ಬರ ಕಾಮಗಾರಿಗೆ 70 ಲಕ್ಷ ಬಿಡುಗಡೆ
ಕ.ಪ್ರ.ವಾರ್ತೆ ಕಡೂರು ಮಾ. 13
ತಾಲೂಕಿಲ್ಲಿ ಬರ ಕಾಮಗಾರಿಯ ಪ್ರಗತಿ ನೋಡಿ ಹಂತ ಹಂತವಾಗಿ ಅನುದಾನ ನೀಡುವ ಉದ್ದೇಶದಿಂದ ಪ್ರಥಮ ಹಂತದಲ್ಲಿ 70 ಲಕ್ಷರೂ ಬಿಡುಗಡೆ ಮಾಡಿದ್ದು ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೈಗೊಂಡಿರುವ 125 ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶೇಖರಪ್ಪ ಸೂಚಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಟಾಸ್ಕ್ಫೋರ್ಸ್ ಸಮಿತಿಯ ಅಧಿಕಾರಿಗಳ ಸಭೆ ನಡೆಸಿದರು. ಆರಂಭದಲ್ಲೇ ಕುಡಿಯುವ ನೀರಿನ ಅಭಾವ ಕುರಿತು ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟಾಚಲ ಮಾಹಿತಿ ನೀಡಿದಾಗ, ಹೊಸ ಕೊಳವೆಬಾವಿಗೆ ಅವಕಾಶವಿಲ್ಲ. ಯಾರ ಅಪ್ಪಣೆ ಪಡೆದು 69 ಕೊಳೆವೆಬಾವಿ ಕೊರೆಸಿದ್ದೀರಿ ಎಂದು ಪ್ರಶ್ನಿಸಿದರು.
ಡಿಸಿ ಗರಂ: ವೆಂಕಟಾಚಲ, ನೀರು ಇಲ್ಲದಿದ್ದಾಗ ಕೊಳವೆಬಾವಿ ಕೊರೆಸದೆ ಇದ್ದರೆ ಹೇಗೆ ಎಂದು ಮರು ಪ್ರಶ್ನಿಸಿದಾಗ ಗರಂ ಆದ ಜಿಲ್ಲಾಧಿಕಾರಿ ಫ್ಲಶ್ ಮಾಡಿಸಿ ನೀರು ಕೊಡಬೇಕು. ಕ್ರೀಯಾಶೀಲ ಯೋಜನೆ ರೂಪಿಸಲು ಬರುವುದಿಲ್ಲವೇ ಕ್ರಿಯಾಶೀಲ ವರದಿಯಲ್ಲಿ ಗಂಭೀರ ಸ್ಥಿತಿ ಇರುವುದನ್ನು ಮಾತ್ರ ಪಟ್ಟಿ ಮಾಡಿ ವರದಿ ನೀಡಿದಲ್ಲಿ ಮಾತ್ರ ಅನುದಾನ ನೀಡಲಾಗುವುದು ಎಂದರು.
ಕಡೂರು, ಬೀರೂರು ಪುರಸಭೆ ಮುಖ್ಯಾಧಿಕಾರಿಗಳು ಕಳೆದ ವರ್ಷ ಟ್ಯಾಂಕಲ್ಲಿ ನೀರು ನೀಡಿರುವ ಬಾಕಿ ಬಿಲ್ಲು ಕೊಡಬೇಕಾಗಿದೆ ಎಂದಾಗ ತಮಗೆ ಎಲ್ಲವೂ ಗೊತ್ತಿದೆ. ಯಾವುದೋ ಪುಡಾರಿ ಹೇಳಿದ ಎಂದು 30 ಟ್ಯಾಂಕ್ ನೀರು ಪೂರೈಸಿ 300 ಟ್ಯಾಂಕ್ ಎಂದು ಬರೆದು ಹಣ ಹೊಡೆಯುವ ಟ್ಯಾಂಕರ್ ನೀರಿನ ದಂಧೆ ಸಂಚು ತಮಗೆ ಗೊತ್ತಿದೆ. ಪರಿಶೀಲಿಸದೆ ಹಣ ನೀಡುವುದಿಲ್ಲ ಎಂದು ಖಡಾತುಂಡವಾಗಿ ಹೇಳಿದರು.
ಭದ್ರಾ ನೀರು: ನೀರಾವರಿ ಇಲಾಖೆಯ ಇಇ ವೈದೇಹಿಯವರು ಭಧ್ರಾ ಡ್ಯಾಂನಿಂದ ಕಡೂರು ಬೀರೂರು ಪಟ್ಟಣಗಳಿಗೆ ನೀರು ನೀಡುವ ಕಾಮಗಾರಿ ಮುಗಿದಿದ್ದು, ಪ್ರಾಯೋಗಿಕವಾಗಿ ಮಾ. 31ರೊಳಗೆ ಮೀಟರ್ ಅಳವಡಿಸಿ ಪ್ರಾಯೋಗಿಕ ನೀರು ಹರಿಸಲಾಗುವುದು ಎಂದರು.
ಪ್ರತಿ ಶನಿವಾರ ಬರದ ಸಭೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರ್ ಹಾಗು ಎಇಇಗೆ ಡಿಸಿ ಸೂಚಿಸಿದರು. ನರೇಗಾದಲ್ಲಿ 50 ಕೋಟಿ ರು.ಗೆ 25 ಕೋಟಿ ರು. ಮಾತ್ರ ಖರ್ಚು ಮಾಡಿ ಗುರಿ ಸಾಧಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿ, ಬೇರೆ ಜಿಲ್ಲೆಗಳಲ್ಲಿ ಗುರಿ ಸಾಧಿಸುತ್ತಿದ್ದರೂ ನಿಮಗೆ ಏನಾಗಿದೆ ಎಂದು ರೇಗಿದರು.
ಅಧಿಕಾರಿಯೇ ಹೊಣೆ: ಕಡೂರು ಪಟ್ಟಣದಲ್ಲಿ 30 ಕೊಳವೆಬಾವಿ ಕಾಮಗಾರಿಯಲ್ಲಿ 17 ಮುಗಿದಿದ್ದು 13 ಕಾಮಗಾರಿಗೆ ಆದೇಶ ನೀಡಬೇಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ ಹೇಳಿದಾಗ, ಮುಖ್ಯಾಧಿಕಾರಿಗಳು ಯಾವುದೇ ಜನಪ್ರತಿನಿಧಿಗಳ ಒತ್ತಡದಿಂದ 13ನೇ ಹಣಕಾಸು ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸಿದಲ್ಲಿ ನೀವೇ ಹೊಣೆಗಾರರಾಗುತ್ತೀರಿ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಜಿ.ಪ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್, ತಹಸೀಲ್ದಾರ್ ತಿಮ್ಮಾಭೋವಿ, ಜಿ.ಪ.ಎಇಇ ಪ್ರಭಾಕರ್ ರಾವ್, ಕೃಷಿ ಸಹಾಯಕ ನಿರ್ದೇಶಕ ಶಿವಣ್ಣ, ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

