ಚಿಕ್ಕಮಗಳೂರು

ರೈತಪರ ಕಾಳಜಿ ಹೊಂದಿದ್ದ ವಲ್ಲಭಭಾಯ್

Published On :

ನರಸಿಂಹರಾಜಪುರ: ಸರ್ದಾರ್ ವಲ್ಲಭಾಭಾಯ್ ಪಟೇಲರ ಮೌಲ್ಯಗಳನ್ನು ದೇಶದ ಉದ್ದಗಲಕ್ಕೂ ಸಾರುವ ಅಂದೋಲನವು 2013ರ ಡಿ.13ರಂದು ಪ್ರಾರಂಭವಾಗಿದೆ. 4 ತಿಂಗಳ ಕಾಲ ದೇಶದಲ್ಲೆಡೆ ನಡೆಯಲಿದೆ ಎಂದು ಸರ್ದಾರ್ ವಲ್ಲಭಾಭಾಯ್ ಪಟೇಲರ ಅಭಿಯಾನದ ತಾಲೂಕು ಸಂಚಾಲಕ ಕೆ.ಟಿ. ವೆಂಕಟೇಶ್ ತಿಳಿಸಿದರು.
ಇಲ್ಲಿನ ಸೀತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರಮಕ್ಕಿ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಗುರುವಾರ ಗುಜರಾತ್ನಲ್ಲಿ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ನಿಮಿತ್ತ ಲೋಹ ಸಂಗ್ರಹದ ಅಭಿಮಾನ ರಥಯಾತ್ರೆ ಆಗಮಿಸಿದ ಸಂದರ್ಭ ಅವರು ಮಾತನಾಡಿದರು.
ಗುಜರಾತ್ ರಾಜ್ಯದ ನರ್ಮದಾ ನದಿ ತಟದಲ್ಲಿ ವಿಶ್ವದಲ್ಲೇ ಅತಿ ಎತ್ತರವಾದ, ಸುಮಾರು 600 ಅಡಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಉದ್ದೇಶದಿಂದ ಅವರ ಮೌಲ್ಯಗಳನ್ನು ಸಾರುವ ರಥವು ಹೊರಟಿದೆ. ದೇಶದ 6.50 ಲಕ್ಷ ಹಳ್ಳಿಗಳಲ್ಲಿ ಈ ರಥ ಸಂಚರಿಸಲಿದೆ. ಸರ್ದಾರ್ ಪಟೇಲರು ರೈತರ ಪರವಾಗಿ ಕಾಳಜಿ ಹೊಂದಿದ್ದರಿಂದ ಪ್ರತಿ ಗ್ರಾಮದಲ್ಲೂ ರೈತರಿಂದ ಕಬ್ಬಿಣ, ಮಣ್ಣು ಸಂಗ್ರಹಿಸಲಾಗುತ್ತಿದೆ. ಈ ಮೂಲಕ ಸರ್ದಾರ್ ಪಟೇಲರ ಮೌಲ್ಯಗಳನ್ನು ಜನರಿಗೆ ತಲುಪಿಸುತ್ತ ಭಾವಾನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದರು.
ಆಂದೋಲನದ ತಾಲೂಕು ಸಹ ಸಂಚಾಲಕ ಮಣಬೂರು ರಾಜಣ್ಣ ಮಾತನಾಡಿ, ಪಟೇಲ್ ಅವರಿಗೆ ದೇಶದ 54 ರಾಜ್ಯಗಳ ಒಕ್ಕೂಟಗಳ ಜವಾಬ್ದಾರಿ ನೀಡಲಾಗಿತ್ತು. ಅವರು 53 ಒಕ್ಕೂಟಗಳನ್ನು ಒಗ್ಗೂಡಿಸಿದ್ದರು ಎಂದ ಅವರು, ಒಂದು ಕುಟಂಬದ ಹಿಡಿತಕ್ಕೆ ಸಿಕ್ಕಿದ್ದ ದೇಶದ ರಾಜಕೀಯದಿಂದ ಪಟೇಲರು ಪ್ರಧಾನಿ ಆಗುವ ಅವಕಾಶದಿಂದ ವಂಚಿತರಾಗಬೇಕಾಯಿತು ಎಂದರು.
ಅಂದು ಪಟೇಲ್ ಅವರು ಪ್ರಧಾನಿ ಆಗಿದ್ದರೆ ಇಂದು ರೈತರು ಉನ್ನತ ವ್ಯವಸ್ಥೆಗೆ ತಲುಪಿರುತ್ತಿದ್ದರು. ಸ್ವಾತಂತ್ರ ಬಂದು 67 ವರ್ಷಗಳಾದರೂ ಪಟೇಲರ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಹೇಳಿದರು.
ಮಾಜಿ ಗ್ರಾಪಂ ಅಧ್ಯಕ್ಷ ವೈ.ಎಸ್. ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಬಿ.ಬಿ. ಉಮಾ, ಗ್ರಾಪಂ ಸದಸ್ಯರಾದ ರುಕ್ಮಿಣಿಯಮ್ಮ, ಬಾಬು ಪೂಜಾರಿ, ಕೆ.ಎಸ್. ಉಮೇಶ, ಆಂದೋಲದ ಸೀತೂರು ಗ್ರಾಪಂ ಸಂಚಾಲಕ ಎ.ಎಸ್. ವೆಂಕಟರಮಣ, ಸೀತೂರು ವಿಎಸ್ಎಸ್ಎನ್ ಅಧ್ಯಕ್ಷ ವೈ.ಎಸ್. ಸುಬ್ರಮಣ್ಯ ಉಪಸ್ಥಿತರಿದ್ದರು.
ಸಂಗ್ರಹಿಸಿದ ವಸ್ತುಗಳನ್ನು ತಾಲೂಕು ಸಂಚಾಲಕ ಕೆ.ಟಿ. ವೆಂಕಟೇಶ್ ಅವರಿಗೆ ಹಸ್ತಾಂತರಿಸಲಾಯಿತು. ರಥಯಾತ್ರೆ ಖಾಂಡ್ಯ ಮಾರ್ಕಾಂಡೇಯ ದೇವಸ್ಥಾನದಲ್ಲಿ ಉದ್ಘಾಟನೆಗೊಂಡು ನಂತರ ಹುಯಿಗೆರೆ, ಮಾಗುಂಡಿ, ಬನ್ನೂರು, ಆಡುವಳ್ಳಿ, ಕರ್ಕೇಶ್ವರ, ಕಾನೂರು, ಸೀತೂರು, ಮುತ್ತಿನಕೊಪ್ಪ ತಲುಪಿ ನರಸಿಂಹರಾಜಪುರದಲ್ಲಿ ಕೊನೆಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.