ಎಂಜಿ ರಸ್ತೆ ದುರಸ್ತಿ ಪ್ರಾರಂಭಿಸಿ
ಕ.ಪ್ರ.ವಾರ್ತೆ ತರೀಕೆರೆ ಜೂ.6
ಶೀಘ್ರದಲ್ಲಿ ಅಂದರೆ ನಾಳೆಯಿಂದಲೇ ಪಟ್ಟಣದ ಪ್ರಮುಖ ಎಂ.ಜಿ. ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸಬೇಕೆಂದು ಶಾಸಕ ಜಿ.ಎಚ್. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷ ಸುನೀಲ್ದತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸರ್ವ ಸದಸ್ಯರ ಪ್ರಥಮ ಸಭೆಯಲ್ಲಿ ಮಾತನಾಡಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಟಿ.ಜಿ. ಆಶೋಕ್ಕುಮಾರ್ ಅವರು ವಿಷಯ ಪ್ರಸ್ತಾಪಿಸಿ ಪಟ್ಟಣದ ಪ್ರಮುಖವಾದ ಎಂ.ಜಿ. ರಸ್ತೆ ಗುಂಡಿಗಳಿಂದ ತುಂಬಿದೆ, ದಿನಕ್ಕೆ ಸಾವಿರಾರು ಜನರು, ಅಧಿಕ ಸಂಖ್ಯೆಯಲ್ಲಿ ವಿವಿಧ ಬಗೆಯ ವಾಹನಗಳು ಸಂಚರಿಸುತ್ತವೆ. ವಾಹನ ಮತ್ತು ಜನ ಸಂಚಾರಕ್ಕೆ ರಸ್ತೆಯು ಸುರಕ್ಷಿತವಲ್ಲ ಎಂದರು.
ಗಮನಹರಿಸಲಿ: ಸದಸ್ಯ ಪ್ರಕಾಶ್ ವರ್ಮ ಮಾತನಾಡಿ, ಪಟ್ಟಣದಲ್ಲಿ ಏಳು ದಿನಕ್ಕೊಮ್ಮೆ ನೀರು ಬಿಡುತ್ತಿದ್ದೀರಿ, ಜನರು ತೀವ್ರವಾಗಿ ಅಕ್ಷೇಪಿಸುತ್ತಿದ್ದಾರೆ. ಟಿಸಿ ಬದಲಾವಣೆ ಮಾಡಿದ್ದೀರಿ, ಇದು ಸ್ವಾಗತಾರ್ಹ. ಆದರೆ, ಯಾವ್ಯಾವ ವಾರ್ಡಿನಲ್ಲಿ ಏನೇನು ಸಮಸ್ಯೆಗಳಿವೆ ಎಂದು ತಿಳಿದುಕೊಳ್ಳಲು ಮುಖ್ಯಾಧಿಕಾರಿಗಳು ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಹಂತ- ಹಂತವಾಗಿ ಪ್ರತಿನಿತ್ಯ ಸಂಚಾರ ಮಾಡಬೇಕು. ಪ್ರತಿನಿತ್ಯ ದಿನಚರಿ, ಲಾಗ್ಬುಕ್ನಲ್ಲಿ ದಾಖಲಿಸಿ, ಪಟ್ಟಣದ ಸಂತೆಗಾಗಿ ಎಪಿಎಂಸಿ ನೀಡಿರುವ ಜಾಗದ ನವೀಕರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂತೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಸದಸ್ಯ ಟಿ.ಎಸ್. ಧರ್ಮರಾಜ್ ಮಾತನಾಡಿ, ಪುರಸಭೆ ಸರ್ವ ಸದಸ್ಯರ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಬೇಕು. ಇದರಿಂದ ವೃದ್ಧಾಪ್ಯ ವೇತನ ಅಂಗನವಾಡಿ ಇತ್ಯಾದಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿರುತ್ತದೆ. ಹಿಂದೆ ಮನೆ ಬಾಗಿಲಿಗೆ ಪುರಸಭೆ ಹೋಗುತ್ತಿತ್ತು. ಆದರೆ, ಇದೀಗ ಜನರೇ ಪುರಸಭೆಯ ಬಾಗಿಲಿಗೆ ಬರುವಂತಾಗಿದೆ ಎಂದರು.
ಆಸ್ತಿ ವಶಪಡಿಸಿಕೊಳ್ಳಿ: ಸದಸ್ಯ ರಮೇಶ್ ಮಾತನಾಡಿ, ರೋಟರಿ ಸಂಸ್ಥೆ ಇರುವ ಕಟ್ಟಡ ಪುರಸಭೆಗೆ ಸೇರಿದ್ದು, ಅದನ್ನು ಇಲ್ಲಿಯವರೆಗೂ ಪುರಸಭೆ ವಶಪಡಿಸಿಕೊಂಡಿಲ್ಲ. ಕರ್ನಾಟಕ ಬ್ಯಾಂಕ್ ಪಕ್ಕದಲ್ಲಿರುವ ಆಸ್ತಿ ಪುರಸಭೆಗೆ ಸೇರಿದ್ದು, ಅದಕ್ಕೆ ಪುರಸಭೆಯ ಆಸ್ತಿ ಎಂದು ನಾಮಫಲಕ ಹಾಕಿ ಎಂದು ತಿಳಿಸಿದರು.
ಅನುದಾನ ಕೊಡಿಸಿ: ಪುರಸಭೆ ಅಧ್ಯಕ್ಷ ಸುನೀಲ್ ದತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಪುರಸಭೆಗೆ ಹೆಚ್ಚು ಅನುದಾನ ಕೊಡಿಸಿ. ಪಟ್ಟಣದ ಎಲ್ಲ ಬಡಾವಣೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಮನವಿ ಮಾಡಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಪ್ರತಿಕ್ರಿಯಿಸಿ, ನಿವೇಶನ ಮಾಡಿ ಮನೆಗಳನ್ನು ನಿರ್ಮಿಸಲು ಪಟ್ಟಣದ ಹೊರವಲಯದಲ್ಲಿ ಜಮೀನುಗಳನ್ನು ಕೊಂಡುಕೊಳ್ಳಿ. ಸರ್ಕಾರದಿಂದ ಹಣ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯರಾದ ಈರಣ್ಣ, ಪದ್ಮರಾಜ್, ಧರ್ಮರಾಜ್, ಸೈಯದ್ ಖಾಸಿಂ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಟಿ.ಆರ್.ಪುಟ್ಟಮ್ಮ, ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಮುನಿಸ್ವಾಮಿ, ಜೆ.ಇ. ಬಿಂದು, ಮಹೇಶ್, ಕುಮಾರ್, ಪುರಸಭೆ ಸಿಬ್ಬಂದಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

