆ ದೇವೇಗೌಡರ ಕುರ್ಚಿ ಅಲ್ಲಾಡುತ್ತದೆಯೇ ಎಂದು ಸುದ್ದಿಗಾರರು ಮರು ಪ್ರಶ್ನಿಸಿದಾಗ ಅವರಿಗೆ ಕುರ್ಚಿಯೇ ಇಲ್ಲ ವ್ಯಂಗ್ಯವಾಡಿದರು.
ಸತ್ಯವಿಲ್ಲದ ಮಾತು: ರಾಜ್ಯದ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪ ಮಾಡಿರುವ ಬಗ್ಗೆ ಕೇಳಿದಾಗ ಕೆಜೆಪಿಯಲ್ಲಿದ್ದರೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಪುನಃ ಬಿಜೆಪಿಗೆ ಬಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಭ್ರಷ್ಟಾಚಾರ ಆರಂಭವಾಯಿತು. ಅವರು ಜೈಲಿಗೆ ಹೋಗಿ ಬಂದ್ರು, ಅವರಿಗೆ ನಮ್ಮ ವಿರುದ್ಧ ಮಾತನಾಡಲು ಏನೂ ಇಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.