ಚಿಕ್ಕಮಗಳೂರು

ಮಲೆನಾಡಲ್ಲಿ ಮರಗಳ ಲೂಟಿ: ಹಿರೇಮಠ ಆರೋಪ

Published On :

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಜ.16
ಜಿಲ್ಲೆಯ ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆಗೆ ಸೇರಿದ ಮರಗಳ ಲೂಟಿ ಮುಂದುವರೆದಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ್ ಆರೋಪಿಸಿದ್ದಾರೆ.
ಎನ್.ಆರ್. ಪುರ ತಾಲೂಕಿನ ಹಾರಂಬಳ್ಳಿ ಗ್ರಾಮದಲ್ಲಿ 95 ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆದು ಕಡೆಯಲಾಗಿದೆ. ಆದರೆ, ಆ ಮರಗಳು ಆ ಪ್ರದೇಶಕ್ಕೆ ಸೇರಿದವೋ, ಇಲ್ಲವೋ ಎಂಬ ಅನುಮಾನ ಉಂಟಾಗಿದ್ದರಿಂದ ಸ್ಥಳೀಯರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಅರಣ್ಯ ಇಲಾಖೆಯ ಜಾಗೃತಾ ದಳಕ್ಕೆ ಸೂಚಿಸಿದ್ದು, ಇಂದು ಸ್ಥಳಕ್ಕೆ ಬಂದು ಪರಿಶೀಲಿಸಿ ಈಗಾಗಲೇ ಕಡಿದಿರುವ ಮರಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಗುರುವಾರ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರು. 15 ಲಕ್ಷ ನಷ್ಟ: ನರಸಿಂಹರಾಜಪುರ ಮತ್ತು ಚಿಕ್ಕ ಅಗ್ರಹಾರ ವಲಯಕ್ಕೆ ಸೇರಿದ ಭದ್ರಾ ಹಿನ್ನೀರಿನ ಭೂಮಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಮರಗಳನ್ನು ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದರು.
 ದ್ವಾರಮಕ್ಕಿಯ ಬಡಗಬೈಲು ಗ್ರಾಮದಲ್ಲಿ ಬೀಟೆ ಮರ ಕಡಿದಿರುವ ಪ್ರಕರಣವನ್ನು ಪರಿಶೀಲಿಸಲು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗೆ ಪ್ರಭಾವಿ ವ್ಯಕ್ತಿಯೊಬ್ಬರ ಸಂಬಂಧಿ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು, ಈಗಾಗಲೇ ಪ್ರಕರಣ ದಾಖಲಾಗಿದೆ. ಜಾಮೀನು ಪಡೆಯಲು ಆತ ಮುಂದಾಗಿದ್ದಾರೆಂದು ದೂರಿದರು.
ಪಶ್ಚಿಮಘಟ್ಟ ಉಳಿಸಿ: ಪಶ್ಚಿಮಘಟ್ಟ ಪ್ರದೇಶವನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಈ ಜಿಲ್ಲೆಯ ಕೆಲವರು ನೀಡಿದ ಮಾಹಿತಿ ಮೇರೆಗೆ ಮರ ಕಡಿತಲೆ ಪ್ರಕರಣವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ದೂರು ನೀಡುವ ಮೂಲಕ ಸಂಬಂಧಿಸಿದವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಿದರು.
 ಲೋಕಸತ್ತಾ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ನಿಂತರೆ ತಮಗೆ ಹತ್ತಿರವಿರುವವರನ್ನು ಬೆಂಬಲಿಸಲಾಗುವುದು ಎಂದು ಎಸ್.ಆರ್. ಹಿರೇಮಠ್ ಹೇಳಿದರು.
ತಾರ್ಕಿಕ ಅಂತ್ಯ: ಸಚಿವ ಡಿ.ಕೆ. ಶಿವಕುಮಾರ್ ರಾಜಕೀಯ ಕ್ಷೇತ್ರಕ್ಕೆ ಬರಲಿ ಎಂದು ಹೇಳಿಕೆ ನೀಡಿರುವ ಕುರಿತು ಗಮನಸೆಳೆದಾಗ, ಅವರಿಗೆ ಸಂಬಂಧಿಸಿದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದೆಂದರು.
ಪ್ರಜಾಪ್ರಭುತ್ವ ಉಳಿಸಿ ವೇದಿಕೆಯ ನಾಗೇಶ್ ಅಂಗೀರಸ, ನರಸಿಂಹರಾಜಪುರದ ವಾಸುದೇವ ಕೋಟ್ಯಾನ್, ಕಳಸದ ರಾಮಮೂರ್ತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.