ಚಿಕ್ಕಮಗಳೂರು

ಇಂಧನ ದರ ಏರಿಕೆ ವಿರುದ್ಧ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಕೊಪ್ಪ  ಜ.20
ಕೇಂದ್ರ ಸರ್ಕಾರ ಆಟೋ ಗ್ಯಾಸ್ ಹಾಗೂ ಡೀಸೆಲ್, ಪೆಟ್ರೋಲ್ ದರ ಏರಿಸಿರುವುದನ್ನು ವಿರೋಧಿಸಿ ತಾಲೂಕಿನ ಆಟೋ ಚಾಲಕರು ಮತ್ತು ಮಾಲೀಕರು ಸೋಮವಾರ ಮುಷ್ಕರ ನಡೆಸಿದರು.
ತಾಲೂಕಿನಲ್ಲಿ ಆಟೋಗಳ ಸಂಚಾರ ಸಂಪೂರ್ಣ ಸ್ಥತಗಿತಗೊಂಡಿದ್ದರ ಪರಿಣಾಮ ಹಳ್ಳಿಗಾಡಿನ ಜನಸಂಚಾರಕ್ಕೆ ಹಾಗೂ ರೋಗಿಗಳು ಆಸ್ಪತ್ರೆಗೆ ತೆರಳಲು ತೀವ್ರವಾದ ಅಡ್ಡಿಯುಂಟಾದ ಘಟನೆಗಳು ನಡೆದವು.
ಪಟ್ಟಣ ಮೇಲಿನ ಪೇಟೆ ಕುವೆಂಪು ವೃತ್ತದಿಂದ ಬಾಳಗಡಿಯ ತಾಲೂಕು ಕಚೇರಿವರಿಗೆ ಆಟೋ ಚಾಲಕರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ದ್ಯಾವೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಟೋ ಚಾಲಕರು ಕೆಲ ಕಾಲ ರಸ್ತೆ ತಡೆ ಮಾಡುವ ಮೂಲಕ ತಮ್ಮ ಹಕ್ಕೊತ್ತಾಯ ಮಾಡಿದರು.
ಜೀವನ ನಿರ್ವಹಣೆ ಕಷ್ಟ:  ಬಸ್‌ಸ್ಟ್ಯಾಂಡ್ ಆವರಣದಲ್ಲಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಆಟೋ ಚಾಲಕರ ಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ಎಚ್.ಆರ್. ಜಗದೀಶ್ ಮಾತನಾಡಿ, ಗ್ರಾಮೀಣಮಟ್ಟದಿಂದ ನಗರ ಪ್ರದೇಶದವರೆಗೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿ ಸಮಾಜದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ಆಟೋ ಚಾಲಕರಿಗೆ ಇತೀಚಿನ ದಿನಗಳಿಂದ ಕೇಂದ್ರ ಸರ್ಕಾರ ಅನಿಯಮಿತವಾಗಿ ಏರಿಕೆ ಮಾಡುತ್ತಿರುವ ಇಂಧನ ಬೆಲೆ ಹೊರೆಯಾಗಿ ಪರಿಣಮಿಸಿ ಜೀವಿಸುವುದು ಕಷ್ಟಸಾಧ್ಯ ಎಂಬಂಥ ಪರಿಸ್ಥಿತಿಗೆ ಬಂದಿರುವುದು ದುರಂತದ ಸಂಗತಿ ಎಂದರು.
ಜನಸಾಮಾನ್ಯರಿಗೂ ಬಿಸಿ:  ಇಂಧನ ಬೆಲೆ ಏರಿಕೆ ಬಿಸಿ ಕೇವಲ ಆಟೋ ಚಾಲಕರಿಗೆ ತಟ್ಟದೇ ಪರೋಕ್ಷವಾಗಿ ಜನಸಾಮಾನ್ಯರವರೆಗೂ ತಟ್ಟುತ್ತಿರುವುದರಿಂದ ಈ ಕೂಡಲೇ ಇಂಧನಗಳ ಬೆಲೆಯನ್ನು ಇಳಿಕೆ ಮಾಡಿ ಜನರ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು. ಜನರಿಂದ ಜನಪ್ರತಿನಿಧಿಯೇ ಹೊರತು ಜನಪ್ರತಿನಿಧಿಗಳಿಂದ ಜನರು ಅಲ್ಲ ಎಂಬ ಕಟು ಸತ್ಯವನ್ನು ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಂತ್ರಿಗಳು ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದಿನಗಳಲ್ಲಿ ಜನವಿರೋಧಿ ಸರ್ಕಾರಗಳು ತೀವ್ರವಾದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಅರ್ಪಣೆ:  ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಇತ್ತೀಚೆಗೆ ಕೇಂದ್ರ ಸರ್ಕಾರ ಆಟೋ ಗ್ಯಾಸ್ ದರವನ್ನು 11.10 ರಷ್ಟು, ಸಬ್ಸಿಡಿ ರಹಿತ ಎಲ್‌ಪಿಜಿ ದರ 220 ಹಾಗೂ ವಾಣಿಜ್ಯ ಗ್ಯಾಸ್ ದರ 560 ಹೆಚ್ಚಿಸಿ ಪೆಟ್ರೋಲ್ ಡಿಸೇಲ್ ದರದಿಂದ ಚಾಲಕರು ಗ್ರಾಹಕರಿಗೆ ತೀವ್ರ ರೀತಿಯ ತೊಂದರೆಯಾಗಿದೆ. ಕೂಡಲೇ ದರ ಇಳಿಕೆ ಮಾಡಿ ಹಿಂದಿನ ದರದಲ್ಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ತಹಸೀಲ್ದಾರ್ ಅವರಿಗೆ ಮನವಿ ನೀಡಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜು, ಅಧ್ಯಕ್ಷ ಎಲ್.ಕೆ. ರಾಘವೇಂದ್ರ, ನಿಲುವಾಗಿಲು ಆಟೋ ಸಂಘ ಉಮೇಶ್, ಹರಿಹರಪುರದ ವಿಜೇಂದ್ರ, ಜಯಪುರದ ವಿನ್ಸೆಂಟ್, ಕುದುರೆಗುಂಡಿಯ ಸತ್ಯಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.