ಚಿಕ್ಕಮಗಳೂರು

ಆತ್ಮಬಲದ ಮೇಲೆ ನಿಂತರೆ ಉನ್ನತ ಶ್ರೇಣಿ

Published On :

ಚಿಕ್ಕಮಗಳೂರು: ಪ್ರಾಚಾರ್ಯರು ನನಗೆ ಹತ್ರ, ಅವರ ಪಕ್ಕದಲ್ಲಿ ಕುಳಿತವರು ನನ್ನ ಮಿತ್ರ, ಮಕ್ಕಳಿಂದ ಮುದುಕರೊರೆಗು ಎಲ್ಲರೂ ನನ್ನ ಸ್ನೇಹಿತರು ಅನ್ನುವುದೇ ಸ್ತೋತ್ರ, ಅದೇ ಈ ಪೂಜಾರಪ್ಪನ ಗೋತ್ರ.
- ಇದು, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಉವಾಚಿಸಿದ ಪ್ರಾಸಬದ್ಧ ಸೂತ್ರ.
ನಗರದ ಬಸವನಹಳ್ಳಿ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಾಹನಗಳ ಅಪಘಾತಕ್ಕೆ ವೇಗ ಕಾರಣ, ಹುಡುಗ- ಹುಡುಗಿಯರ ಅಪಘಾತಕ್ಕೆ ಹುಡುಗಿಯರ ಡ್ರೆಸ್‌ಕೋಡ್ ಕಾರಣ, ಜಾರಿ ಬೀಳುವುದು ಸ್ವಾಭಾವಿಕ, ಎಚ್ಚರ ವಹಿಸಿ ಬೀಳದ ಹಾಗೆ ನಡೆಯುವುದು ವಿವೇಕ. ಬೀಗುವುದು ಬದುಕಲ್ಲ ಬಾಗಿ ನಡೆಯುವುದೇ ಬದುಕು ಎಂದ ಹೇಳಿದರು.
ನಿಮ್ಮ ರೂಪ ಪೋಷಕರು ನೀಡಿದ ಬಹುಮಾನ, ಸುಂದರವಾದ ಬದುಕು ರೂಢಿಸಿಕೊಂಡರೆ ಅದೇ ಪೋಷಕರಿಗೆ ನೀವು ಕೊಡುವ ದೊಡ್ಡ ಕಾಣಿಕೆ ಎಂದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಕೈಬಲ, ಕಾಲ್ಬಲದ ಮೇಲೆ ನಿಲ್ಲಬೇಡಿ, ಆತ್ಮಬಲದ ಮೇಲೆ ನಿಂತರೆ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಓದಿದ ಶಾಲೆ, ಶಿಕ್ಷಕರು, ಪೋಷಕರ ಜತೆ ಸಮಾಜಕ್ಕೂ ಕೀರ್ತಿ ತರುತ್ತೀರೆಂದರು.
ಮೂಲ ಆಶಯ: ಶ್ರೇಯಾಂಕ ತಪ್ಪಿ ಕೃಪಾಂಕಕ್ಕೆ ಮುಗಿ ಬೀಳುತ್ತಿದ್ದೇವೆ. ಇದರಿಂದ ವಿದ್ಯಾಭ್ಯಾಸದ ಮೂಲ ಆಶಯ ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಕಣ್ಣನ್, ಪ್ರಾಮಾಣಿಕತೆ ಕಳೆದುಕೊಂಡರೆ ಜೀವನದ ಹಾದಿ ತಪ್ಪುತ್ತದೆ. ಹೈವೆ ರಸ್ತೆಯಲ್ಲಿ ನಡೆಯಬೇಕೆ ಹೊರತು ಗಲ್ಲಿಯಲ್ಲಿ ನಡೆಯಬಾರದು ಎಂದು ಸೂಕ್ಷ್ಮವಾಗಿ ತಿಳಿಸಿದರು.
ವಿವೇಕಾನಂದರ ವಾಣಿಯನ್ನು ಆಲಿಸಿದ ಇವಾ ಇನ್ನಾಲಿಂಡಾ ಮಡೋಡಿ ಮರೀನಾ ಎಂಬ ಊರುದ್ದ ಹೆಸರಿನ ವಿದೇಶಿ ಮಹಿಳೆ ಯೋಗ ವಿದ್ಯಾಭ್ಯಾಸದ ನಮ್ಮ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಜತೆಗೆ ಗಣರಾಜೋತ್ಸವದ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನೀಡುವ ಪರಮವೀರ ಚಕ್ರದ ಮೇಲಿರುವ ಡಯಲ್ ಚಿತ್ರವನ್ನು ಮುದ್ರಿಸಲು ಸಲಹೆ ನೀಡಿದವರು ಮರೀನಾ ಆಗಿರಬೇಕಾದರೆ ಕನ್ನಡಿಗರಿಗೆ ಮಾತೃಭಾಷೆ ಮಾತನಾಡಲು ಅಸಡ್ಡೆ, ಭಯ ಜತೆಗೆ ಭೂಕಂಪ ಬಡಿದಿರುವುದೇಕೆ ಎಂದು ಪ್ರಶ್ನಿಸಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಸಿ ಸಂಸ್ಕೃತಿ ಉಳಿಸಿ ಬೆಳೆಸೋಣ ಎಂದರು.
ಸಹಕಾರಿ: ಎಸ್‌ಡಿಎಂಸಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಇಂದಿನ ಯುಗ ಮಾನಸದಲ್ಲಿ ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ, ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಅಂಕ ಪಡೆದುಕೊಳ್ಳುವ ಮೂಲಕ ಪೋಷಕರು ಮತ್ತು ವಿದ್ಯೆ ಕಲಿಸಿಕೊಟ್ಟ ಗುರುಗಳಿಗೂ ಹೆಸರು ತರುವಂತಾಗಬೇಕು. ಈ ಸಂಬಂಧ ಶಾಲೆಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ.
ಕಾಲೇಜಿನ ಕೆಲವು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ದೇಶಾದ್ಯಂತ ಬೆಳಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಪ್ರಾಚಾರ್ಯರಾದ ಸುಮಿತ್ರಾ, ನಗರಸಭಾ ಸದಸ್ಯ ಅಬ್ದುಲ್ ರೆಹಮಾನ್ ಖುರೇಶಿ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಆಶಾ, ಮಂಜುಳಾ, ರಮಾ ರಾಮಚಂದ್ರ, ನೀಲಾಂಬಿಕ, ಕೆನರಾ ಬ್ಯಾಂಕ್ ಅಧಿಕಾರಿ ಬಸವರಾಜು, ಉಪನ್ಯಾಸಕರಾದ ವಿರೂಪಾಕ್ಷ, ದಯಾನಂದ್, ಲಕ್ಷ್ಮೀಕಾಂತ್, ನಂಜುಂಡಪ್ಪ, ಧರ್ಮಶೆಟ್ಟಿ, ಪುರುಷೋತ್ತಮ್, ಸತ್ಯನಾರಾಯಣ್, ಜಾನವಿ, ಮಿಲನ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.