'ಕರಗಡ'ಕ್ಕೆ ಆಗ್ರಹಿಸಿ 25ರಂದು ಬೈಕ್ ಜಾಥಾ
ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜ. 25ರಂದು ಚಿಕ್ಕದೇವನೂರಿನಿಂದ ಚಿಕ್ಕಮಗಳೂರುವರೆಗೆ ಬೈಕ್ ಜಾಥಾ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಚಿಕ್ಕದೇವನೂರಿನಿಂದ ಹೊರಡಲಿರುವ ಬೈಕ್ ಜಾಥಾ ಚಿಕ್ಕಮಗಳೂರಿಗೆ ತಲುಪಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಈಶ್ವರಹಳ್ಳಿ, ಬೆಳವಾಡಿ ಮತ್ತು ಕಡೂರು ತಾಲೂಕಿನ ನಿಡಘಟ್ಟ, ನಾಗರಾಳು, ದೇವನೂರು ಕೆರೆಗಳು ಸೇರಿದಂತೆ ಸುಮಾರು 60 ಹಳ್ಳಿಗಳ ಕೆರೆಗಳಿಗೆ ನೀರೊದಗಿಸುವ ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ. ಕಳೆದ 30 ವರ್ಷಗಳ ಹಿಂದೆಯೇ ಯೋಜನೆಗೆ ಚಾಲನೆ ದೊರೆತಿದ್ದರೂ ಬದಲಾದ ಸರ್ಕಾರಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ಪೂರ್ಣಗೊಳ್ಳದೆ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.
ಮುಗುಳುವಳ್ಳಿ ಪಿಕಪ್ನಿಂದ ದೇವಿಕೆರೆಗೆ 15 ಕಿಮೀ ನಾಲೆ ಇದ್ದು, ಈ ನಾಲೆ ಸಂಪೂರ್ಣ ದುರಸ್ತಿಗೊಳ್ಳಬೇಕಿದೆ. ಇದಕ್ಕೆ 4 ಕೋಟಿ ಬಿಡುಗಡೆಯಾಗಿದ್ದು, ಇನ್ನೂ 6 ರಿಂದ 7 ಕೋಟಿ ಅವಶ್ಯಕತೆ ಇದೆ. ಈ ಎರಡೂ ಕಾಮಗಾರಿಗಳು ಸರ್ಕಾರ ಹಣ ಬಿಡುಗಡೆ ಮಾಡಬೇಕು. ಈ ಕಾಮಗಾರಿಗಳು ಏಕಕಾಲದಲ್ಲಿ ಪೂರ್ಣಗೊಂಡರೆ ಮುಂದಿನ ಮಳೆಗಾಲದಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಿ ಕೆರೆ ತುಂಬಿಸಿ ಬಯಲು ಪ್ರದೇಶಕ್ಕೆ ನೀರು ಹರಿಸಬಹುದು ಎಂದು ಹೇಳಿದರು.
ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡೂರಿಗೆ ಆಗಮಿಸಿದ್ದಾಗ ಕರಗಡ ಕುಡಿಯುವ ನೀರಿನ ಯೋಜನೆಗೆ ಅಗತ್ಯವಿರುವ 15 ಕೋಟಿ ಬಿಡುಗಡೆ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜನದನಿ ಸಂಘಟನೆಯ ಸಂಚಾಲಕರಾದ ರವೀಶ್ ಕ್ಯಾತನಬೀಡು, ಬಿ. ಅಮ್ಜದ್, ದೇವನೂರು ಗ್ರಾಪಂ ಅಧ್ಯಕ್ಷ ನಟರಾಜ್ ಹಾಗೂ ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

