ಚಿಕ್ಕಮಗಳೂರು

ದೇಹ ಇರುವುದೇ ಯೋಗದ ಅನುಸಂಧಾನಕ್ಕಾಗಿ

Published On :

ಚಿಕ್ಕಮಗಳೂರು: ಅಜ್ಞಾನದ ಕಣ್ಣನ್ನು ತೆರೆಸಲು, ಸೃಷ್ಟಿಯ ತತ್ವದ ಜೊತೆ ಸದಾ ಸಾಂಗತ್ಯಕ್ಕಾಗಿ ಇಂದ್ರಿಯಗಮ್ಯ ವ್ಯವಸ್ಥೆಯೇ ದೇವಾಲಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಜಾಗರ ಹೋಬಳಿ ಗಾಳಿಗುಡ್ಡೆ- ಸುಗುಡವಾನಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನದಲ್ಲಿ ಶ್ರೀ ಮಧುಕೇಶ್ವರಸ್ವಾಮಿಯ ಪ್ರತಿಷ್ಠಾಪನೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಕಟ ಬಂದಾಗ ವೆಂಕಟರಮಣ: ಶುದ್ಧ ಬ್ರಹ್ಮಜ್ಞಾನದ ಅರಿವಿನ ವ್ಯವಸ್ಥೆಯಲ್ಲಿ ಪ್ರಾರಂಭಿಕ ಹಂತವೇ ದೇವಾಲಯ. ದೈವದ ಇರುವಿಕೆ ನೆಲೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸುಖದಲ್ಲಿ ದೈವವನ್ನು ನೆನೆಸದ ನಮಗೆ ಕಷ್ಟ ಬಂದಾಗ ದೇವರ ನೆನಪಾಗುತ್ತದೆ. ಅಗೋಚರ, ಅದ್ವಿತೀಯ, ನಿರಾಕಾರಯಾಗಿರುವ ದೇವರ ಪಂಚಭೂತಗಳಿಗೆ ನಿಲುಕ್ಕದ್ದಾದರೂ ಜಗತ್ತನ್ನೇ ಮುನ್ನಡೆಸುತ್ತದೆ. ಆಧುನಿಕತೆಯ ಸುಳಿಗೆ ಸಿಲುಕಿರುವ ನಾವು ಅದ್ವಿತೀಯ ಶಕ್ತಿ ಇರುವುದನ್ನೇ ಕೆಲವು ಬಾರಿ ಅನುಮಾನಿಸುವ ಸಂದರ್ಭ ವಿಷಾದನೀಯ ಎಂದರು.
ದೈವದ ಸಾನ್ನಿಧ್ಯ, ಸಾಂಗತ್ಯ ಬದುಕಿನಲ್ಲಿದ್ದಾಗ ಕಷ್ಟಗಳು ಹೂ ಎತ್ತಿದಷ್ಟು ಸರಾಗ. ಭೋಗದ ಜೀವನಕ್ಕೆ ಸೃಷ್ಟಿಯಲ್ಲಿ ಬೇರೆ ಬೇರೆ ದೇಹಗಳಿವೆ. ಮನುಷ್ಯ ದೇಹ ಕೊಟ್ಟಿರುವುದೇ ಯೋಗದ ಅನುಸಂಧಾನಕ್ಕಾಗಿ ಎಂಬುದನ್ನು ಮರೆಯಬಾರದು. ದೇವರ ಕಡೆ ಮುಖ ಮಾಡಿದರೆ ಜೀವನ ಸಾರ್ಥಕವಾಗಿ ಮುಕ್ತಿಯ ಕಡೆ ಸಾಗಬಹುದು. ಜ್ಞಾನದ ಕಡೆ ನಮ್ಮ ಒಂದೊಂದು ಹೆಜ್ಜೆ ಸಾಗಬೇಕು ಎಂದ ಸ್ವಾಮೀಜಿ, ನಾವು ಮನುಷ್ಯ ರೂಪದ ಮೃಗವಾಗಬಾರದು. ಸತ್ಯ, ನಿಷ್ಠೆ, ಆನಂದ ಸ್ವರೂಪಿಗಳಾದಾಗ ಕಷ್ಟ ಪರಂಪರೆ ದೂರವಾಗುತ್ತದೆ ಎಂದು ಹೇಳಿದರು.  
ಸುಂದರ ಪ್ರಕೃತಿಯ ನಿತ್ಯಹರಿದ್ವರ್ಣದ ಕಾನನದ ನಡುವೆ ಪುಟ್ಟದಾದರೂ ಚಂದವಾದ ದೇವಾಲಯ ಕಟ್ಟಿರುವ ಭಕ್ತರನ್ನು ಅಭಿನಂದಿಸಿದ ಸ್ವಾಮೀಜಿ,  ಕುವೆಂಪು ಕೃತಿಯಲ್ಲಿ ಚಿತ್ರಿಸಿರುವ ಮಲೆನಾಡಿನ ಅನಾವರಣ ಇಲ್ಲಿದೆ ಎಂದು ಹರ್ಷಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಗೂ ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳೆಲ್ಲವೂ ಸಿಕ್ಕಾಗ ಮಾತ್ರ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳಲು ಸಾಧ್ಯ. ಆದರೆ, ಇಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಣುತ್ತಿದೆ ಎಂದರು.
ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠಾಧ್ಯಕ್ಷ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ಗುರುವಿನ ಮೂಲಕ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು.  ಗುರುವಿನಿಂದಲೇ ಜ್ಞಾನ ಅರಿವು ಮುಕ್ತಿ. ಜೀವನ ಸಾರ್ಥಕಪಡಿಸಿಕೊಳ್ಳಲು ಸತ್ಕಾರ್ಯ ಮಾಡಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಧುಕೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಂ.ಸಿ. ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿ, ಭದ್ರಾ ಅಭಯಾರಣ್ಯ ವ್ಯಾಪ್ತಿಯ ಶ್ರೀ ಮಧುಕೇಶ್ವರ ದೇವಸ್ಥಾನ ಬಿಟ್ಟು ಸ್ಥಳಾಂತರಗೊಂಡ ಕುಟುಂಬಗಳಲ್ಲಿ ಒಂಟಿತನ ಕಾಡುತ್ತಿತ್ತು. ವಿಶಿಷ್ಟವಾದ ಶ್ರೀ ಮಧುಕೇಶ್ವರನಿಗಾಗಿ ನೂತನ ದೇವಸ್ಥಾನ ನಿರ್ಮಿಸಿದ ನಂತರ ಸಮಾಧಾನವಾಗುತ್ತಿದೆ ಎಂದರು.
ಕಾಫಿ ಬೆಳೆಗಾರ ಎಂ.ಆರ್. ಸಣ್ಣಸಿದ್ದೇಗೌಡ ಮಾತನಾಡಿದರು. ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಭದ್ರಾ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ್, ಸ್ಥಳೀಯ ಮುಖಂಡರಾದ ಎಂ.ಎಲ್. ಮೂರ್ತಿ, ಎಚ್.ಎಚ್. ದೇವರಾಜ್, ರಾಧಾ ಸುಂದರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಐ.ಎಂ.
ಮಹೇಶ್‌ಗೌಡ, ಮಾಜಿ ಅಧ್ಯಕ್ಷ ಹಳಸೆ ಶಿವಣ್ಣ, ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ಕೆ. ಮೋಹನ್, ಸಮಿತಿಯ ಕಾರ್ಯದರ್ಶಿ ಭೋಜೇಗೌಡ, ಸದಸ್ಯರಾದ ಮಂಜೇಗೌಡ, ಉದಯಕುಮಾರ್, ಕಲ್ಲೇಗೌಡ, ಸುಧಾ ವಿಜೇಂದ್ರ, ಗಿರಿಜಾ ಈರಪ್ಪಗೌಡ, ಎಂ.ಬಿ. ರೇಣುಕಾ, ರಮೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.