ಆಚರಣೆ ಬೇರೆಯಾದರೂ ಗುರಿ ಒಂದೇ
ಬಾಳೆಹೊನ್ನೂರು: ಸಂಸ್ಕೃತಿ ಮತ್ತು ಪರಂಪರೆಗೆ ಹೆಸರಾದ ಭಾರತ ಪುಣ್ಯ ಭೂಮಿಯಲ್ಲಿ ಹಲವು ಧರ್ಮಗಳು ಬೆಳೆದುಕೊಂಡು ಬಂದಿವೆ. ಧರ್ಮ ಹಲವಾದರೂ ಆಚರಣೆ ಬೇರೆಯಾದರೂ ಎಲ್ಲರೂ ಸೇರುವ ಗುರಿ ಒಂದೇ ಆಗಿದೆ. ಅಧ್ಯಾತ್ಮದ ತಾಯ್ನಾಡಿನಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುವುದೆಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರು ಆಯೋಜಿಸಿದ್ದ ಗುರು ಪೌರ್ಣಿಮೆ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಎಲ್ಲರಿಗೂ ಇರುವುದು ಒಂದೇ ಮನಸ್ಸು. ಆ ಚಂಚಲ ಮನಸ್ಸನ್ನು ಸಾತ್ವಿಕದ ಕಡೆಗೆ ಕರೆತಂದಾಗ ಬದುಕಿನಲ್ಲಿ ಬೆಳಕು ಮೂಡುತ್ತದೆ. ಜೀವನ ರಕ್ಷಣೆಯ ಶಿಕ್ಷಣವಿದ್ದರಷ್ಟೇ ಸಾಲದು. ಅದರ ಜತೆಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ, ತೃಪ್ತಿ ತುಂಬಿ ತರುವ ಅಧ್ಯಾತ್ಮದ ಅರಿವು ಮುಖ್ಯವಾಗಿದೆ.
ಸಂಸ್ಕಾರ ಮತ್ತು ಸಂಸ್ಕೃತಿಯಿಲ್ಲದ ಮನುಷ್ಯ ಪಶುವಿಗೆ ಸಮಾನ. ಮೌಲ್ಯಾಧಾರಿತ ಜೀವನದ ಶ್ರೇಯಸ್ಸಿಗೆ ಗುರುಕುಲ ಮಾದರಿಯ ಶಿಕ್ಷಣ ಅಗತ್ಯ ಎಂದರು.
ಜೀವನದ ಉತ್ಕರ್ಷತೆಗೆ ಕಾರಣನಾದ ಶ್ರೀಗುರುವನ್ನು ಆರಾಧಿಸಿ ಪೂಜಿಸಿ ಕೃತಜ್ಞತೆ ಸಲ್ಲಿಸುವುದೇ ನಿಜವಾದ ಗುರು ಪೌರ್ಣಿಮೆಯ ಉದ್ದೇಶವೆಂದ ಅವರು, ಗುರುಕುಲದ ವಟುಗಳು ಸಮಾಜದ ಕಣ್ಣಾಗಿ ಧರ್ಮದ ಬೆಳಕು ಬೀರಲೆಂದು ಶುಭ ಹಾರೈಸಿದರು.
ಗುರುಕುಲ ಮಾರ್ಗದರ್ಶಕರಾದ ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಗುರುಕುಲದ ಪ್ರಾಚಾರ್ಯ ಬಿ.ಎಂ. ಬಸವರಾಜಯ್ಯ, ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ಸಂಪರ್ಕಾಧಿಕಾರಿ ಪ್ರಭು ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಸದಸ್ಯರಾದ ವಿಶ್ವನಾಥ ಮತ್ತು ಎಸ್.ಎಂ. ಭೋಜೇಗೌಡರು, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರು ಉಪಸ್ಥಿತರಿದ್ದರು.
ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ವೀರಭದ್ರಸ್ವಾಮಿಗೆ, ಶಕ್ತಿಮಾತೆ ಚೌಡೇಶ್ವರಿಗೆ ಹಾಗೂ ಲಿಂ. ರಂಭಾಪುರಿ ಜಗದ್ಗುರುಗಳವರ ಗದ್ದುಗೆಗೆ ವಿಶೇಷ ಪೂಜೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

