ಚಿಕ್ಕಮಗಳೂರು

ಅಕ್ರಮ-ಸಕ್ರಮ; ಸಾರ್ವಜನಿಕರ ಗೊಂದಲ

Published On :

ನರಸಿಂಹರಾಜಪುರ: ಗ್ರಾಮೀಣ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಅಕ್ರಮ ಮನೆ ಕಟ್ಟಿಕೊಂಡವರಿಗೆ ಸಕ್ರಮ ಮಾಡುವ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಕರ್ನಾಟಕ ರಾಜ್ಯ ಪತ್ರವು ಮಾರ್ಚ್ 3 ರಂದು ಪ್ರಕಟಗೊಂಡರೂ, ಈ ಬಗ್ಗೆ ಪ್ರಚಾರ ಇಲ್ಲದ ಪರಿಣಾಮ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲದೆ ಗೊಂದಲ ಉಂಟಾಗಿದೆ.
 ರಾಜ್ಯ ಸರ್ಕಾರ ನಗರ ಪ್ರದೇಶದ ಅಕ್ರಮ ಕಟ್ಟಡ ಸಕ್ರಮದ ಯೋಜನೆಯಂತೆ ಗ್ರಾಮೀಣ ಭಾಗದಲ್ಲೂ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಆ ಜಾಗವನ್ನು ಸಕ್ರಮ ಮಾಡುವ ಕಾಯ್ದೆ ತಂದು 2014 ರ ಮಾರ್ಚ್ 3 ರಂದು ಅಧಿಕೃತ ಆದೇಶ ಹೊರಡಿಸಿದೆ.  ಅಕ್ರಮವಾಗಿ ಮನೆ ಕಟ್ಟಿದ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಅಂದರೆ ಜೂನ್ 3 ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿತ್ತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ.
 ಆದರೆ, ಕೊನೆಯ ದಿನಾಂಕ ಸಮೀಪಿಸುತ್ತಿದ್ದಂತೆ ಅರ್ಜಿ ಸಲ್ಲಿಸುವ ವಿಷಯ ಪ್ರಚಾರವಾಗಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದ ರೈತರು, ಕೂಲಿ ಕಾರ್ಮಿಕರು ಗಡಿ ಬಿಡಿ ಮಾಡಿ ತಾಲೂಕು ಕಚೇರಿಗೆ ದೌಡಾಯಿಸುತ್ತಿದ್ದಾರೆ.  ಫಾರಂ ನಂ 3ಎ ಅರ್ಜಿ ಜೊತೆಗೆ ಮನೆಯ ಯಜಮಾನ ಮನೆ ಮುಂದೆ ನಿಂತು ತೆಗೆಸಿರುವ ಪೋಟೋ, ರೇಷನ್ ಕಾರ್ಡ್ ನಕಲು, ಗುರುತಿನ ಪತ್ರದ ನಕಲು, ಕಂದಾಯ ರಸೀದಿ, ಜಾಗದ ಪಹಣಿ, ಆದಾಯ ದೃಢೀಕರಣ ಪತ್ರ, ಪ್ರಮಾಣ ಪತ್ರ ಬೇಕಾಗಿದ್ದು ಈ ದಾಖಲೆಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
ವಿಸ್ತರಣೆ ಮಾಡಲಾಗುತ್ತದೆ: ಅರ್ಜಿ ಪಡೆಯಲು ಜೂನ್ 3 ರಂದು ಕಡೆಯ ದಿನವಾಗಿದ್ದರೂ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಹಾಗೂ ಚುನಾವಣೆ ನೀತಿ ಸಂಹಿತೆಯಿಂದ ನಿಗದಿತ ದಿನಾಂಕದೊಳಗೆ ಬೆರಳಣಿಕೆಯಷ್ಟು ಅರ್ಜಿಯೂ ಬಂದಿರಲಿಲ್ಲ.
  ಈ ಬಗ್ಗೆ ತಹಶೀಲ್ದಾರ್ ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿ, ಜೂನ್ 3 ಕ್ಕೆ ಅರ್ಜಿ ಸಲ್ಲಿಸುವ ಸಮಯ ಮುಗಿದಿರುವುದು ನಿಜವಾಗಿದ್ದರೂ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕಾರ ಮಾಡುತ್ತಿರಲಿಲ್ಲ. ಈಗ ಅರ್ಜಿ ಪಡೆಯುತ್ತಿದ್ದೇವೆ. ಮತ್ತೆ 3 ತಿಂಗಳು ಕಾಲಾವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಪ್ರಚಾರದ ಕೊರತೆ: ಈಚೆಗೆ ತಾಲೂಕಿಗೆ ಭೇಟಿ ನೀಡಿದ್ದ ಮಾಜಿ ಸಂಸದ ಜಯಪ್ರಕಾಶ ಹೆಗಡೆ  ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದ ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಆಗಲಿದೆ. ಫಲಾನುಭವಿಗಳು ಗಡಿಬಿಡಿ ಮಾಡಿಕೊಳ್ಳುವುದು ಬೇಡ ಎಂದು ಭರವಸೆ ನೀಡಿದ್ದಾರೆ.  ಆದರೂ, ಗ್ರಾಮೀಣ ಭಾಗದಲ್ಲಿ ನೂರಾರು ವರ್ಷಗಳಿಂದಲೂ ತಮ್ಮ ಜಮೀನಿನ ಪಕ್ಕದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ರೈತರು ಹಕ್ಕು ಪತ್ರ ಇಲ್ಲದೆ ಆತಂಕದ ವಾತಾವರಣದಲ್ಲಿ ಬದುಕುತ್ತಿದ್ದರು. ಅಂತವರಿಗೆ ಹಕ್ಕು ಪತ್ರ ಸಿಕ್ಕುವ ಅವಕಾಶಗಳು ಪ್ರಚಾರದ ಕೊರತೆಯಿಂದ ವಂಚಿತವಾಗಬಾರದು. ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮ ಪಂಚಾಯ್ತಿಗಳು ಈ ಬಗ್ಗೆ ಸಾಕಷ್ಟು ಪ್ರಚಾರ ನೀಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುವಂತಾಗಬೇಕು ಎಂದು ಗ್ರಾಮಸ್ಥರ ಒತ್ತಾಯ.


-ಯಡಗೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.