ಬರ; 3.25 ಕೋಟಿ ಅನುದಾನಕ್ಕೆ ತಡೆ: ದತ್ತ
ಕ.ಪ್ರ.ವಾರ್ತೆ ಟಿ ಕಡೂರು ಟಿ ಮಾ.2
ಟಾಸ್ಕ್ಫೋರ್ಸ್ನಲ್ಲಿ ಹೊಸ ಕೊಳವೆಬಾವಿ ಕೊರೆಯಲು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರದ ಲಿಖಿತ ಆದೇಶವಿಲ್ಲದ ಕಾರಣದಿಂದ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆ ಆಗಬೇಕಾದ ಬರಕ್ಕೆ ಸಂಬಂಧಿಸಿದ 3.25 ಕೋಟಿ ಅನುದಾನ ತಡೆಹಿಡಿಯಲಾಗಿದೆ ಎಂದು ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ದೂರಿದರು.
ಕಡೂರು ವಿಧಾನಸಭಾ ಕ್ಷೇತ್ರದ ಹೇಮಗಿರಿಯ ಶ್ರೀಮಲ್ಲಿಕಾರ್ಜುನಸ್ವಾಮಿ ಸಮುದಾಯ ಭವನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಮಹಿಳಾ ಸ್ವಸಹಾಯ ಸಂಘ ಮತ್ತು ಬಳಕೆದಾರರ ಆಶ್ರಯದಲ್ಲಿ ಜರುಗಿದ ಜಲಾನಯನ ಮೇಳ -2014ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
3.25 ಕೋಟಿ ಕ್ರಿಯಾ ಯೋಜನೆ: ಕಡೂರು ತಾಲೂಕು ಸತತ ಬರಗಾಲದಿಂದ ಬೇಯುತ್ತಿದ್ದು ಕೈಬಿಟ್ಟು ಹೋಗಿದ್ದ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವ ಮೂಲಕ ಬರ ಕಾಮಗಾರಿ ಕೈಗೊಳ್ಳಲು 3.25 ಕೋಟಿ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬರ ಕಾಮಗಾರಿಯಲ್ಲಿ ಹೊಸ ಕೊಳವೆಬಾವಿ ಕೊರೆಸಲು ಅವಕಾಶವಿಲ್ಲ ಎಂಬ ಕಾರಣದಿಂದ ತಾವು ವಿಧಾನಸಭೆಯಲ್ಲಿ ಹೊಸ ಕೊಳವೆಬಾವಿ ಕೊರೆಸಲು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮಾಡಿದ ಮನವಿಗೆ ಸದನದಲ್ಲಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದರು. ಆದರೂ ಕೂಡ ಆದೇಶ ಕೇವಲ ಮೌಖಿಕವಾಗಿದೆ. ಈ ಬಗ್ಗೆ ಆದೇಶ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರದ ಕಠಿಣ ನಿಯಮದಿಂದ ಕ್ಷೇತ್ರದಲ್ಲಿ ಬರಗಾಲದಿಂದ ನೀರಿಗೆ ತೊಂದರೆಯಾಗಿದ್ದರೂ ಕೂಡ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗದೆ ಜಿಲ್ಲಾಧಿಕಾರಿ ತಮಗೆ ಲಿಖಿತ ಆದೇಶ ಬಂದಿಲ್ಲ ಹೇಳುವ ಮೂಲಕ ಎಂದು ಅನುದಾನ ತಡೆ ಹಿಡಿಯಲಾಗಿದೆ ಎಂದರು.
60 ಕೋಟಿ ಎಲ್ಲಿ ಹೋಯ್ತು: ಬರಗಾಲದಿಂದ ಬೇಯುತ್ತಿರುವ ಕಡೂರು ಕ್ಷೇತ್ರದಲ್ಲಿ ಕಳೆದ ಬಾರಿ 60 ಕೋಟಿ ವೆಚ್ಚದಲ್ಲಿ ಕೆರೆಗಳ ಹೂಳು ಎತ್ತಲಾಗಿದೆ ಎಂದು ಸರ್ಕಾರ ಉತ್ತರ ನೀಡಿದೆ. ಯಾವ ಕೆರೆಗಳು ಎಷ್ಟೆಷ್ಟು ಅಭಿವೃದ್ಧಿಯಾಗಿವೆ ಎಂಬುದನ್ನು ಜನರು ನೋಡಬೇಕು. ಜನರು ಹಾಗೂ ಜನಪ್ರತಿನಿಧಿಗಳ ತಪ್ಪಿನಿಂದ ಸರ್ಕಾರದ 60 ಕೋಟಿ ಎಲ್ಲಿಗೆ ಹೋಗಿದೆ ಎಂಬುದನ್ನು ಜನರು ಜನಪ್ರತಿನಿಧಿಗಳನ್ನು ಪಟ್ಟುಹಿಡಿದು ಕೇಳಬೇಕಾಗಿದೆ. ಹೆಬ್ಬೆ ಯೋಜನೆಗೆ 145 ಕೋಟಿ ಮಂಜೂರು ಮಾಡಿಸಿದ್ದು, ಯೋಜನೆ ಜಾರಿಗೆ ಪರಿಸರವಾದಿಗಳು ಅಡ್ಡಗಾಲಾಗಿದ್ದಾರೆ. ಯೋಜನೆಯ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ನೀರು ಮಿತವಾಗಿ ಬಳಸಬೇಕು: ಜಲಾನಯನ ಇಲಾಖೆಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಹಣ ಕೇಂದ್ರ ಸರ್ಕಾರದ್ದಾಗಿದೆ. ದೇವೇಗೌಡರು 1996 ರಲ್ಲಿ ಪ್ರಧಾನಿ ಆಗಿದ್ದಾಗ ಆರ್ಎಡಿಎಫ್ ಯೋಜನೆ ಜಾರಿ ಮಾಡಿ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗಲಿ ಎಂಬ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತಂದು ಇಂದು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ಸಿಕ್ಕಿದೆ. ಮಹಿಳೆಯರು ಇದರ ಉಪಯೋಗ ಪಡೆಯಬೇಕು. ಮೊದಲೇ ಬರಗಾಲ ಎದುರಿಸುತ್ತಿರುವ ನಾವು ಜಲಾನಯನ ಇಲಾಖೆ ಮಾಡುತ್ತಿರುವ ನೀರಿನ ಅಗತ್ಯತೆ ಮತ್ತು ಬಳಸುವಿಕೆ ಕ್ರಮ ಅನುಸರಿಸಬೇಕು. ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಸಿಕ್ಕಿರುವ ನೀರು ಮಿತವಾಗಿ ಬಳಸಬೇಕು ಎಂದರು.
ಕೆರೆಸಂತೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಮೇಳದ ಉದ್ಘಾಟನೆ ಮಾಡಿದರು. ಸಮಾರಂಭದಲ್ಲಿ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಎಂ.ಸಿ. ಸೀತಾ, ಸಹಾಯಕ ಕೃಷಿ ನಿರ್ದೇಶಕ ಅಶೋಕ್ಕುಮಾರ್, ತೋಟಗಾರಿಕಾ ನಿರ್ದೇಶಕಿ ಪೂರ್ಣಿಮಾ, ಕಡೂರು ಡಿಎಲ್ಡಿಬಿ ಅಧಿಕಾರಿ ಗುರುಮೂರ್ತಿ, ಡಾ. ಪ್ರವೀಣ್, ಚಿತ್ರದುರ್ಗದ ಅಂತರ್ಜಲ ಮತ್ತು ಮಳೆ ಕೊಯ್ಲು ತಜ್ಞ ಎನ್.ಜೆ. ದೇವರಾಜ್ ಶೆಟ್ಟಿ, ಜೆಡಿಎಸ್ ಮುಖಂಡರಾದ ಕೆ.ಎಂ.ಮಹೇಶ್ವರಪ್ಪ, ಸೀಗೇಹಡ್ಲು ಹರೀಶ್, ಎನ್. ಇಮಾಮ್, ತಮ್ಮಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

