ಚಿಕ್ಕಮಗಳೂರು

ಸಿಬ್ಬಂದಿ ಕೊರತೆ: ಕಾಮಗಾರಿ ಅಪೂರ್ಣ

Published On :

ಚಿಕ್ಕಮಗಳೂರು: ಜಿಲ್ಲೆಯ ಜನತೆ ವಿದ್ಯುತ್ ಅಭಾವ ಎದುರಿಸುತ್ತಿದ್ದರೆ, ಇತ್ತ ಮೆಸ್ಕಾಂ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೆಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
ರಾಜ್ಯ ಸರ್ಕಾರ ನಕ್ಸಲ್ ಪೀಡಿತ ಪ್ರದೇಶಕ್ಕೆ ಮೂಲಭೂತ ಸೌಲಭ್ಯಕ್ಕಾಗಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ 2012-13ನೇ ಸಾಲಿನಲ್ಲಿ ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಿಗೆ ರು. 15 ಕೋಟಿ ಮಂಜೂರು ಮಾಡಿದ್ದು, ಇದರಲ್ಲಿ ರು. 14.37 ಕೋಟಿ ಬಿಡುಗಡೆ ಮಾಡಿದೆ.
ಈ ಹಣದಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೆಸ್ಕಾಂ ವತಿಯಿಂದ ತೆಗೆದುಕೊಂಡಿರುವ 8 ಕಾಮಗಾರಿಗಳ ಪೈಕಿ ಈವರೆಗೆ ಒಂದೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಲೈನ್ ಮ್ಯಾನ್‌ಗಳ ಕೊರತೆ.
ಸಿಬ್ಬಂದಿ ಕೊರತೆ: ಮೆಸ್ಕಾಂ ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಗೆ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್. ಪುರ ತಾಲೂಕುಗಳು ಒಳಪಡಲಿವೆ.
ಈ ಐದು ತಾಲೂಕುಗಳಲ್ಲಿ 324 ಲೈನ್ ಮ್ಯಾನ್ ಮಂಜೂರಾತಿ ಹುದ್ದೆಗಳಿದ್ದು, ಈ ಪೈಕಿ 94 ಲೈನ್ ಮ್ಯಾನ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ 230 ಹುದ್ದೆಗಳು ಖಾಲಿ ಇವೆ. ಜ್ಯೂನಿಯರ್ ಎಂಜಿನಿಯರ್ 13 ಹುದ್ದೆಗಳ ಪೈಕಿ 10 ಹುದ್ದೆ ಭರ್ತಿಯಾಗಿದ್ದು, 3 ಹುದ್ದೆ ಖಾಲಿ ಇವೆ. ಸಹಾಯಕ ಎಂಜನಿಯರ್ 19 ಹುದ್ದೆಗಳ ಪೈಕಿ 4 ಹುದ್ದೆ ಮಾತ್ರ ಭರ್ತಿಯಾಗಿದ್ದು, 15 ಹುದ್ದೆ ಖಾಲಿ ಇವೆ.
ಕಡೂರು ವಿಭಾಗ ವ್ಯಾಪ್ತಿಯಲ್ಲಿ ಕಡೂರು ಮತ್ತು ತರೀಕೆರೆ ತಾಲೂಕುಗಳು ಒಳಪಡಲಿದ್ದು, ಇಲ್ಲಿ 271 ಮಂಜೂರಾತಿ  ಲೈನ್‌ಮ್ಯಾನ್ ಹುದ್ದೆಗಳಿದ್ದು, ಈ ಪೈಕಿ 153 ಹುದ್ದೆಗಳು ಭರ್ತಿಯಾಗಿದ್ದು, 118 ಹುದ್ದೆ ಖಾಲಿ ಇವೆ. ಜ್ಯೂನಿಯರ್ ಎಂಜಿನಿಯರಿಂಗ್ 9 ಹುದ್ದೆಗಳಲ್ಲಿ 8 ಹುದ್ದೆ ಭರ್ತಿಯಾಗಿದ್ದು, 1 ಹುದ್ದೆ ಖಾಲಿ ಇದೆ. ಸಹಾಯಕ ಎಂಜಿನಿಯರ್ ಮಂಜೂರಾತಿ 8  ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳು ಖಾಲಿ ಇವೆ.
ಒಟ್ಟಾರೆ, ಜಿಲ್ಲೆಯ ಮೆಸ್ಕಾಂ ಇಲಾಖೆ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ.


ನಕ್ಸಲ್‌ಪೀಡಿತ ಪ್ರದೇಶ
ಶೃಂಗೇರಿ ತಾಲೂಕಿನ ನೆಮ್ಮಾರು, ಬೇಗಾರು, ಮರ್ಕಲ್, ಕೆರೆ ಹಾಗೂ ಮೆಣಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು 8 ಕಾಮಗಾರಿಗಳನ್ನು ಮೆಸ್ಕಾಂ ಕೈಗೆತ್ತಿಕೊಂಡಿದೆ. ಪೈಕಿ ಕೆಲವೆಡೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ, ಈ ಕಂಬಗಳಿಗೆ ವಿದ್ಯುತ್ ಲೈನ್ ಎಳೆಯಲು ಸಿಬ್ಬಂದಿ ಕೊರತೆಯಿಂದಾಗಿ ಕಾಮಗಾರಿಗಳು ಈವರೆಗೂ ಪೂರ್ಣಗೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.