ಹಳೇ ಹೆಬ್ಬೆ ರಸ್ತೆಯಲ್ಲಿ ಬಂಡು ಸೇತುವೆ ನಿರ್ಮಿಸಲು ಒತ್ತಾಯ
ಯಡಗೆರೆ ಮಂಜುನಾಥ್
ನರಸಿಂಹರಾಜಪುರ: 1965 ರ ಸುಮಾರಿಗೆ ಭದ್ರಾ ಆಣೆಕಟ್ಟು ನಿರ್ಮಾಣವಾದ ನಂತರ ಭದ್ರಾ ಹಿನ್ನೀರಿನ ಪರಿಣಾಮವಾಗಿ ತಾಲೂಕಿನ ನಕ್ಷೆಯೇ ಬದಲಾಗಿದ್ದು, ತಾಲೂಕು ಕೇಂದ್ರದಿಂದ ಕೇವಲ 4 ಕಿ.ಮೀ.ದೂರವಿದ್ದ ಹೊನ್ನೇಕೊಡಿಗೆ ಗ್ರಾಮ ಪಂಚಾಯ್ತಿಯ ಹಲವು ಗ್ರಾಮಗಳು ಈಗ ಸುತ್ತು ಬಳಸಿ ಸರಿಸುಮಾರು 15 ಕಿ.ಮೀ. ದೂರ ಕ್ರಮಿಸ ಬೇಕಾಗಿದೆ.
ಭದ್ರಾ ಡ್ಯಾಂ ಕಟ್ಟುವ ಮುಂಚೆ ಹಳೇ ಹೆಬ್ಬೆ ರಸ್ತೆಯಲ್ಲಿ ಕೇವಲ 4 ಕಿ. ಮಿ.ದೂರ ಕ್ರಮಿಸಿದರೆ ಹೊನ್ನೇಕೊಡಿಗೆ, ಹಂದೂರು, ಬಿಳಾಲುಕೊಪ್ಪ, ಸಾರ್ಯ, ಕೂಸುಗಲ್ಲು, ಹಂತುವಾನಿ,ಬಸರಿಗಳಲೆ, ಚಿನ್ನಕೊಡಿಗೆ, ಹಂದೂರು, ನಾಗೇಸಾಲೂರು ಮುಂತಾದ ಊರುಗಳಿಗೆ ತಲುಪಬಹುದಿತ್ತು.
ಈಗ ಭದ್ರಾ ಹಿನ್ನೀರು ಹಳೇ ಹೆಬ್ಬೆ ರಸ್ತೆಯ ಮೇಲೂ ಬರುವುದರಿಂದ ಈ ರಸ್ತೆಯ ಓಡಾಟ ನಿಂತು ಹೋಗಿ ಇಲ್ಲಿನ ಜನರಿಗೆ ನರಸಿಂಹರಾಜಪುರ ಪಟ್ಟಣದಿಂದ ಬಿ.ಎಚ್.ಕೈಮರ, ಶಾಂತಿ ಗ್ರಾಮದ ಮಾರ್ಗವಾಗಿ ಹೊಸ ರಸ್ತೆಯನ್ನು ನಿರ್ಮಾಣ ಮಾಡಲಾಯಿತು. ಇಲ್ಲಿನ ಸಾವಿರಾರು ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಬೇಕಾದರೆ 15 ರಿಂದ 20 ಕಿ.ಮೀ.ಸುತ್ತು ಬಳಸಿ ಬರಬೇಕಾಗಿದೆ.
ಬಂಡು ಸೇತುವೆಯೇ ಪರಿಹಾರ: ಬಯಲು ಸೀಮೆಗೆ ನೀರು ಕೊಡಲು ತಾಲೂಕಿನ ಜನರು ತಮ್ಮ ಭೂಮಿ, ಮನೆಯನ್ನು ಕಳೆದುಕೊಂಡು ತ್ಯಾಗ ಮಾಡಿದ್ದಾರೆ. ಹಳೇ ಹೆಬ್ಬೆ ರಸ್ತೆಯಲ್ಲಿ ಅಂದಾಜು 400 ಮೀಟರ್ ಭಾಗದಲ್ಲಿ ಬಂಡು ಸೇತುವೆ ನಿರ್ಮಿಸಿದರೆ ಹೊನ್ನೇಕೊಡಿಗೆ ಜನತೆ ತಮ್ಮ ಹಳ್ಳಿಗಳಿಗೆ ಹೋಗಲು ಹತ್ತಿರ ರಸ್ತೆ ಮಾರ್ಗ ಲಭ್ಯವಾಗುತ್ತದೆ.
ಗ್ರಾಮಸ್ಥರು ನಡೆದುಕೊಂಡೇ ನರಸಿಂಹರಾಜಪುರ ಪಟ್ಟಣಕ್ಕೆ ಬರಬಹುದಾಗಿದೆ. ಬಸರಿಗಳಲೆ ಎಂಬ ಜಾಗದಲ್ಲಿ ಬಂಡು ಸೇತುವೆ ಮಾಡಬೇಕಾಗಿದ್ದು ಇಲ್ಲಿ 2 ಸಣ್ಣ ಹಳ್ಳಗಳು ಸಹ ಹರಿಯುತ್ತದೆ. ಆ ಹಳ್ಳಗಳಿಗೂ ಎರಡು ಸೇತುವೆ ನಿರ್ಮಾಣವಾಗ ಬೇಕಾಗಿದೆ.
1980 ರಲ್ಲಿ ಚಿಂತನೆ: ಹೊನ್ನೇಕೊಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಕ್ಕೆ ಬಂಡು ಸೇತುವೆ ನಿರ್ಮಿಸುವ ಚಿಂತನೆ 1980 ರಲ್ಲೇ ಮಾಡಲಾಗಿತ್ತು. ಕೆ.ಟಿ.ಚಿನ್ನೇಗೌಡರು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದಾಗ ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು.
ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಅಲ್ಲದೆ 2008 ರಲ್ಲಿ ತಾಲೂಕು ಪತ್ರಕರ್ತರ ಸಂಘ ಹಂದೂರಿನಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಬಂಡು ಸೇತುವೆ ಬಗ್ಗೆ ಬೇಡಿಕೆ ಇಟ್ಟಿದ್ದರು. ಅಂದಿನ ಜಿಲ್ಲಾಧಿಕಾರಿ ನವೀನ್ರಾಜಾಸಿಂಗ್ ಬೇಡಿಕೆಗೆ ಸ್ಪಂದಿಸಿ ರು. 20 ಲಕ್ಷ ಅನುದಾನ ಮಂಜೂರು ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಹಂತುವಾನಿ ಗ್ರಾಮದ ಲೇಖಕಿ ಮೀನಾಕ್ಷಿ ಕಾಂತರಾಜ್ ಸ್ಮರಿಸಿ ಕೊಳ್ಳುತ್ತಾರೆ.
ಜನಪ್ರತಿನಿಧಿಗಳು ಗಮನಿಸಲಿ: ಈಗಿನ ಲೆಕ್ಕಾಚಾರದ ಪ್ರಕಾರ ಬಂಡು ಸೇತುವೆ ನಿರ್ಮಾಣಕ್ಕೆ ಅಂದಾಜು ರು. 5 ಕೋಟಿ ಬೇಕಾಗಲಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ನೀಡಬೇಕು ಎಂದು ತಾಲೂಕು ಬೋರ್ಡ್ ಮಾಜಿ ಸದಸ್ಯ ಹೊನ್ನೇಕೊಡಿಗೆ ಕೃಷ್ಣಯ್ಯ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

