ಶ್ರೀಗಂಧ ತೋಟಕ್ಕೆ ಅಧಿಕಾರಿಗಳ ಭೇಟಿ
ತರೀಕೆರೆ: ಸಮೀಪದ ದೋರನಾಳು ಯೋಗೇಶ್ ಅವರ ಶ್ರೀಗಂಧ ತೋಟಕ್ಕೆ ತೋಟಗಾರಿಕೆ ಇಲಾಖೆ ಜಿಂಟಿ ನಿರ್ದೇಶಕ ಪ್ರಕಾಶ್ ಸಬರತ್, ತೋಟಗಾರಿಕೆ ಸಹ ನಿರ್ದೇಶಕ ಡಾ. ಪ್ರಸಾದ್ ಇಲಾಖೆ ಅಧಿಕಾರಿಗಳಾದ ಆರಾಧ್ಯ ಮತ್ತು ಶಿವಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶ್ರೀಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್. ವಿಶುಕುಮಾರ್ ಮಾತನಾಡಿ, ನಾಲ್ಕೂವರೆ ಎಕರೆ ತೋಟದಲ್ಲಿ ಬೆಳೆದಿರುವ ಶ್ರೀಗಂಧ ಮತ್ತು ಸಾಗುವಾನಿ ಮರಗಳ ಸಾಕುವಿಕೆ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಪಟ್ಟಣದಲ್ಲಿ ವಿವಿಧ ಸ್ಥಳಗಳಲ್ಲಿ ವಿಶೇಷವಾಗಿ ನಿವೇಶನಗಳಲ್ಲಿ ಶ್ರೀಗಂಧ ಮರಗಳನ್ನು ಮುಕ್ತವಾಗಿ ಬೆಳೆಸಲಾಗುತ್ತಿದೆ. ಬೇಲೇನಹಳ್ಳಿ ಬಳಿ ನಾಲ್ಕು ಎಕರೆ ವಿಶಾಲವಾದ ಜಾಗದಲ್ಲಿ ನೂರು ನಿವೇಶನಗಳನ್ನಾಗಿ ಪರಿವರ್ತಿಸಿ ಪ್ರತಿಯೊಂದು ನಿವೇಶನದಲ್ಲೂ 21 ಶ್ರೀಗಂಧ ಸಸಿಗಳನ್ನು ಸಾಕಿ ಬೆಳೆಸುವ ಯೋಜನೆಯನ್ನು ಹಾಗು ತಾಲೂಕಿನಲ್ಲೇ ಮಾದರಿಯಾಗಿ ಶ್ರೀಗಂಧ ಭವನ ನಿರ್ಮಿಸುವ ಯೋಜನೆಯನ್ನು ವೇದಿಕೆ ಹೊಂದಿದೆ ಎಂದು ತಿಳಿಸಿದರು. ಮನವಿ: ಶ್ರೀಗಂಧ ಮರಗಳನ್ನು ಯಥೇಚ್ಛವಾಗಿ ಬೆಳೆಯಲು ಸರ್ಕಾರವು ತೋಟಗಾರಿಕೆ ಇಲಾಖೆ ಮೂಲಕ ಬೆಳೆಗಾರರಿಗೆ ಗುಣಮಟ್ಟದ ಸಸಿಗಳನ್ನು ಮತ್ತು ಸಹಾಯಧನವನ್ನು ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಆಳ್ವಾಸ್ ನುಡಿಸಿರಿ ಘಟಕ ಉದ್ಘಾಟನೆ
ಚಿಕ್ಕಮಗಳೂರು: ಕಡೂರು ತಾಲೂಕಿನ ಚಟ್ನಳ್ಳಿ ಯ ಮಲ್ಲಿಕಾರ್ಜುನ ಸ್ವಾಮಿ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮತ್ತು ಆಳ್ವಾಸ್ ನುಡಿಸಿರಿ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು. ಶಾಸಕ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಡಾಳು, ಮಾಗೋನಹಳ್ಳಿ ಶ್ರೀಗಳು ದೀಪಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಟ್ನಳ್ಳಿ ಮಹೇಶ್ ಸ್ವಾಗತಿಸಿದರು. ನುಡಿಸಿರಿ ಜಿಲ್ಲಾ ಸಂಯೋಜನಾಧಿಕಾರಿ ರಮೇಶ್ ವಂದಿಸಿದರು. ಕೇರಳದ ಮೋಹಿನಿಯಾಟ್ಟಂ, ಆಂಧ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷ ಪ್ರಯೋಗ-ದಶಾವತಾರ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಭರತನಾಟ್ಯ- ನವ ದುರ್ಗೆಯರು, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಮ್, ಒರಿಸ್ಸಾದ ಗೋಟಿಪುವ, ತೆಂಕುತಿಟ್ಟು ಯಕ್ಷಗಾನದಭ್ರಾಮರಿ ವಿಲಾಸ, ಕೇರಳದ ಒಪ್ಪಣ್ಣಂ, ಪುರುಲಿಯಾ- ಪಶ್ಚಿಮ ಬಂಗಾಳದ ಸಿಂಹನೃತ್ಯ, ಕಥಕ್ ನವರಂಗ್ ಮೊದಲಾದ ಬೆರಗು ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯುವಲ್ಲಿ ಯಶಸ್ವಿಯಾದವು.ಸಮಾರೋಪದಲ್ಲಿ ಬಸವಮಂದಿರದ ಜಯಬಸವಾನಂದಶ್ರೀ ಮಾತನಾಡಿದರು.
13ರಂದು ಪುರಸಭಾ ಚುನಾವಣೆ
ಬೀರೂರು: ಪಟ್ಟಣ ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗಿದ್ದು, ಮಾ.13ರಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 10 -12 ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 2 ಘಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. 2.15ಕ್ಕೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, 2.30ಕ್ಕೆ ಚುನಾವಣೆ. ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆ (ಬಿ) ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದೆ. ಬಿಜೆಪಿ 8 ಸದಸ್ಯರನ್ನು. ಜೆಡಿಎಸ್ ಇಬ್ಬರು ಸದಸ್ಯರನ್ನು ಹಾಗೂ ಕೆಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಒಂದೊಂದು ಸ್ಥಾನ ಗಳಿಸಿದ್ದು ಹೆಚ್ಚಿನ ಸ್ಥಾನ ಪಡೆದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಮಹಿಳಾ ಬ್ಯಾಂಕ್ ಶಾಖೆ ಉದ್ಘಾಟನೆ
ಶಿವಮೊಗ್ಗ: ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಬ್ಯಾಂಕ್ ಶಾಖೆ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ವಿಧ್ಯುಕ್ತವಾಗಿ ಚಾಲನೆಗೊಂಡಿತು. ವಿನೋಬನಗರ ಕಲ್ಲಳ್ಳಿಯ ನೂರಡಿ ರಸ್ತೆಯಲ್ಲಿ ರಾಷ್ಟ್ರೀಕೃತ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಈ ವಿಶೇಷ ಶಾಖೆ ತೆರೆದಿದೆ.
ಮಹಿಳೆಯರ ಬಗ್ಗೆ ತಾತ್ಸಾರ ಸಲ್ಲ
ಶೃಂಗೇರಿ: ಇಂದು ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನ ಸ್ಥಾನಮಾನ ಹೊಂದಿದ್ದಾಳೆ. ಆದರೆ ಸಮಾಜದಲ್ಲಿ ಮಹಿಳೆಯರ ಕುರಿತು ಇರುವ ತಾರತಮ್ಯ ಮನೋಭಾವ ಹೋಗಲಾಡಿಸಬೇಕು ಎಂದು ಇನ್ನರ್ ವೀಲ್ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ ಹೇಳಿದರು. ಅವರು ಪಟ್ಟಣದ ಜಿಎಸ್ಬಿ ಸಭಾಂಗಣದಲ್ಲಿ ಸ.ಪ್ರ.ದ. ಕಾಲೇಜಿನ ಕಲಾ ಸಂಘದ ಆಶ್ರಯದಲ್ಲಿ ಕಲಾ ಉತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ದಿನಾಚಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಹಿಳೆಯರಿಂದ ಜವಾಬ್ದಾರಿಯುತ ಕೆಲಸಗಳ ನಿರ್ವಹಣೆ ಸಾಧ್ಯ. ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಆದ್ದರಿಂದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕು. ಮಹಿಳೆಯರಿಗೆ ಸ್ಥಾನಮಾನ ನೀಡಿದರೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಜಿ. ಸಿದ್ದಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು. ಸಂದೇಶ್ ನಿರೂಪಿಸಿದರು.
ಚುನಾವಣೆಗೆ ಅನಿಲ್ ಸ್ಪರ್ಧೆ
ಶಿವಮೊಗ್ಗ: ರಾಜ್ಯ ಗೆಳೆಯರ ಬಳಗದ ಸಂಸ್ಥಾಪಕ ಎಂ.ಆರ್. ಅನಿಲ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ, ಪ್ರತಿ ಹಳ್ಳಿಯಲ್ಲೂ ಶಿಕ್ಷಣ ಇತ್ಯಾದಿ ವಿಷಯ ಮುಖ್ಯವಾಗಿಟ್ಟುಕೊಂಡು ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಬಳಗದ ಜಿಲ್ಲಾಧ್ಯಕ್ಷ ಎಸ್.ಪಿ. ಶಿವಮೂರ್ತಿ ಮಾತನಾಡಿ, ಗೆಳೆಯರ ಬಳಗದಿಂದ ದೇಶದ ರಾಜಕಾರಣಕ್ಕೆ ಉತ್ತಮ ನಾಯಕನನ್ನು ಕೊಡುಗೆಯಾಗಿ ನೀಡುವುದು. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಹೊಡೆದೋಡಿಸುವುದು, ಅಧಿಕಾರಿಗಳಲ್ಲಿ ಹೆಚ್ಚಿನ ದಕ್ಷತೆ ಮೂಡಿಸುವುದು, ಜಾತಿ ರಾಜಕಾರಣ, ಪಕ್ಷಪಾತಗಳಿಂದ ಜನರಲ್ಲಿ ಅರಿವು ಮೂಡಿಸುವುದು. ಪ್ರತಿ ಹಳ್ಳಿಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುವುದು, ರೈತರಿಗೆ ದೇಶದ ನಾಯಕತ್ವ ನೀಡುವುದು, ಆಧುನಿಕ ಕೃಷಿ ಪದ್ಧತಿಗೆ ಒತ್ತು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ, ಶಿವಮೊಗ್ಗ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದು. ಯುವ ಸಮೂಹಕ್ಕೆ ಮಾರ್ಗದರ್ಶನ, ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ನಿರುದ್ಯೋಗಿಗಳಿಗೆ ಉದ್ಯೋಗ, ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಿಶೋರಿಯರ ದಿನಾಚರಣೆ
ನರಸಿಂಹರಾಜಪುರ: ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಮಾನಸಿಕ ತುಮುಲ, ಆತಂಕ, ಭಯ ಸಹಜವಾಗಿ ಕಾಡುತ್ತದೆ. ಅಂತಹ ಹೆಣ್ಣುಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಎಂದು ಕಿರಿಯ ಆರೋಗ್ಯ ಸಹಾಯಕಿ ಫಿಲೋಮಿನಾ ತಿಳಿಸಿದರು. ಶನಿವಾರ ತಾಲೂಕಿನ ಶಾಂತಿ ಭವನದ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ಕಿಶೋರಿಯರ ದಿನಾಚರಣೆ ಸಮಾರಂಭದಲ್ಲಿ ಮಾಹಿತಿ ನೀಡಿದರು. ಹೆಣ್ಣುಮಕ್ಕಳಿಗೆ ದೈಹಿಕ ಬದಲಾವಣೆ ಉಂಟಾದಾಗ ಸೂಕ್ತ ಮಾರ್ಗದರ್ಶನ, ಆತ್ಮಸ್ಥೈರ್ಯ ಅಗತ್ಯವಾಗಿದೆ. ಅಂಗನವಾಡಿಯಲ್ಲಿ ಕಿಶೋರಿಯರಿಗೆ ಸೂಕ್ತ ಸಲಹೆ ಸಹಕಾರ ಸಿಗುತ್ತಿದೆ ಎಂದರು. ಆಶಾ ಕಾರ್ಯಕರ್ತೆ ಗೀತಾಮಣಿ ಮಾತನಾಡಿ, ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ ಇರುತ್ತಿತ್ತು. ಆಗ ಹಿರಿಯರಿಂದ ಹೆಣ್ಣುಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿತ್ತು. ಈಗ ಕಡಿಮೆಯಾಗಿದೆ ಎಂದರು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರತಿಮಾ, ಮೂಡಬಾಗಿಲು ಅಂಗನವಾಡಿ ಕಾರ್ಯಕರ್ತೆ ಪ್ರೇಮ ಉಪಸ್ಥಿತರಿದ್ದರು.
15ರಂದು ಮಲ್ಲಿಕಾರ್ಜುನ ರಥೋತ್ಸವ
ಕಡೂರು: ಮಾ.15 ಶನಿವಾರ ಮಧ್ಯಾಹ್ನ ಕಡೂರು ತಾಲೂಕಿನ ಯಗಟಿಪುರದ ಮಲ್ಲಿಕಾರ್ಜುನ ಸ್ವಾಮಿಯವರ ರಥೋತ್ಸವ ಜರುಗಲಿದೆ. ಮಾ.13 ರ ಗುರುವಾರ ಬೆಳಗ್ಗೆ 8 ಗಂಟೆಗೆ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಸಕಲ ಗೌರವಗಳೊಂದಿಗೆ ವಿಶೇಷೋತ್ಸವದಲ್ಲಿ ಪುರಕ್ಕೆ ಕರೆದೊಯ್ಯಲಾಗುಗುವುದು. ಸಂಜೆ 5 ಗಂಟೆಗೆ ಕೌತುಕ ಬಂಧನ, ಧ್ಜಜಾರೋಹಣ, ಕಲಶ ಸ್ಥಾಪನೆ, ಅಂರುರಾರ್ಪಣೆ, ದೇವತಾ ವಾಹನ, ಭೇರಿತಾಡನ, ವೃಷಭ ವಾಹನೋತ್ಸವ ಜರುಗಲಿದೆ. 14ರ ಶುಕ್ರವಾರ ರಾತ್ರಿ 9ಗಂಟೆಗೆ ಸರ್ಪವಾಹನೋತ್ಸವ, 10 ಗಂಟೆಗೆ ಅಶ್ವಾರೋಹಣ, ರಾತ್ರಿ 2ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ. 15ರ ಶನಿವಾರ ಬೆಳಗ್ಗೆ 8ಗಂಟೆಗೆ ಗಜಾರೋಹಣೋತ್ಸವ ಹಾಗೂ ಬೆಳಗ್ಗೆ 10 ಗಂಟೆಗೆ ಕೃಷ್ಣ ಗಂಧೋತ್ಸವ ಸೇವೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸ್ವಾಮಿಯವರ ಮಹಾರಥೋತ್ಸವ ನಡೆಯಲಿದ್ದು, ರಾತ್ರಿ 10.30ಕ್ಕೆ ವಿಶೇಷ ಮನರಂಜನೆ ಹಾಗೂ ತಾವರೆಕೆರೆಯ ಪದ್ಮಗಿರಿ ಮೆಲೋಡಿಯವರಿಂದ ಅರ್ಕೇಸ್ಟ್ರಾ ನಡೆಲಿದೆ. 16 ರ ಭಾನುವಾರ ಬೆಳಗ್ಗೆ 6 ಗಂಟೆಗೆ ಬೆಳಗಿನ ರಥೋತ್ಸವ ಜರುಗಲಿದೆ. 17ರಂದು ಬೆಳಗ್ಗೆ 6 ಗಂಟೆಗೆ ಗಂಗೋದ್ಭವ, ಅಭವೃತ ಮತ್ತಿತರ ಸೇವೆಗಳು ನಡೆಯಲಿದೆ. ಏಪ್ರಿಲ್ 11ರಂದು ಚೌಡೇಶ್ವರಿ ಅಮ್ಮನವರ ಜಂಪ ಮಹೋತ್ಸವ ನಡೆಯಲಿದೆ.
ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಗುರಿ
ಶೃಂಗೇರಿ: ಶಿಕ್ಷಣವೆಂದರೆ ಬರೀ ಪಠ್ಯ ವಿಷಯಗಳ ಕಲಿಕೆಯಲ್ಲ. ಇದರೊಂದಿಗೆ ಬದುಕಿನ ಮೌಲ್ಯ, ಶಿಸ್ತು, ಸಂಯಮ, ಸಂಸ್ಕಾರ ತುಂಬುವ ಕಾರ್ಯ ನಡೆದಾಗ ಶಿಕ್ಷಣ ಪರಿಪೂರ್ಣವಾಗುತ್ತದೆ. ಶಿಕ್ಷಣದ ನಿಜವಾದ ಗುರಿ ಚಾರಿತ್ರ್ಯ ನಿರ್ಮಾಣ ಎಂದು ಹರಿಹರಪುರ ಎಆರ್ಎಸ್ ಕಾಲೇಜು ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಹೇಳಿದರು. ಅವರು ಪಟ್ಟಣದ ಜಿಎಸ್ಬಿ ಸಭಾಂಗಣದಲ್ಲಿ ಸ.ಪ್ರ.ದ ಕಾಲೇಜಿನ ಕಲಾ ಸಂಘದ 3 ದಿನಗಳ ಕಲಾ ಉತ್ಸವ ಸಮಾರೋಪದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಕಲಿಕೆ ದಿನಗಳಲ್ಲಿ ಶಿಸ್ತು, ಸಂಯಮ, ವಿನಯ, ವಿವೇಕ ಮೈಗೂಡಿಸಿಕೊಳ್ಳಬೇಕು. ವಿದ್ಯೆ ಎಲ್ಲರಿಗೂ ದಕ್ಕುವುದಿಲ್ಲ. ಅದೊಂದು ತಪಸ್ಸು. ಭಾರತೀಯ ಸಂಸ್ಕೃತಿ, ಪರಂಪರೆ ಶತಶತಮಾನಗಳ ಪ್ರಾಚೀನತೆ ಹೊಂದಿದೆ ಎಂದರು. ಕಾಲೇಜು ಪ್ರಾಚಾರ್ಯ ಪ್ರೊ. ಕೆ.ಜಿ. ಸಿದ್ದಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಎಂ. ಸುರೇಂದ್ರ, ಸರ್ಕಾರಿ ಜೂನಿಯರ್ ಕಾಲೇಜು ಅರ್ಥಶಾಸ್ತ್ರ ವಿಭಾಗದ ಶ್ರೀಮಂದಾರ,ನಾಗರಾಜ್, ಪರಶುರಾಮ್, ಸಂಹಿತಾ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.
ಶೌಚಾಲಯ ಸೌಲಭ್ಯ...
ಭದ್ರಾವತಿ ಕೆನರಾ ಬ್ಯಾಂಕ್ ಜನ್ನಾಪುರ ಶಾಖೆಯು ಹುತ್ತಾ ಕಾಲೋನಿಯ ಸರ್ಕಾರಿ ಪ್ರೌಢಶಾಲೆ, ಹಳೇನಗರದ ಸಂಚಿ ಹೊನ್ನಮ್ಮ ಬಾಲಿಕಾ ಪಪೂ ಕಾಲೇಜುಗಳಿಗೆ ಶೌಚಾಲಯ ಕಟ್ಟಿಸಿಕೊಟ್ಟಿತು. ಬ್ಯಾಂಕಿನ ಶಾಖಾಪ್ರಬಂಧಕ ಎಚ್.ಪರಮೇಶ್ವರಪ್ಪ ಸೌಲಭ್ಯವನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ರೇಲ್ವೆ ಹಮಾಲರ ಪ್ರತಿಭಟನೆ
ಶಿವಮೊಗ್ಗ: ರೇಲ್ವೆ ಗೂಡ್ಸ್ ಶೆಡ್ನಲ್ಲಿ ಕಾರ್ಯನಿರ್ವಹಿಸುವ ಹಮಾಲರ ಬೇಡಿಕೆಯನ್ನು ಗುತ್ತಿಗೆದಾರರು ಈಡೇರಿಸುತ್ತಿಲ್ಲ ಎಂಬ ಕಾರಣಕ್ಕೆ ರೇಲ್ವೆ ನಿಲ್ದಾಣದ ಬಳಿ ಶನಿವಾರ ಪ್ರತಿಭಟನೆ ನಡೆಯಿತು. ರೇಲ್ವೆ ಗೂಡ್ಸ್ ಶೆಡ್ ಹಮಾಲರ ಹೊರತಾಗಿ ಬೇರೆ ಕೆಲಸಗಾರರನ್ನು ಬಳಸಿ ಗೂಡ್ಸ್ ಶೆಡ್ ರೇಲ್ವೆ ವ್ಯಾಗನ್ಗಳಲ್ಲಿ ಸರಕುಗಳನ್ನು ಅನ್ಲೋಡ್ ಮಾಡುತ್ತಿದ್ದುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಇಲ್ಲಿನ ಹಮಾಲರು ಬೆಳಗ್ಗೆ ಪ್ರತಿಭಟನೆ ಆರಂಭಿಸಿದ್ದರು. ನಂತರ ಸ್ಥಳಕ್ಕಾಗಮಿಸಿದ ರೇಲ್ವೆ ಪೊಲೀಸರು ಹಮಾಲರ ಹಾಗೂ ಗುತ್ತಿಗೆದಾರರ ನಡುವೆ ಸೌಹಾರ್ದ ವಾತಾವರಣ ನಿರ್ಮಿಸಿ ಪ್ರತಿಭಟನೆ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ನಾಲ್ಕು ತಿಂಗಳಿಂದ ವೇತನ ಪರಿಷ್ಕರಣೆಗೆ ಮನವಿ ಮಾಡಿದ್ದೇವೆ, ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಚರ್ಚೆಗೆ ಸಮಯ ನಿಗದಿ ಮಾಡಿದ್ದರೂ ಗುತ್ತಿಗೆದಾರರು ಹಾಜರಾಗದೆ ಸತಾಯಿಸುತ್ತಿದ್ದಾರೆ ಎಂದರು. ಅಂತಿಮವಾಗಿ ಜಿಲ್ಲಾಡಳಿತ, ರೇಲ್ವೆ ಇಲಾಖೆ ಪ್ರಮುಖರು, ಹಮಾಲರ ಮುಖಂಡರು ಹಾಗೂ ಗುತ್ತಿಗೆದಾರರ ಸಂಘ ಒಟ್ಟಾಗಿ ಕುಳಿತು ಈ ಬೇಡಿಕೆ ಕುರಿತು ಚರ್ಚೆ ನಡೆಸಲು ತೀರ್ಮಾನಿಸಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು. ಗುತ್ತಿಗೆದಾರರಾದ ಅಶ್ವತ್ಥನಾರಾಯಣ, ವಿಜಯ, ಕಲ್ಲೇಶಿ, ನಟೇಶ, ಸೀನಪ್ಪ, ಶೇಷಪ್ಪ, ಪುಟ್ಟಪ್ಪ ಸ್ಥಳದಲ್ಲಿ ಇದ್ದರು.
ಸಮಾಜದ ಮುಖ್ಯವಾಹಿನಿಗೆ ಬನ್ನಿ
ನರಸಿಂಹರಾಜಪುರ: ಮಹಿಳೆಯರು ಕೀಳರಿಮೆ ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಪ್ರೀತಿ ತಿಳಿಸಿದರು. ಅವರು ಶನಿವಾರ ಸ.ಪ್ರ.ದ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣ ಆಗಿದ್ದರೂ, ಮಹಿಳೆಯರ ಮೇಲಿನ ಶೋಷಣೆ ಮಾತ್ರ ಮುಂದುವರಿಯುತ್ತಿದೆ. ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡುವುದೇ ಇದಕ್ಕೆ ಪರಿಹಾರವಾಗಿದೆ ಎಂದರು. ಉಪನ್ಯಾಸಕಿ ಶಶಿಕಲಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಮಹಿಳೆಯರ ಶೋಷಣೆ ಇನ್ನೂ ಮುಂದುವರಿದಿದೆ ಎಂದರು. ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ. ಪೂರ್ಣೇಶ್ ವಹಿಸಿದ್ದರು. ಉಪನ್ಯಾಸಕಿ ದೀಪಾ, ಸಂಧ್ಯಾ ಮಾತನಾಡಿದರು. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಕೆ. ಉಮೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಜಿತಾ ಪ್ರಾರ್ಥಿಸಿದರು. ಅನಿತಾ ಸ್ವಾಗತಿಸಿದರು. ಅಂಕಿತಾ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ವಂದಿಸಿದರು.
ಬಹುಮಾನ ವಿತರಣೆ
ಕಡೂರು: ಪಟ್ಟಣದ ಕೆ.ಎಂ. ರಸ್ತೆ ಕನಕ ವೃತ್ತದ ನಿರ್ವಾಣಸ್ವಾಮಿ ಪೂಜಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕರಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು. ಮ್ಯೂಸಿಕಲ್ ಚೇರ್ ರೇಣುಕ ಪ್ರಥಮ, ಶೋಭ ದ್ವೀತಿಯ, ಭಾರತಿ ತೃತೀಯ. ಕಿಡ್ಸ್ಗಂಡು ಮಕ್ಕಳ ಮೂಸಿಕಲ್ ಚೇರ್ ಸ್ಫರ್ದೆ ಪ್ರಸನ್ನ ಪ್ರಥಮ, ಲೋಕೇಶ್ ದ್ವಿತೀಯ, ಮಡಕೆ ಹೊಡೆಯುವುಹುದ ಶೈಲಜಾ ಪ್ರಸನ್ನ ಪ್ರಥಮ, ದ್ರಾಕ್ಷಾಯಿಣಿ ದ್ವೀತಿಯ, ಗಂಡು ಮಕ್ಕಳ ಮಡಕೆ ಹೊಡೆಯುವ ಸ್ಪರ್ಧೆ ಶಮೀರ್ ಪ್ರಥಮ, ಸಂಜಯ್ ದ್ವಿತೀಯ, ಕಬ್ಬಡಿ ಚೇತನ್ ಮತ್ತು ತಂಡ ಪ್ರಥಮ, ದ್ವಿತೀಯ ಹೇಮಂತ್ ಕುಮಾರ್ ಮತ್ತು ತಂಡ ದ್ವಿತೀಯ ಸ್ಥಾನ. ರಂಗೋಲಿ ಸ್ಪರ್ಧೆ ಲಾವಣ್ಯ ಪ್ರಥಮ, ಮಂಜುಳ ದ್ವಿತೀಯ, ಭಾಗ್ಯ ದ್ವಿತೀಯ, ಅಕ್ಷತಾ ತೃತೀಯ. ಸಮಾಧಾನಕರ ಬಹುಮಾನ ಪಡೆದವರು. ವಿನುತಾ, ವೀಣಾ, ಹರ್ಷಿತ, ಮಂಜುಳಾ ಲೋಕೇಶ್, ಸುಶೀಲಮ್ಮ, ಶೃತಿ,ಪ್ರಿಯಾಂಕ, ಪೂರ್ಣಿಮಾ, ಉಷಾ, ಶಾಂತಮ್ಮ, ರತ್ನಮ್ಮ, ರಶ್ಮಿ, ಶೋಭಾ, ಸುಷ್ಮಾ, ಓಂಕಾರಮ್ಮ, ಅನುಶ್ರೀ, ಪವಿತ್ರ, ವೀಣಾ, ಶಾರದಮ್ಮ. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಸದಸ್ಯ ಆರ್. ಎಂ. ಬಸವರಾಜ್, ಶೇಖರಪ್ಪ, ಕುಪೇಂದ್ರಪ್ಪ, ವಸಂತ ಭಾಗವಹಿಸಿದ್ದರು.
ಮಾಹಿತಿ ಹಕ್ಕು ನಿಯಮ ಉಲ್ಲಂಘನೆ
ಮೂಡಿಗೆರೆ: ಮಾಹಿತಿ ಹಕ್ಕು ಮೂಲಕ ಅರ್ಜಿ ಸಲ್ಲಿಸಿದ ಸಂಬಂಧ ಆಲ್ದೂರು ವಲಯ ಅರಣ್ಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅನಗತ್ಯ ದಾಖಲೆ ಒದಗಿಸಿರುವುದಲ್ಲದೆ ಅಧಿಕ ಶುಲ್ಕ ಪಡೆದಿದ್ದಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎಸ್. ಅಮರ್ನಾಥ್ ಅವರು ಎಸಿಎಫ್ ರಮೇಶ್ ಬಾಬು ಅವರಿಗೆ ಶನಿವಾರ ದೂರು ಸಲ್ಲಿಸಿದರು. ಇತ್ತೀಚೆಗೆ ಆಲ್ದೂರು ವಲಯಕ್ಕೆ ಒಳಪಟ್ಟಿರುವ 20102,13ರ ಸರ್ಕಾರಿ ಕಡತದಲ್ಲಿರುವ ನಿರ್ದಿಷ್ಟ ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಕೇಳಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಅಧಿಕಾರಿಯು 786 ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದಾರೆ. ಅಲ್ಲದೆ, ಅನಗತ್ಯ ಮಾಹಿತಿ ಒದಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದಾಖಲೆಗಳಲ್ಲಿ ಕೇವಲ 39 ಪುಟಗಳಿವೆ. ಅಷ್ಟಕ್ಕೆ ಹಣ ಪಡೆಯುವ ಬದಲು ಅನಗತ್ಯ ದಾಖಲೆ ಪತ್ರ ಒದಗಿಸಿ ದಾರಿ ತಪ್ಪಿಸುವ ತಂತ್ರಗಾರಿಕೆ ಅನುಸರಿಸಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ ನೂರಾರು ರು.ಗಳನ್ನು ವಸೂಲಿ ಮಾಡುವ ಮೂಲಕ ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಈ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸ್ತ್ರೀಗೆ ಸಾಮಾಜಿಕ ಮನ್ನಣೆ ಸಿಗಲಿ
ಮೂಡಿಗೆರೆ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಗೌರವಯುತ ಸ್ಥಾನಮಾನ ನೀಡುವ ಜತೆಗೆ ಸಾಮಾಜಿಕ ಮನ್ನಣೆ ಪ್ರಾಪ್ತಿಯಾಗುವಂತೆ ಮಾಡಬೇಕು ಎಂದು ಉಜಿರೆಯ ಫಾದರ್ ವಿನ್ಸೆಂಟ್ ಹೇಳಿದರು. ಶನಿವಾರ ಪಟ್ಟಣದ ಡಾ. ಪಿ.ಎ. ಅಡ್ಯಂತಾಯ ಸ್ಮಾರಕ ರಂಗಮಂದಿರದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರನ್ನು ಅಬಲೆ, ದುರ್ಬಲೆ ಎಂದು ಕಲ್ಪಿಸಿಕೊಳ್ಳುವುದನ್ನು ತಡೆಗಟ್ಟಬೇಕು ಎಂದು ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಮಾತನಾಡಿ, ಹಳ್ಳಿಗಳ ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು 460 ಮಂದಿಗೆ ಬಡ್ಡಿರಹಿತ ತಲಾ 5 ಸಾವಿರ ಸಾಲ ಸೌಲಭ್ಯ ಒದಗಿಸಲಾಗಿದೆ. ಸ್ವ- ಉದ್ಯೋಗ, ಕೋಳಿ ಸಾಕಾಣಿಕೆ, ಹಸು ಸಾಕಾಣಿಕೆ ಮೀನು ಸಾಕಾಣಿಕೆಗೆ ಉತ್ತೇಜನ ನೀಡಲಾಗಿದೆ. ಎರೆಹುಳು ಗೊಬ್ಬರ ತಯಾರಿಕೆ, ಆಧುನಿಕ ಕೃಷಿ ತಂತ್ರಜ್ಞಾನ ಬಳಕೆ, ಆದಾಯ ಉತ್ಪನ್ನ ಚಟುವಟಿಕೆ, ಮಹಿಳಾ ನಾಯಕತ್ವದ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು. ಸಂಘದ ಸುಶೀಲ, ಫಾದರ್ ವಿನೋದ್ ಮತ್ತಿತರರಿದ್ದರು.
ಪರಿಸರ ನೈರ್ಮಲ್ಯದ ಎಚ್ಚರಿಕೆ ಅವಶ್ಯ
ಶಿರಾಳಕೊಪ್ಪ: ಕಲಬೆರಕೆ ಆಯಿಲ್ ಉಪಯೋಗಿಸುವುದರಿಂದ ಪರಿಸರ ನಾವೇ ಹಾಳು ಮಾಡಿಕೊಳ್ಳವುದರ ಜೊತೆಗೆ ನಮ್ಮ ವಾಹನಗಳು ಹಾಳಾಗಲು ನಾವೇ ಕಾರಣರಾಗುತ್ತಿದ್ದೇವೆ. ಆದ್ದರಿಂದ ಎಚ್ಚರಿಕೆ ಅವಶ್ಯ ಎಂದು ಬೆಂಗಳೂರು ಟೆರಿಟರಿ (ದಕ್ಷಿಣ ಕರ್ನಾಟಕ) ಲುಬ್ರಿಕೆಂಟ್ಸ್ ಮ್ಯಾನೇಜರ್ ರಾಜೀವ ಕುಮಾರ್ ತಿಳಿಸಿದರು. ಪಟ್ಟಣದ ಆದಿತ್ಯಾ ಎನರ್ಜಿ ಬಳಿ ನಡೆದ 2 ದಿನದ ವಿಸ್ಮಯ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಹಕರಿಗೆ ಮಾಹಿತಿ ನೀಡಿ ಶಿಕ್ಷಣ ಕೊಡುವ ಕಾರ್ಯಕ್ರಮ ಇದಾಗಿದೆ. ಶುದ್ಧ ಆಯಿಲ್ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅದನ್ನು ನೀವೇ ಖಚಿತ ಪಡಿಸಿಕೊಳ್ಳಬಹುದು. ಮಾರಾಟ ಮ್ಯಾನೇಜರ್ ಮಹೀರ್ ದತ್ತ ಮಾತನಾಡಿ, ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಶುದ್ಧವಾಗಿರುವ ಆಯಿಲ್ ಬಗ್ಗೆ ತಿಳಿದಾಗ ವಾಹನಗಳನ್ನು ಸುಸ್ಥತಿಯಲ್ಲಿ ಇಡಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ ವಹಿಸಿ ಮಾತನಾಡಿದರು. ಲೋಕೋಪಯೋಗಿ ಎಂಜಿನಿಯರ್ ಜಗಮ ಶೆಟ್ಟಿ ಸಾಮಾಜಿಕ ಕಾರ್ಯಕರ್ತ ಶೇಷಗಿರಿ, ಗಂಗಾ ಧರ, ಗಣಪತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

