ಪಡಿತರ ಚೀಟಿ ನವೀಕರಣಕ್ಕೆ ಹರಸಾಹಸ
ಕ.ಪ್ರ.ವಾರ್ತೆ, ಕೊಪ್ಪ, ಮಾ.3
ಪಡಿತರ ಚೀಟಿಯನ್ನು ನವೀಕರಣ ಮಾಡಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಆಹಾರ ಇಲಾಖೆ ಹಳೇ ಪಡಿತರ ಚೀಟಿ ನವೀಕರಿಸುವ ಜವಾಬ್ದಾರಿ ತಾಲೂಕಿನ ಆಯಾ ಗ್ರಾಪಂಗಳ ಮೇಲೆ ಹೇರಿದೆ. ಆದ್ದರಿಂದ ಈ ಭಾಗದ ಹಳೇ ಪಡಿತರ ಚೀಟಿದಾರರು ಬಹುತೇಕ ಮಂದಿ ತೋಟ ಕೂಲಿ ಕಾರ್ಮಿಕರೇ ಆಗಿದ್ದಾರೆ. ಅವರು ತಮ್ಮ ಕೂಲಿಗೆ ರಜೆ ಮಾಡಿ ನವೀಕರಣಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಹಿಡಿದು ಬೆಳಗ್ಗೆಯಿಂದಲೇ ಗ್ರಾಪಂ ಕಚೇರಿಗಳ ಮುಂದೆ ನಿಂತರು ಕೂಡ ಪಡಿತರ ಚೀಟಿ ನವೀಕರಣದ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಯಾವುದೇ ಪ್ರಯೋಜನ ಕಾಣದೇ ಜನ ವಾಪಸ್ ತೆರಳುವ ದೃಶ್ಯ ಸಾಮಾನ್ಯವಾಗಿದೆ.
ಕಂಪ್ಯೂಟರ್ ಆಪರೇಟರ್ಗಳಿಲ್ಲ: ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ತಿಪ್ಪೇಶ್ ಅವರನ್ನು ಕೇಳಿದಾಗ, ಆಹಾರ ಇಲಾಖೆ ಪಡಿತರ ಚೀಟಿ ನವೀಕರಣದ ಜವಾಬ್ದಾರಿಯನ್ನು ಗ್ರಾಪಂಗಳ ಮೇಲೆ ಹೇರಿದ್ದು ಬಿಟ್ಟರೇ ಪಡಿತರ ಚೀಟಿಯ ನವೀಕರಣಕ್ಕೆ ಪೂರಕ ವ್ಯವಸ್ಥೆಗಳಾದ ಕಂಪ್ಯೂಟರ್, ಡೆಟಾ ಆಪರೇಟರ್ಗಳನ್ನು ಗ್ರಾಪಂಗಳಿಗೆ ನೀಡಿಲ್ಲ. ಇದು ಅಲ್ಲದೇ ಕಂದಾಯ ಇಲಾಖೆಯ ಸಾಮಾಜಿಕ ಅರ್ಥಿಕ ಮತ್ತು ಜಾತಿಗಣತಿಯನ್ನು ಕೂಡ ಗ್ರಾಪಂ ಮೇಲೆ ಹೇರಿದೆ.
ಇವುಗಳಲ್ಲದೇ ಗ್ರಾಪಂಗಳದ್ದೇ ಆದ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಗ್ರಾಮಸಭೆ ಸೇರಿದಂತೆ ಹಲವು ಕೆಲಸದ ಒತ್ತಡ ನಡುವೆಯೂ ಗ್ರಾಪಂ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಂಡು ಪಡಿತರ ಚೀಟಿ ನವೀಕರಣದ ಕೆಲಸವನ್ನು ಮಾಡುತ್ತಿದ್ದರೆ, ನಮ್ಮೊಂದಿಗೆ ಆಹಾರ ಇಲಾಖೆಯವರು ಸಹಕಾರ ನೀಡಿದರೆ ಇನ್ನಾಷ್ಟು ವೇಗದಲ್ಲಿ ಕೆಲಸವನ್ನು ಮಾಡಿ ಸಮಸ್ಯೆಯನ್ನು ಪರಿಹಾರಿಸಬಹುದು ಎಂದು ತಿಳಿಸಿದರು.
ಸಮಜಾಯಿಷಿ: ಈ ಸಂಬಂಧ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರನ್ನು ವಿಚಾರಿಸಿದ ಸಂದರ್ಭದಲ್ಲಿ ಒಂದು ಕುಟುಂಬದಲ್ಲಿ ಕಡಿಮೆ ಎಂದರೂ 5 ಮಂದಿ ಸದಸ್ಯರಿರುತ್ತಾರೆ. ಅವರ ದಾಖಲೆಗಳನ್ನೆಲ್ಲಾ ಇಂಟರ್ನೆಟ್ಗೆ ಅಪ್ಲೋಡ್ ಮಾಡಬೇಕು. ಇದರ ಮಧ್ಯದಲ್ಲಿ ಅನಿಯಮಿತವಾದ ವಿದ್ಯುತ್ ಕಡಿತದಿಂದ ಕೆಲ ಕಾಲ ವಿಳಂಬವಾಗುತ್ತದೆ.
ದಿನಕ್ಕೆ ಹೆಚ್ಚು ಎಂದರೆ 8 ರಿಂದ 10 ಪಡಿತರ ಚೀಟಿಯನ್ನು ನವೀಕರಣ ಮಾಡಬಹುದು. ಅಷ್ಟೇ, ಆದ್ದರಿಂದ ಸರತಿ ಸಾಲಿನಲ್ಲಿ ನಿಂತವರಿಗೆ ನವೀಕರಿಸಲು ಸಾಧ್ಯವಾಗದೇ ವಾಪಸ್ಸು ಹೋಗುತ್ತಿದ್ದರೆ, ಆಹಾರ ಇಲಾಖೆಯಿಂದ ನವೀಕರಣದ ವೆಚ್ಚಕ್ಕೆಂದು ಯಾವ ಹಣವು ನೀಡುವುದಿಲ್ಲ. ನವೀಕರಣಕ್ಕೆ ಪಾವತಿಸುವ ಹಣ ಕೂಡ ವಾಪಸ್ಸು ಆಹಾರ ಇಲಾಖೆಗೆ ಸಂದಾಯ ಮಾಡಬೇಕು. ಗ್ರಾಪಂಗೆ ಬರುವ ಅನುದಾನ ಮತ್ತು ಆದಾಯದಿಂದ ಇನ್ನಷ್ಟು ಕಂಪ್ಯೂಟರ್ ಡೆಟಾ ಆಪರೇಟರ್ಗಳನ್ನು ಗುತ್ತಿಗೆ ಆಧಾರ ಮೇಲೆ ಪಡೆದು ಕೆಲಸ ಮಾಡಿಸಲು ಸಾಧ್ಯವಿಲ್ಲ.
ಆದರೂ, ಕೂಡ ಸಾರ್ವಜನಿಕರ ಹಿತಾಸಕ್ತಿಯಿಂದ ಗ್ರಾಪಂ ಒತ್ತಡದ ಕೆಲಸದ ನಡುವೆಯೂ ನಮ್ಮಲ್ಲಿರುವ ಸಿಬ್ಬಂದಿಗಳನ್ನು ಬಳಸಿಕೊಂಡು ಪಡಿತರ ಚೀಟಿ ನವೀಕರಣದ ಕೆಲಸವನ್ನು ಮಾಡಿಕೊಡುತ್ತಿದ್ದೇವೆ ಎಂದು ಕೆಲ ಗ್ರಾಪಂ ಅಧ್ಯಕ್ಷರು ಸಮಜಾಯಿಷಿ ಉತ್ತರ ನೀಡಿದರು.
ಆಕ್ರೋಶ: ಗ್ರಾಪಂಗಳಿಗೆ ಪಡಿತರ ನವೀಕರಣದ ಕೆಲಸ ಕಷ್ಟವಾದರೆ ಈ ಕೆಲಸ ನಮ್ಮಿಂದ ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಇಲಾಖೆ ಪತ್ರ ಬರೆಯಲಿ. ಅದರ ಬದಲಾಗಿ ಜನರಿಗೆ ಏಕೆ ಈ ರೀತಿಯ ಸಮಸ್ಯೆಯನ್ನು ನಿರ್ಮಾಣ ಮಾಡಬೇಕು ಎಂದು ಹಳೇ ಪಡಿತರ ಚೀಟಿದಾರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯೆ ಮನೋಭಾವ ತೊರೆದು ಪಡಿತರ ಚೀಟಿ ನವೀಕರಣಕ್ಕೆ ಬೇಕಾದ ಪೂರಕವಾದ ವ್ಯವಸ್ಥೆಯನ್ನು ಒದಗಿಸಿ ನವೀಕರಣ ಕಾರ್ಯ ಸಲಿಸಾಗಿ ನಡೆಯುವಂತೆ ಸಹಕಾರಿಸುವಂತಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

