ಚಿಕ್ಕಮಗಳೂರು

'ಕರಗಡ' ಕಾಮಗಾರಿ ತ್ವರಿತವಾಗಿ ಮುಗಿಸಿ

Published On :

ಚಿಕ್ಕಮಗಳೂರುಃ ಕಡೂರು, ಚಿಕ್ಕಮಗಳೂರು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುಂತೆ ಆಗ್ರಹಿಸಿ, ಈ ಯೋಜನೆಯ ವ್ಯಾಪ್ತಿಗೊಳಪಡುವ ಗ್ರಾಮಸ್ಥರು ಶನಿವಾರ ಬೈಕ್ ಜಾಥಾ ನಡೆಸಿದರು.
ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಿಂದ ಬೆಳಗ್ಗೆ ಹೊರಟ ಬೈಕ್ ಜಾಥಾ ಮಧ್ಯಾಹ್ನ 2.30ರ ವೇಳೆಗೆ ಚಿಕ್ಕಮಗಳೂರಿಗೆ ತಲುಪಿತು. ಬಳಿಕ, ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೈಕ್‌ನಲ್ಲಿಯೇ ಬಂದ ಸಾರ್ವಜನಿಕರು ನಂತರದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭವಾಗುತ್ತಿದೆ. ಇಂದಿಲ್ಲ, ನಾಳೆ ಗ್ರಾಮದ ಕೆರೆಗಳು ನೀರು ಕಾಣುತ್ತವೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಈ ಭಾಗದ ಜನರು ಇಂದು ಪ್ರತಿಭಟನಾ ಮೆರವಣಿಗೆಯಲ್ಲಿ ಕುಡಿಯಲು ನೀರು ಕೊಡಿ ಎಂಬ ಘೋಷಣೆ ಹಾಕುತ್ತಾ ಸಾಗುತ್ತಿದ್ದರು.
ಕರಗಡ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇದಕ್ಕೆ ಬೇಕಾದ ಹಣವನ್ನು ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಪತ್ರದಲ್ಲಿ ಆಗ್ರಹಿಸಿದ್ದಾರೆ.
ಪೂರ್ಣವಾಗಿಲ್ಲ: ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಈಶ್ವರಹಳ್ಳಿ, ಬೆಳವಾಡಿ ಹಾಗೂ ಕಡೂರು ತಾಲೂಕಿನ ನಿಡಘಟ್ಟ, ನಾಗರಾಳು, ದೇವನೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲ 60 ಕೆರೆಗಳಿಗೆ ನೀರು ಹರಿಸಲಿರುವ ಕರಗಡ ಕುಡಿಯುವ ನೀರಿನ ಯೋಜನೆಗೆ 30 ವರ್ಷಗಳ ಹಿಂದೆಯೇ ಚಾಲನೆ ನೀಡಿತಾದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಕರಗಡ ಬಳಿ 5 ಕಿಮೀ ಕಾಲುವೆ ನಿರ್ಮಾಣ ಮಾಡಬೇಕಾಗಿದ್ದು, 5 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದೆ, ಸದ್ಯ ಅದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಾಲ್ಕು ಸಣ್ಣ ಹಾಗೂ ಒಂದು ದೊಡ್ಡ ಸೇತುವೆ ನಿರ್ಮಾಣ ಮಾಡಬೇಕಾಗಿದ್ದು, ಈ ಕಾಮಗಾರಿ ಈವರೆಗೆ ಆರಂಭವಾಗಿಲ್ಲ. ಇದಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅಂತರ್ಜಲ ಮಟ್ಟ ವೃದ್ಧಿ: ಮುಗುಳುವಳ್ಳಿ ಪಿಕಪ್‌ನಿಂದ ದೇವಿಕೆರೆಗೆ ಅಲ್ಲಿಂದ ಕರಗಡದ ಮೂಲಕ ಕಳಸಾಪುರ, ಈಶ್ವರಹಳ್ಳಿ, ಬೆಳವಾಡಿ ಮೂಲಕ ನಿಡಘಟ್ಟ, ನಾಗರಾಳು, ದೇವನೂರು ಕೆರೆಗಳಿಗೆ ಗುರುತ್ವಾರ್ಕಣೆಯ ಮೂಲಕ ನೀರು ಹರಿಯಲಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ಸದ್ಯ ಈ ಪ್ರದೇಶದಲ್ಲಿ ವಾಸವಾಗಿರುವವರ ಜನರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಯುವಕರು ಉದ್ಯೋಗ ಅರಿಸಿ ವಯೋವೃದ್ಧ ತಂದೆ, ತಾಯಿಗಳನ್ನು ಮನೆಯಲ್ಲಿಯೇ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಜಾನುವಾರು ಸಾಕಲಾಗದೆ ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಕರಗಡ ಕುಡಿಯುವ ನೀರಿನ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕರಗಡ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿಯ ಮುಖಂಡರಾದ ಗುರುಶಾಂತಪ್ಪ, ರವೀಶ್ ಕ್ಯಾತನಬೀಡು, ಬಿ. ಅಮ್ಜದ್, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಶಿಧರ್, ಬೆಳವಾಡಿ ಶಿವಣ್ಣ, ಮುಖಂಡರಾದ ನಟರಾಜ್, ಎಸ್. ಕೊಪ್ಪಲು ಮಂಜುನಾಥ್, ಎಸ್. ಬಿದರೆ ಗಂಗಾಧರ್, ರೈತರು, ಯುವಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.