ಚಿಕ್ಕಮಗಳೂರು

ಖರೀದಿ ಕೇಂದ್ರ ಗೋದಾಮು ಖಾಲಿ ಖಾಲಿ!

Published On :

ಯಡೆಗೆರೆ ಮಂಜುನಾಥ್
ನರಸಿಂಹರಾಜಪುರ: ಬತ್ತ ಬೆಳೆಯುವ ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರವು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಬೆಂಬಲ ಬೆಲೆ ನೀಡಿ ಬತ್ತ ಖರೀದಿ ಕೇಂದ್ರ ಪ್ರಾರಂಭಿಸಿ ಒಂದು ತಿಂಗಳಾದರೂ ರೈತರು ಒಂದು ಮೂಟೆ ಬತ್ತ ಸಹ ಖರೀದಿ ಕೇಂದ್ರಕ್ಕೆ ಮಾರಾಟ ಮಾಡದೆ ಗೋದಾಮು ಮಾತ್ರ ಖಾಲಿಯಾಗೇ ಇದೆ.
ಗದ್ದೆ ಕೊಯ್ಲು ಮುಗಿಸಿದ ರೈತರು ಹಣಕ್ಕಾಗಿ ಕಡಿಮೆ ಬೆಲೆಯಲ್ಲಿ ವ್ಯಾಪಾರಿಗಳಿಗೆ ಬತ್ತ ಮಾರಿ ಲುಕ್ಷಾನು ಅನುಭವಿಸುತ್ತಾರೆ ಎಂದು ಸರ್ಕಾರವು 1 ಕ್ವಿಂಟಾಲ್ ಬತ್ತಕ್ಕೆ 1600 ಬೆಂಬಲ ಬೆಲೆ ನೀಡಿ ಹಳೇ ಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿಯ ಸಮುದಾಯ ಭವನದ ಗೋದಾಮಿನಲ್ಲಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿತ್ತು. ಜೆ.ಜೆ.ಎಲ್. ಸೋನಾ (ಸಣ್ಣ) ಜಯ, 1001, 1010, 64 ಮುಂತಾದ ತಳಿಗಳ ಬತ್ತವನ್ನು ಒಂದು ಕ್ವಿಂಟಾಲ್‌ಗೆ 1600 ನೀಡುವುದಾಗಿ ತಿಳಿಸಿತ್ತು. ಡಿಸೆಂಬರ್ ಮೊದಲನೇ ವಾರದಲ್ಲಿ ಉದ್ಘಾಟನೆಗೊಂಡು ಡಿ.14 ರಿಂದ ಬತ್ತ ಖರೀದಿ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, 1 ತಿಂಗಳು ಕಳೆದರೂ ಯಾವ ರೈತರು ಬತ್ತ ತರುತ್ತಿಲ್ಲ. ಹಲವು ರೈತರು ಬತ್ತ ತರುತ್ತೇವೆ ಎಂದು ಹೋದವರು ಮತ್ತೆ ಬಂದಿಲ್ಲ. ಕೆಲವರು ತಮ್ಮ ಹೆಸರು ಬರೆಯಲು ಹೇಳಿ ಹೋಗಿದ್ದಾರೆ. ಮುಂದೆ ಬರಬಹುದು ಎನ್ನುತ್ತಾರೆ ಖರೀದಿ ಕೇಂದ್ರದ ಅಧಿಕಾರಿ ರಮಾನಂದ.
ಮಾರುಕಟ್ಟೆ ಧಾರಣೆ ಕಡಿಮೆ:  ಈ ವರ್ಷ ಮಾರುಕಟ್ಟೆಯಲ್ಲಿ ಐಇಟಿ ಬತ್ತವು ಕೇವಲ 1100 ರಿಂದ 1250 ರವರೆಗೆ ಮಾತ್ರ ಇದೆ. ಮಲ್ಲಿಗೆ, ಜಯ, 1001, ತುಂಗಾ ಬತ್ತವು ಕ್ವಿಂಟಾಲ್‌ಗೆ 1300 ರವರೆಗೆ ಮಾತ್ರ ಧಾರಣೆ ಇದೆ. ಬತ್ತ ಖರೀದಿ ಕೇಂದ್ರಕ್ಕೆ ಹಾಕಿದರೆ 1 ಕ್ವಿಂಟಾಲ್‌ಗೆ 300 ಹೆಚ್ಚಿಗೆ ಸಿಗಲಿದೆ.
ಆದರೂ ರೈತರು ಬತ್ತ ಖರೀದಿ ಕೇಂದ್ರಕ್ಕೆ ಯಾಕೆ ಬತ್ತ ತರುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಕೆಲವು ರೈತರ ಅನಿಸಿಕೆ ಪ್ರಕಾರ ಕೆಎಎಫ್‌ಸಿಯ ಕಟ್ಟುನಿಟ್ಟಿನ ನಿಯಮಗಳಿಂದಾಗಿ ರೈತರು ಬತ್ತ ತರುತ್ತಿಲ್ಲ. ಮುಖ್ಯವಾಗಿ ಬತ್ತದ ಗುಣಮಟ್ಟ ಉತ್ತಮವಾಗಿರಬೇಕು. ಬತ್ತದಲ್ಲಿ ತೇವಾಂಶ ಇರಬಾರದು.
ಜೊಳ್ಳು ಬತ್ತದ ಪರೀಕ್ಷೆಗಾಗಿ ನೀರಿಗೆ ಹಾಕಿ ನೋಡುತ್ತಾರೆ. ಕಲ್ಲು, ಮಣ್ಣು ಇರಬಾರದು. 50 ಕೆ.ಜಿ.ಯ ಚೀಲವೇ ತರಬೇಕು. ಅಗತ್ಯ ದಾಖಲೆಗಳನ್ನು ನೀಡಬೇಕು. ಈ ಎಲ್ಲ ನಿಯಮಗಳಲ್ಲಿ ಪಾಸಾಗಿ ಬತ್ತ ನೀಡಿದರೂ ಅಂದೇ ಹಣ ನೀಡುವುದಿಲ್ಲ. ಹಣ ಬರುವುದು ಲೇಟಾಗುತ್ತದೆ ಎಂದು ದೂರುತ್ತಾರೆ. ಇನ್ನು ಕೆಲವು ರೈತರು ಒಕ್ಕಲಾಟ ಮಾಡಿಲ್ಲ. ಮುಂದಿನ 15 ದಿನಗಳಲ್ಲಿ ಬತ್ತ ತರುತ್ತೇವೆ ಎನ್ನುತ್ತಾರೆ. ಇನ್ನು ಕೆಲವು ರೈತರ ಪ್ರಕಾರ ಸರ್ಕಾರವು ಅಕ್ಕಿ ಗಿರಣಿಯವರಿಗೆ ಲೆವಿ ಕಡ್ಡಾಯ ಮಾಡಿರುವುದರಿಂದ ಮುಂದಿನ 6 ತಿಂಗಳು ಕಾದರೆ ಮಾರುಕಟ್ಟೆಯಲ್ಲಿ ಬತ್ತದ ಧಾರಣೆ ಏರಿಕೆ ಉಂಟಾಗಿ ಕನಿಷ್ಠ 2000 ಸಿಗಬಹುದು ಎಂದು ಬತ್ತ ದಾಸ್ತಾನು ಮಾಡುತ್ತೇವೆ ಎನ್ನುತ್ತಾರೆ.
ಸಾಲದ ಸಮಸ್ಯೆ:  ಕೆಲವು ರೈತರು ಮಳೆಗಾಲದಲ್ಲೇ ವ್ಯಾಪಾರಿಗಳಿಂದ ಸಾಲ ಮಾಡಿದ್ದು ಬತ್ತವನ್ನು ಅವರಿಗೆ ಕೂಡಲೇ ಬೇಕಾದ ಅನಿವಾರ್ಯತೆ ಇರುವುದರಿಂದ ವ್ಯಾಪಾರಿಗಳಿಗೆ ಕೊಡುತ್ತಾರೆ ಎನ್ನುತ್ತಾರೆ ರೈತರಾದ ಮಾಳೂರು ದಿಣ್ಣೆ  ಪ್ರವೀಣ.
ಮಾ.31ರವರೆಗೆ...:  ಮಾ.31 ರವರೆಗೆ ಬತ್ತವನ್ನು ಖರೀದಿ ಕೇಂದ್ರಕ್ಕೆ ತರಲು ಅವಕಾಶವಿದೆ. ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿ ರೂಪ. ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ನರಸಿಂಹರಾಜಪುರ ತಾಲೂಕಿನ ರೈತರು ಲಕ್ಕವಳ್ಳಿ ಬತ್ತದ ಖರೀದಿ ಕೇಂದ್ರಕ್ಕೆ ಹೋಗಲು ದೂರವಾಗುತ್ತದೆ ಎಂಬ ಉದ್ದೇಶದಿಂದ ನರಸಿಂಹರಾಜಪುರದಲ್ಲಿ ಬತ್ತ ಖರೀದಿ ಕೇಂದ್ರ ತೆರೆದಿದ್ದರೂ ಇದುವರೆಗೂ ರೈತರು ಬತ್ತ ತಂದಿಲ್ಲ.
ಬತ್ತ ನೀಡಿದರೆ ಹಣ ನೀಡುವುದು ತಡವಾಗುತ್ತದೆ ಎಂಬ ಭಾವನೆ ಕೆಲವು ರೈತರಲ್ಲಿ ಇರಬಹುದು. ಕನಿಷ್ಠ 7 ರಿಂದ 10 ದಿನಗಳ ಒಳಗೆ ಹಣವನ್ನು ರೈತರ ಬ್ಯಾಂಕಿನ ಖಾತೆಗೆ ಜಮಾ ಮಾಡುತ್ತೇವೆ ಎಂದರು.
ತರೀಕೆರೆ ಬತ್ತದ ಖರೀದಿ ಕೇಂದ್ರದಲ್ಲಿ ಈಗಾಗಲೇ 1800 ಕ್ವಿಂಟಾಲ್ ಬತ್ತ ಬಂದಿದೆ. ಕಡೂರು, ಕೊಪ್ಪದಲ್ಲೂ ರೈತರು ಬತ್ತ ತಂದಿದ್ದಾರೆ. ಆದರೆ, ನರಸಿಂಹರಾಜಪುರದಲ್ಲಿ ಮಾತ್ರ ರೈತರು ಬತ್ತ ಖರೀದಿ ಕೇಂದ್ರಕ್ಕೆ ಬತ್ತ ತಂದಿಲ್ಲ. ಮಾ.31 ರ ವರೆಗೆ ಸಮಯವಿದೆ. ರೈತರು ಉತ್ತಮ ಗುಣಮಟ್ಟದ ಬತ್ತ ತರಲು ಅವಕಾಶ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.