ರೇಲ್ವೆಯಲ್ಲಿ ಸಾರ್ವಜನಿಕ ಸಹಭಾಗಿತ್ವ
ಶೃಂಗೇರಿ: ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಗಳಿಸಿಕೊಡುವ ರೇಲ್ವೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳ ಅವಶ್ಯಕತೆಯಿದ್ದು, ಹೊಸ ದೃಷ್ಟಿಕೋನದಿಂದ ನೋಡುವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ರೇಲ್ವೆ ಇಲಾಖೆಯನ್ನು ಮುನ್ನೆಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಅವರು ಪಟ್ಟಣದ ಜಿಎಸ್‌ಬಿ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕು ಸಾಗಾಣೆ ರೇಲ್ವೆಯಿಂದ ಉತ್ತಮ ಲಾಭಗಳಿಕೆಯಾಗುತ್ತಿದ್ದು, ಪ್ರಯಾಣಿಕ ರೇಲ್ವೆಯಿಂದ ಅಂಥ ಲಾಭಗಳಿಕೆಯಿಲ್ಲ. ಆದರೆ ಸರಕು ಸಾಗಣಿಕೆ ರೇಲ್ವೆಯನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕೆ ವಿದೇಶಿ ಬಂಡವಾಳ, ಸಾರ್ವಜನಿಕ ಫಂಡ್ ಅಗತ್ಯವಿದೆ. ಶುಚಿತ್ವಕ್ಕೆ ಆದತ್ಯೆ ನೀಡಬೇಕು. ರೈಲು ನಿಲ್ದಾಣಗಳ ಅಭಿವೃದ್ಧಿ, ಮೂಲಸೌಕರ್ಯ ಇತ್ಯಾದಿಗೆ ಆದ್ಯತೆ ನೀಡಬೇಕು.ಶೀಘ್ರದಲ್ಲಿ ರೇಲ್ವೆ ವಿಶ್ವವಿದ್ಯಾನಿಲಯ ಸ್ಥಾಪಿಸುವ ಕುರಿತು ಚಿಂತಿಸಲಾಗುತ್ತಿದೆ. ಮೋದಿಯವರು ಈ ಬಗ್ಗೆ ಯೋಜನೆ ಹೊಂದಿದ್ದಾರೆ ಎಂದರು.
ಕಾಫಿ, ಅಡಕೆ, ಬತ್ತ ಅನೇಕ ಬೆಳೆಗಳ ಸಮಸ್ಯೆ ಈಡೇರಿಕೆಗೆ ಪ್ರಯತ್ನಿಸುತ್ತೇನೆ. ಕಡೂರಿಗೆ ರೇಟ್ ಪಾಯಿಂಟ್, ಟಿಕೆಟ್ ಕೌಂಟರ್ ವರ್ಗಾಯಿಸುವ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಪಶ್ಚಿಮಘಟ್ಟ, ಡಾ.ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆಯಂತಹ ಮಾರಕ ಯೋಜನೆಗಳ ವಿರುದ್ಧ ಧ್ವನಿಯೆತ್ತಿದ್ದು ಬಿಜೆಪಿ ಸರ್ಕಾರ. ನಾನು ಸಿಎಂ ಆಗಿದ್ದಾಗಲೇ ಅದನ್ನು ವಿರೋಧಿಸಿದ್ದೇನೆ. ಈಗಲೂ ವಿರೋಧಿಸುತ್ತೇನೆ. ಕೇಂದ್ರ ಪರಿಸರ ಸಚಿವ ಜಾವಡೇಕರ್ ಜತೆ ಈ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಅಡಕೆ ನಿಷೇಧದ ವಿರುದ್ಧ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಹೋಗಬೇಕು. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಇದು ಪಕ್ಷದ ಹೋರಾಟವಲ್ಲ. ರೈತರ ಹೋರಾಟ. ಇದೇ 23 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ನಾವು ರೈತರ ಪರವಾಗಿ ಧ್ವನಿಯೆತ್ತುತ್ತೇವೆ ಎಂದು ತಿಳಿಸಿದರು.
ಜಿಪಂ ನೂತನ ಅಧ್ಯಕ್ಷ ಬಿ.ಶಿವಶಂಕರ್, ತಾಪಂ ನೂತನ ಅಧ್ಯಕ್ಷ ನೂತನ್‌ಕುಮಾರ್‌ರನ್ನು ಅಭಿನಂದಿಸಲಾಯಿತು.
ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ರಂಗನಾಥ್, ದೇವೇಂದ್ರ, ಶೋಭಾ ಅನಂತಯ್ಯ, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ನಟೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಮಸ್ವಾಮಿ ಸ್ವಾಗತಿಸಿದರು.
ಶಾರದಾ ಪೀಠಕ್ಕೆ ಭೇಟಿ
ಶೃಂಗೇರಿ: ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಸೋಮವಾರ ಶಾರದಾ ಪೀಠಕ್ಕೆ ಭೇಟಿ ನೀಡಿದರು. ಬೆಳಿಗ್ಗೆ ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ, ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶಂಕರಾಚಾರ್ಯ ದೇವಾಲಯ, ತೋರಣ ಗಣಪತಿ ದೇವಾಲಯ, ವಿದ್ಯಾಶಂಕರ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ನಂತರ ನರಸಿಂಹವನದಲ್ಲಿನ ಗುರುನಿವಾಸದಲ್ಲಿ ಭಾರತೀ ತೀರ್ಥರನ್ನು ಭೇಟಿ ಮಾಡಿ ಆರ್ಶಿವಾದ ಪಡೆದರು. ಶಾಸಕ ಡಿ.ಎನ್.ಜೀವರಾಜ್, ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಪಂ ಅಧ್ಯಕ್ಷ ಬಿ.ಶಿವಶಂಕರ್, ತಾಪಂ ಅಧ್ಯಕ್ಷ ನೂತನ್‌ಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

