ಚಿಕ್ಕಮಗಳೂರು

ವೀರಭದ್ರಸ್ವಾಮಿ ದೇಗುಲಕ್ಕೆ 400 ವರ್ಷ ಇತಿಹಾಸ

Published On :

ಕ.ಪ್ರ.ವಾರ್ತೆ   ಬಾಳೆಹೊನ್ನೂರು   ಮಾ. 19
ಸಮೀಪದ ಖಾಂಡ್ಯ ಹೋಬಳಿ ಬಿದರೆ ಗ್ರಾಪಂ ವ್ಯಾಪ್ತಿಯ ಸಿಂಧೂರ ವೀರಭದ್ರಸ್ವಾಮಿ ದೇವಸ್ಥಾನಕ್ಕೆ 400 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸ ತಜ್ಞ ಬೆಂಗಳೂರಿನ ಡಾ. ಎಂ.ಜಿ. ನಾಗರಾಜ್ ಹೇಳಿದ್ದಾರೆ.
ಇಲ್ಲಿನ ರಂಭಾಪುರಿಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಸ್ಥಳಕ್ಕೆ ಭೇಟಿ ನೀಡಿ ದೇವಸ್ಥಾನ ಪರಿಶೀಲಿಸಿದರು.
ವಿಜಯನಗರ ಅರಸರ ಆಳ್ವಿಕೆಯ ಅವಧಿಯಲ್ಲಿ ಈ ದೇವಾಲಯ ನಿರ್ಮಿಸಿದ್ದಾಗಿದ್ದು, ಪರಿಸರದ ಮಧ್ಯ ಆಗಾಧ ಬಂಡೆಯಡಿಯ ಗುಹೆಯಲ್ಲಿ ದೇವಸ್ಥಾನದ ಗರ್ಭಗುಡಿಯೊಳಗೆ ಸುಮಾರು ಒಂದೂಕಾಲು ಅಡಿಯ ಎತ್ತರದ ವೀರಭದ್ರನ ವಿಗ್ರಹವಿದೆ. ಗರ್ಭಗುಡಿ ಬಾಗಿಲಿಗೆ ಶಿಲ್ಪಕಲೆಯ ಕಲ್ಲಿನ ಕಂಬಗಳಿದ್ದು, ಮುಂಭಾಗಕ್ಕೆ ಶುಕನಾಸಿ ನಂತರ ಕುಸಿದ ಮುಖಮಂಟಪದ ಅವಶೇಷಗಳಿದೆ. ವೀರಭದ್ರನ ಬಲಭಾಗದಲ್ಲಿ ನಂದಿ ವಿಗ್ರಹ, ಎಡಭಾಗದಲ್ಲಿ ಗಂಗೆ ಬಾವಿ ಇದೆ.
ಮುಜರಾಯಿ ಇಲಾಖೆಗೆ ಸೇರಿದ ಗುಹಾಂತರ ದೇವಾಲಯ ಇದಾಗಿದ್ದು, ಇಲಾಖೆ ತುರ್ತಾಗಿ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಿದರೆ ಒಂದು ಯಾತ್ರಾ ಸ್ಥಳವಾಗಬಹುದು. ರಾಜ್ಯದಲ್ಲಿರುವ ಹಲವು ವೀರಭದ್ರ ದೇವಾಲಯಗಳೂ ಸೇರಿದಂತೆ ಈ ದೇವಾಲಯದ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಪಾಳೆಗಾರ ವಂಶಸ್ಥರು ಈ ದೇಗುಲದ ಆಡಳಿತ ನಡೆಸುತ್ತಿದ್ದುದರ ಬಗ್ಗೆ ಸಹ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಬಿದರೆ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಮಾಹಿತಿ ನೀಡಿ, ಜಿಲ್ಲಾಧಿಕಾರಿಗಳು ಈ ದೇಗುಲದ ಅಭಿವೃದ್ಧಿಗೆ ಸೂಚಿಸಿದ್ದು, ಲೋಕೋಪಯೋಗಿ ಇಲಾಖೆ 17.5 ಲಕ್ಷ ಕ್ರಿಯಾಯೋಜನೆ ರೂಪಿಸಿ ಮಂಜೂರಾತಿ ದೊರೆತಿದೆ. ಶೀಘ್ರದಲ್ಲೇ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಸಲಾಗುವುದು.
ಅದಲ್ಲದೆ, ಇಲ್ಲಿಗೆ ಸಮೀಪದ ಗುರು ಸಿದ್ದೇಶ್ವರ ಪರದೇಶಪ್ಪನವರ ಮಠ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನಕ್ಕೂ ಈ ದೇಗುಲಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್, ಪತ್ರಕರ್ತ ಬಿ.ಎಸ್. ನಾಗರಾಜ್ ಭಟ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.