ಎಪಿಎಂಸಿ ಅಧ್ಯಕ್ಷರಾಗಿ ಗೋವಿಂದಪ್ಪ ಅವಿರೋಧ ಆಯ್ಕೆ
ಕ.ಪ್ರ.ವಾರ್ತೆ, ಕಡೂರು, ಮಾ.10
ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹುಲ್ಲೇಹಳ್ಳಿ ಕ್ಷೇತ್ರದ ಗೋವಿಂದಪ್ಪ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಸ್ಥಾನವು ಲಕ್ಷ್ಮಣ ನಾಯ್ಕ ಅವರ ರಾಜಿನಾಮೆಯಿಂದ ತೆರವಾಗಿ ಉಪಾಧ್ಯಕ್ಷರಾಗಿದ್ದ ಕೃಷ್ಣಮೂರ್ತಿ ಪ್ರಭಾರೆ ಅಧ್ಯಕ್ಷರಾಗಿ ಮುಂದುವರಿದಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣೆ ಮಂದೂಡಲ್ಪಡಬಹುದು ಎಂಬ ನಿರೀಕ್ಷೆಯಿತ್ತಾದರೂ ಮಾ.10 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು.
ಸೋಮವಾರ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಿದ ತಹಸೀಲ್ದಾರ್ ತಿಮ್ಮಾಭೋವಿ ಅವರು ಗೋವಿಂದಪ್ಪ ಅವರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಗೋವಿಂದಪ್ಪ ಅವರ ಅವಿರೋಧ ಆಯ್ಕೆ ಘೋಷಿಸಿದರು.
ನಿಖರ ಬೆಲೆ: ನೂತನ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬೆಳ್ಳಿ ಪ್ರಕಾಶ್ ಮಾತನಾಡಿ, ಪಕ್ಷಭೇಧ ಮರೆತು ಅವಿರೋಧ ಆಯ್ಕೆ ಮಾಡಿ ತಾವು ರೈತರ ಪರವಾಗಿದ್ದೇವೆ ಎಂದು ತೋರಿಸಿಕೊಟ್ಟಿರುವ ನಿರ್ದೇಶಕರ ಕ್ರಮ ಮೆಚ್ಚುವಂತಥದ್ದು. ಎಪಿಎಂಸಿ ನಿರ್ದೇಶಕರಿಗೆ ಯಾವುದೇ ಪಕ್ಷವಿಲ್ಲ ಅದು ಕೇವಲ ರೈತಪಕ್ಷ ಎಂಬುದನ್ನು ಸಾಬೀತು ಮಾಡಿದ್ದಾರೆ. ಆ ಮೂಲಕ ತಾಲೂಕಿನ ರೈತರ ಹಿತದೃಷ್ಟಿಯಿಂದ ರೈತರ ಉತ್ಪನ್ನಗಳಿಗೆ ನಿಖರವಾದ ಬೆಲೆ ಸಿಗುವಂತೆ ನೋಡಿಕೊಂಡು ಕರ್ತವ್ಯ ನಿರ್ವಹಿಸಬೇಕು. ಗೋವಿಂದಪ್ಪ ಅವರು ಕೂಡ ರೈತರಾಗಿದ್ದು, ರೈತರ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಮತ್ತೋರ್ವ ಮುಖಂಡ ಹಾಗು ಮಾಜಿ ಜಿ.ಪಂ. ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿ, ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಗೋವಿಂದಪ್ಪ ಅವರ ಅವಿರೋಧ ಆಯ್ಕೆಗೆ ಎಲ್ಲರೂ ಪಕ್ಷಾತೀತವಾಗಿ ಆಯ್ಕೆ ಮಾಡುವ ಮೂಲಕ ಕಡೂರು ಎಪಿಎಂಸಿಯಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ. ಗೋವಿಂದಪ್ಪ ಅವರು ರೈತರ ಪರವಾಗಿ ಕೆಲಸ ಮಾಡಿ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಕೊಡಿಸಿ ರೈತರ ಹಿತ ಕಾಪಾಡಬೇಕು ಎಂದು ಹೇಳಿ ಶುಭ ಹಾರೈಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಅಧಿಕಾರ ಮುಖ್ಯವಲ್ಲ. ಆದರೆ, ಗೋವಿಂದಪ್ಪಅವರು ತಮಗೆ ಸಿಕ್ಕಿರುವ ಅಧಿಕಾರವನ್ನು ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ನೂತನ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಮುಖಂಡರಾದ ಕೆ.ಎಂ. ಕೆಂಪರಾಜು ಮತ್ತು ಬೆಳ್ಳಿ ಪ್ರಕಾಶ್ ಅವರು ಹಾಗೂ ಎಲ್ಲ ನಿರ್ದೇಶಕರೂ ತಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧ ಆಯ್ಕೆಗೆ ಸಹಕರಿಸಿದ್ದಾರೆ. ತಾವು ಅವಿದ್ಯಾವಂತ ಕುಟುಂಬದಿಂದ ಬಂದು ಇಂದು ಈ ಸ್ಥಾನಕ್ಕೆ ಬಂದಿರುವುದು ತಮಗೆ ಹಾಗೂ ಕುಟುಂಬಕ್ಕೆ ಸಂತಸ ತಂದಿದೆ ಎಂದ ಅವರು, ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಉಪಾಧ್ಯಕ್ಷ ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣನಾಯ್ಕ, ಚಿಕ್ಕದೇವನೂರು ರವಿ, ಕೇಶವನಾಯ್ಕ, ಸತೀಶ್, ಎಚ್.ಎಂ. ರೇವಣ್ಣಯ್ಯ, ಗುರುಮೂರ್ತಿ, ಉಪನ್ಯಾಸಕ ಸೋಮಶೇಖರ್, ಸಂತೋಷ್ ಎಪಿಎಂಸಿ ಕಾರ್ಯದರ್ಶಿ ದ್ವಾರಕಪ್ರಸಾದ್, ಸಿಬ್ಬಂದಿ ಏಳುಕೋಟಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

