ಔಷಧ ಕಂಡುಹಿಡಿದು 1 ಕೋಟಿ ಗೆಲ್ಲಿ
ಚಿಕ್ಕಮಗಳೂರು: ಅರೇಬಿಕಾ ಕಾಫಿ ತೋಟಗಳನ್ನು ನಾಶ ಮಾಡುತ್ತಿರುವ ಬಿಳಿಕಾಂಡ ಕೊರಕ ಕೀಟಗಳ ನಾಶಕ್ಕೆ ಪರಿಣಾಮಕಾರಿಯಾದ ಔಷಧಿಯನ್ನು ಕಂಡು ಹಿಡಿಯುವವರಿಗೆ ಕಾಫಿ ಮಂಡಳಿಯಿಂದ ಒಂದು ಕೋಟಿ ರು. ನಗದು ಬಹುಮಾನ ನೀಡಲಾಗುವುದು ಎಂದು ಮಂಡಳಿ ಸದಸ್ಯ ಡಿ.ಎಂ. ವಿಜಯ್ ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ಬಿಳಿಕಾಂಡ ಕೊರಕ ಕೀಟಗಳ ದಾಳಿಯನ್ನು ಅರೇಬಿಕಾ ತೋಟಗಳು ಎದುರಿಸುತ್ತಾ ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶದಿಂದಾಗಿ ಕಾಂಡಕೊರಕ ಕೀಟಗಳ ದಾಳಿ ವಿಪರೀತವಾಗಿರುವುದರಿಂದ ಅರೇಬಿಕಾ ತೋಟಗಳು ಬಟಾಬಯಲಾಗುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಈ ವರ್ಷವಂತೂ ಕಾಂಡಕೊರಕ ಕೀಟಗಳ ದಾಳಿಯಿಂದಾಗಿ ಪ್ರತಿ ಎಕರೆಗೆ 300ರಿಂದ 400 ಗಿಡಗಳು ನಾಶವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ. 40ರಷ್ಟು ಅರೇಬಿಕಾ ತೋಟಗಳು ಬಯಲಾಗಿವೆ ಎಂದ ಅವರು, ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು ಇದುವರೆಗೆ ಕೀಟಗಳ ನಾಶಕ್ಕೆ ನಡೆಸಿರುವ ಎಲ್ಲಾ ಪ್ರಯೋಗಗಳು ಮತ್ತು ಕಂಡುಹಿಡಿದಿರುವ ಔಷಧಿಗಳು ವ್ಯರ್ಥವಾಗಿವೆ ಎಂದು ವಿಷಾದಿಸಿದರು.
ಈ ಹಿನ್ನೆಲೆಯಲ್ಲಿ ಅರೇಬಿಕಾ ತೋಟಗಳನ್ನು ಉಳಿಸುವ ನಿಟ್ಟಿನಲ್ಲಿ ಬಿಳಿಕಾಂಡಕೊರಕ ಕೀಟಗಳ ನಾಶಕ್ಕೆ ಪರಿಣಾಮಕಾರಿಯಾದ ಔಷಧಿ ಕಂಡುಹಿಡಿಯುವವರೆಗೆ ಒಂದು ಕೋಟಿ ರು. ನಗದು ಬಹುಮಾನ ನೀಡುವ ಯೋಜನೆ ಜಾರಿಗೆ ತರುವಂತೆ ತಾವು ಈಗಾಗಲೇ ಕಾಫಿ ಮಂಡಳಿಯ ಅಧ್ಯಕ್ಷ ಜಾವೀದ್ ಅಕ್ತರ್ ಅವರಿಗೆ ಸಲಹೆ ಮಾಡಿದ್ದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಬಿಳಿಕಾಂಡಕೊರಕ ಕೀಟಗಳ ದಾಳಿಯಿಂದ ನಾಶವಾಗಿರುವ ತೋಟಗಳ ಬೆಳೆಗಾರರಿಗೆ ರೀಪ್ಲಾಂಟ್ ಆಗಿ ಇದುವರೆಗೆ ಪ್ರತಿ ಹೆಕ್ಟೇರ್ಗೆ ಕಾಫಿ ಮಂಡಳಿಯಿಂದ ನೀಡಲಾಗುತ್ತಿದ್ದ ಸಬ್ಸಿಡಿಯನ್ನು 40 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರ ಜತೆಗೆ ಕಾಫಿ ತೋಟಗಳ ಅಭಿವೃದ್ಧಿ ಕಾರ್ಯಗಳಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ಶೇ. 25ರಿಂದ 40ಕ್ಕೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಉದ್ಯಮದ ಅಭಿವೃದ್ಧಿಗೆ 932 ಕೋಟಿ ಮೀಸಲಿಡುವಂತೆ ಕೇಂದ್ರ ಸರ್ಕಾರಕ್ಕೆ ಮಂಡಳಿಯಿಂದ ಮನವಿ ಮಾಡಲಾಗಿದ್ದು, ಅದಕ್ಕೆ ಹಿಂದಿನ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ವಾಣಿಜ್ಯ ಸಚಿವರಾಗಿದ್ದ ಆನಂದ್ ಶರ್ಮ ಅವರು ಒಪ್ಪಿಗೆ ಸೂಚಿಸಿದ್ದರು ಎಂದರು.
ಕಾಫಿ ಮಂಡಳಿಯ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಯೋಜನಾ ಆಯೋಗ, ಹಣಕಾಸು ಮತ್ತು ವಾಣಿಜ್ಯ ಸಚಿವಾಲಯ ಅನುಮೋದಿಸಿದ್ದು, ಇದೀಗ ಆ ಪ್ರಸ್ತಾವನೆ ಕೇಂದ್ರ ಸಂಪುಟ ಸಮಿತಿಯ ಮುಂದಿದ್ದು, ನೂತನ ಸರ್ಕಾರ ಈ ಪ್ರಸ್ತಾವನೆಗೆ ಸ್ಪಂದಿಸುವ ಮೂಲಕ ಕಾಫಿ ಉದ್ಯಮದ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಲವ, ಕೆಜಿಎಫ್ ಸದಸ್ಯ ಈರೇಗೌಡ, ಕಾಫಿ ಬೆಳೆಗಾರರಾದ ಸುಮಿತ್ ಕುಲಕರ್ಣಿ, ಎಂ.ಎಲ್. ಸುಭಾಷ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

