ಚಿಕ್ಕಮಗಳೂರು

ಕಬ್ಬಿನ ಲಾರಿ ಉರುಳಿ 5 ಸಾವು, 18 ಗಾಯ

Published On :

ಚಿಕ್ಕಮಗಳೂರು: ಕಬ್ಬಿನ ಲಾರಿ ಉರುಳಿದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟ ಧಾರುಣ ಘಟನೆ ತಾಲೂಕಿನ ಕಾಮೇನಹಳ್ಳಿ ಬಳಿ ಶನಿವಾರ ಸಂಜೆ ನಡೆದಿದೆ.
 ಬರ್ಮಿ, ಮಂಜಣ್ಣ, ಮಾಲಾ, ಈಶ್ವರ್, ವಸಂತಿ ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಸ್. ಬೊಮ್ಮೆನಹಳ್ಳಿ ಗ್ರಾಮದವರು.
ಎಲ್ಲರೂ ಕಾರ್ಮಿಕರು: ಎಸ್. ಬೊಮ್ಮನಹಳ್ಳಿಯ 24 ಮಂದಿ ಕೂಲಿ ಕಾರ್ಮಿಕರು, ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಮ್ಮೇನಹಳ್ಳಿ ಗ್ರಾಮದ ಬಳಿ ಕಬ್ಬನ್ನು ಕಡಿಯುವ ಕೆಲಸಕ್ಕೆ ಬಂದಿದ್ದರು. ಶನಿವಾರ ಕೂಲಿ ಕೆಲಸ ಮುಗಿಸಿ ಸಂಜೆ ಶಾಂತವೇರಿ ಮಾರ್ಗವಾಗಿ ಕಬ್ಬು ತುಂಬಿದ ಲಾರಿಯಲ್ಲಿ ಊರಿಗೆ ತೆರಳುತ್ತಿದ್ದರು.
 ಕಬ್ಬು ತುಂಬಿದ ಲಾರಿ ಭದ್ರಾವತಿಯ ಸಮೀಪದ ಅಲೆಮನೆಗೆ ಹೋಗಬೇಕಾಗಿದ್ದು, ಆ ಲಾರಿಯ ಮೇಲೆ ಹಾಗೂ ಒಳ ಭಾಗದಲ್ಲಿ ಕೂಲಿ ಕಾರ್ಮಿಕರು ಕುಳಿತುಕೊಂಡಿದ್ದರು. ಕಾಮೇನಹಳ್ಳಿ ಬಳಿ ತಿರುವಿನಲ್ಲಿ ಲಾರಿ ಮುಗುಚಿ ಬಿದ್ದಿದ್ದು, ಮೇಲ್ಭಾಗದಲ್ಲಿ ಕುಳಿತುಕೊಂಡವರ ಮೇಲೆ ಕಬ್ಬು ಬಿದ್ದ ಪರಿಣಾಮ ವಸಂತಿ ಹಾಗೂ ಮಾಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಹಿಳಾ ಕಾರ್ಮಿಕರೇ ಹೆಚ್ಚು: ಇನ್ನುಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿರುವ ವೇಳೆಯಲ್ಲಿ ಬರ್ಮಿ, ಮಂಜಣ್ಣ ಹಾಗೂ ಈಶ್ವರ್ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೈಕಿ ತಿಮ್ಮಯ್ಯ ಎಂಬುವರಿಗೆ ತೀವ್ರ  ಸ್ವರೂಪದ ಗಾಯಾವಾಗಿದೆ. ಕಬ್ಬಿನ ಕೂಲಿ ಕೆಲಸಕ್ಕೆ ಬಂದವರ ಪೈಕಿ ಹೆಚ್ಚಿನ ಮಂದಿ ಮಹಿಳೆಯರೇ.
 ಲಾರಿಯ ಮೇಲ್ಭಾಗದಲ್ಲಿ ಕುಳಿತುಕೊಂಡವರಿಗೆ ತೀವ್ರ ಸ್ವರೂಪದ ಗಾಯಾಗಳಾಗಿದ್ದು, ಒಳ ಭಾಗದಲ್ಲಿ ಕುಳಿತುಕೊಂಡವರಿಗೆ ಸಣ್ಣ ಪುಟ್ಟ ಗಾಯಾಗಳಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಬ್ಬಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರಗೆ ತೆಗೆದರು.
ಗಾಯಾಳುಗಳು:
ಪುಟ್ಟಮ್ಮ, ಲೀಲಾ, ಚಂದ್ರಮ್ಮ, ತ್ರೀವೇಣಿ, ಲೋಕಮ್ಮ, ಸುಂದರಮ್ಮ, ಮಂಜು, ಮೀನಾಕ್ಷಿ, ತಿಮ್ಮಣ್ಣ, ಭಾಗ್ಯ, ಗೀತಾ, ಕರಿಯಮ್ಮ, ರೇಣುಕಮ್ಮ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
 ಕೂಲಿ ಕೆಲಸಕ್ಕೆ ಬಂದವರ ಪೈಕಿ ಕೆಲವರು ಮೃತಪಟ್ಟಿದ್ದರೆ, ಮತ್ತೆ ಕೆಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ನರಳುತ್ತಿದ್ದರು. ಮಹಿಳೆಯರ ತುರ್ತು ಚಿಕಿತ್ಸಾ ಘಟಕದ ವಾರ್ಡ್ ಭರ್ತಿಯಾಗಿತ್ತು. ಅವರನ್ನು ವಿಚಾರಿಸಲು ಸಮೀಪದಲ್ಲಿ ಅವರವರ ಸಂಬಂಧಿಕರು ಯಾರೂ ಇರಲಿಲ್ಲ. ಆಸ್ಪತ್ರೆಯ ವೈದ್ಯರು, ನರ್ಸ್‌ಗಳೇ ಪರಿಸ್ಥಿತಿ ನೋಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ರಾತ್ರಿ 9 ಗಂಟೆಯ ವೇಳೆಗೆ ಎಸ್. ಬೊಮ್ಮೆನಹಳ್ಳಿ ಗ್ರಾಮಸ್ಥರು ಆಸ್ಪತ್ರೆಗೆ ಆಗಮಿಸಿದರು.
ಲಾರಿಯ ಚಾಲಕ ಬಸವರಾಜ್ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.