ಜಿಲ್ಲೆಯಲ್ಲಿ ನೇತ್ರಬ್ಯಾಂಕ್ ಕೊರತೆ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಜುಲೈ 28
ದೃಷ್ಟಿಹೀನರ ಬಾಳು ಬೆಳಕಾಗಿಸಲು ದಾನಿಗಳು ನೀಡುವ ನೇತ್ರಗಳನ್ನು ಶೇಖರಿಸಿಡಲು ಜಿಲ್ಲೆಯಲ್ಲಿ ನೇತ್ರ ಬ್ಯಾಂಕ್ನ ಕೊರತೆ ಇದೆ ಎಂದು ಜಿಲ್ಲಾ ಸರ್ಜನ್ ಡಾ. ಆರ್. ದೊಡ್ಡಮಲ್ಲಪ್ಪ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರ ನೇತ್ರದಾನದ ನೋಂದಣಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳು ಸ್ವಚ್ಛವಾಗಿರಬೇಕೆಂದು ಯತ್ನಿಸುವ ಮತ್ತು ಸಮಾಜವನ್ನು ಸುಸ್ಥಿತಿಯಲ್ಲಿರಿಸಲು ಮುಂದಾಗುವುದರ ಜೊತೆಗೆ ಪತ್ರಕರ್ತರು ನೇತ್ರದಾನದ ಮೂಲಕ ಸಮಾಜಸೇವೆಗೆ ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಶರೀರವೇ ನಿಜವಾದ ಆಸ್ತಿ: ಮನುಷ್ಯನಿಗೆ ಶರೀರವೇ ನಿಜವಾದ ಆಸ್ತಿ, ಆರೋಗ್ಯ ಭಾಗ್ಯ ಬೇಕಿದ್ದಲ್ಲಿ ಶರೀರ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿರಿಸಿ ಕೊಳ್ಳಬೇಕೆಂದ ಅವರು, ಪಂಚೇಂದ್ರಿಯಗಳು ಮತ್ತು ಇಡೀ ಶರೀರದಲ್ಲಿ ನೇತ್ರ ಶ್ರೇಷ್ಠ. 2 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ತನ್ನ ನೇತ್ರ ದಾನ ಮಾಡಬಹುದಾಗಿದೆ ಎಂದು ಹೇಳಿದರು.
ಎಚ್ಐವಿ, ಹೆಪಟೈಟಿಸ್ ಬಿ.ಸಿ.ಡಿ. ರೇಬಿಸ್, ಕ್ಯಾನ್ಸರ್, ಮೆದುಳು ಜ್ವರ ಇರುವಂತಹ ವ್ಯಕ್ತಿಗಳ ನೇತ್ರ
ಬೇರೊಬ್ಬರಿಗೆ ನೀಡಲು ಸಾಧ್ಯವಿಲ್ಲ. ಪ್ರತಿ ವರ್ಷ ಆಗಸ್ಟ್ 8 ರಿಂದ ಸೆಪ್ಟೆಂಬರ್ 25 ರವರೆಗೆ ನೇತ್ರದಾನದ ಅಭಿಯಾನವನ್ನು ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಪತ್ರಕರ್ತರು ನೇತ್ರದಾನಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದ್ದು, ಈ ಮೂಲಕ ನೇತ್ರದಾನ ಒಂದು ಆಂದೋಲನವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಬಸವರಾಜ್ ಮಾತನಾಡಿ, ಬಾಲ ನ್ಯಾಯ ಕಾಯ್ದೆ 2006 ರ ತಿದ್ದುಪಡಿ ಕಾಯ್ದೆಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಾಸನಬದ್ಧ ಸಮಿತಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ಇದುವರೆಗೂ ಮಕ್ಕಳ ಮೇಲಿನ 33 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ ಎಂದರು.
171 ವರ್ಷಗಳ ಇತಿಹಾಸ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಮಾತನಾಡಿ, ಭಾರತೀಯ ಪತ್ರಿಕೋದ್ಯಮಕ್ಕೆ 300 ಮತ್ತು ರಾಜ್ಯ ಪತ್ರಿಕೋದ್ಯಮಕ್ಕೆ 171 ವರ್ಷಗಳ ಇತಿಹಾಸವಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ 1843 ರ ಜುಲೈ 30 ರಂದು ಆರಂಭವಾಗಿದ್ದು, ಈ ಸವಿನೆನಪಿಗಾಗಿ ಪತ್ರಿಕಾ ದಿನಾಚರಣೆ ಅಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಆರೋಗ್ಯ ಭದ್ರತೆಗಾಗಿ ಯಶಸ್ವಿನಿ ಯೋಜನೆಯನ್ನು ತನ್ನ ಸದಸ್ಯರಿಗೆ ಸಂಘ ಒದಗಿಸಿದೆ. ಹಾಗೆಯೇ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಖಾಸಗಿ ಬಸ್ ಪಾಸ್ ಒದಗಿಸಲಾಗುವುದೆಂದರು.
ಅಂತಾರಾಷ್ಟ್ರೀಯ ಮಟ್ಟದ ಅಂಧರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಅಂಧ ವಿದ್ಯಾರ್ಥಿಗಳಾದ
ಶವಾದ್ ಮತ್ತು ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ತಾಲೂಕು ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ, ಸಂಜೀವ, ಕೃಷ್ಟಾ ನಾಯಕ್, ಜಗದೀಶ್ ಉಪಸ್ಥಿತರಿದ್ದರು. ಹಾತೂರು ಪ್ರಭಾಕರ್ ಸ್ವಾಗತಿಸಿದರು. ಸುಂದರ ಬಂಗೇರ ವಂದಿಸಿದರು. ಮಹೇಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

