ಬಸ್ಸು ಡಿಕ್ಕಿ: ಬೈಕ್ ಸವಾರ ಸಾವು
ಕಡೂರು: ಪಟ್ಟಣದಲ್ಲಿ ಶನಿವಾರ ಸಾರಿಗೆ ಸಂಸ್ಥೆ ಬಸ್ಸು ಮತ್ತು ಬೈಕ್ ನಡುವೆ ನಡೆದ ಅಪಘಾತ ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ದಿಢೀರೆಂದು ಸಾರಿಗೆ ಸಂಸ್ಥೆ ವಿರುದ್ಧ ಬಸ್ಸುಗಳನ್ನು ಅಡ್ಡಹಾಕಿ ಪ್ರತಿಭಟಿಸಿದ ಘಟನೆ ನಡೆಯಿತು. ಪಟ್ಟಣದ ಭೋವಿ ಕಾಲೋನಿಯ ಮೋಹನ್ ಕುಮಾರ್ ಅಲಿಯಾಸ್ ಮನು (18) ಮೃತ ಯುವಕ. ಐಟಿಐ ವ್ಯಾಸಂಗ ಮಾಡುತ್ತಿದ್ದ ಈತ ಶನಿವಾರ ಕಡೂರು ಪಟ್ಟಣದ ಕೆ.ಎಂ. ರಸ್ತೆಯಲ್ಲಿರುವ ಕನಕ ವೃತ್ತದಿಂದ ಬಸನೇಶ್ವರ ವೃತ್ತದ ಕಡೆ ತನ್ನ ಬೈಕಿನಲ್ಲಿ ಹೋಗುತ್ತಿದ್ದ. ಇದೇ ಸಂದರ್ಭದಲ್ಲಿ ಕುಪ್ಪಾಳು ಗ್ರಾಮಾಂತರ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬಸ್ಸು ತಡೆದು ಪ್ರತಿಭಟನೆ: ಸಂಬಂಧಿಕರು ಹಾಗೂ ಸಾರ್ವಜನಿಕರು ಜೆಡಿಎಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಮತ್ತು ರಾಜಣ್ಣ ನೇತೃತ್ವದಲ್ಲಿ ಸಾರಿಗೆ ಬಸ್ಸು ನಿಲ್ದಾಣದ ಮುಂದೆ ಜಮಾಯಿಸಿ ಹಲವಾರು ಬಸ್ಸುಗಳನ್ನು ತಡೆದು ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಆಗಮಿಸಿ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಘಟನೆ ಕುರಿತು ಮುಖಂಡರೊಂದಿಗೆ ಚರ್ಚಿಸಿದರು.
ವಿಮಾ ಯೋಜನೆಗೆ ನೋಂದಣಿ
ನರಸಿಂಹರಾಜಪುರ: ಕರ್ನಾಟಕ ರಾಜ್ಯ ಖಾಸಗೀ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿ ಉಚಿತ ಅಪಘಾತ ವಿಮಾ ಯೋಜನೆಗೆ ಚಾಲಕರನ್ನು ನೋಂದಣಿ ಮಾಡಿಸಿಕೊಡುವ ಕಾರ್ಯಕ್ರಮವನ್ನು ಚೈತನ್ಯ ಯುವಕ ಸಂಘವು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ. ಉಚಿತ ವಿಮಾ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಚಾಲನಾ ಪರವಾನಿಗೆ ಪಡೆದ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ. ಚಾಲಕರು ಒಂದು ಬಾರಿ ಮಾತ್ರ 25 ನೋಂದಣಿ ಶುಲ್ಕ ಪಾವ್ತಿಸಿದರೆ ಸಾಕು. ಸಂಪೂರ್ಣ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರವು ಭರಿಸುತ್ತದೆ. ಚಾಲಕರ ವಯೋವುತಿ 20 ರಿಂದ 70 ವರ್ಷಗಳಾಗಿರುತ್ತದೆ. ವಿಮಾ ಮೊತ್ತವು ಗರಿಷ್ಟ 2 ಲಕ್ಷ. ಆಟೋ, ಟ್ಯಾಕ್ಷಿ, ಮ್ಯಾಕ್ಷಿ, ಕ್ಯಾಬ್, ಲಾರಿ ಮತ್ತು ಬಸ್ಸು ಚಾಲಕರು ವಿಮೆ ಮಾಡಿಸಿಕೊಳ್ಳಬಹುದು. ನರಸಿಂಹರಾಜಪುರ ಪಟ್ಟಣದ ತರಕಾರಿ ಮಾರುಕಟ್ಟೆಯ ಎದರು ಭಾಗದ ವಿಶ್ವಜಿತ್ ಅಂಗಡಿಯಲ್ಲಿ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಉಚಿತ ನೋಂದಣಿ ಮಾಡಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ - 9886135989 ಅಥವಾ 9060980533 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

