ಎನ್ಡಿಎ ಅಧಿಕಾರಕ್ಕೆ ಬಂದರೆ ಅಪಾಯ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ.26
ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋಗಿ ಬಂದಿದ್ದಾರೆ. ಆ ಪಕ್ಷದಲ್ಲಿ ಮತ್ತೆ ಜೈಲಿಗೆ ಹೋಗುವವರು ಇದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿ. ಧನಂಜಯಕುಮಾರ್ ಅವರು ಬಿಜೆಪಿ ನಾಯಕರ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ ಎಂದು ಹೇಳಿದರು.
ಜೆಡಿಎಸ್ಗೆ ಸೇರ್ಪಡೆಗೊಳಿಸಿದ್ದರಿಂದ ಮಾನಸಿಕವಾಗಿ ಸಂತೋಷ ತಂದಿದೆ. ಇದು ಒಂದು ಹಂತದ ಗೆಲವು ಸಾಧಿಸಿದಂತಾಗಿದೆ. ತಮ್ಮನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಪ್ರತಿಜ್ಞೆ ಮಾಡಿರುವುದು ಸಂತೋಷವಾಗಿದೆ. ಈ ಕ್ಷೇತ್ರದಲ್ಲಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಅವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಯುಪಿಎ ಸ್ಥಿತಿ ಕೂಡ ಬೇರೆಯಾಗಿಲ್ಲ. ಒಂದು ವೇಳೆ ಅಧಿಕಾರಕ್ಕೆ ಬಂದಿದ್ದೇಯಾದರೆ ಅಪಾಯ ಕಾದಿದೆ ಎಂದು ಹೇಳಿದರು.
ಕಾಂಗ್ರೆಸ್ಗೆ ನೈತಿಕತೆ ಇಲ್ಲ: ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲಾಗುವುದೆಂದು ಕೇಂದ್ರದ ಸಚಿವರು ಕಳೆದ ಉಪ ಚುನಾವಣೆಯಲ್ಲಿ ಈ ಜಿಲ್ಲೆಯ ಮತದಾರರಿಗೆ ಭರವಸೆ ನೀಡಿದ್ದರು. ಆದರೆ, ಆ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ವಿಷಯವನ್ನು ಸಂಸದರು ಮರೆಮಾಚುತ್ತಿದ್ದಾರೆ. ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಚರ್ಚೆಗೆ ಬಂದರೆ ದಾಖಲೆ ಸಹಿತ ಸಾಬೀತುಪಡಿಸುತ್ತೇನೆ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಇದೊಂದು ಅಗ್ನಿ ಪರೀಕ್ಷೆ. ಸಭೆಗಳನ್ನು ಏರ್ಪಡಿಸಿ ಕಾಲಹರಣ ಮಾಡುವುದರ ಬದಲು ಪ್ರತಿ ಮನೆಗೆ ಹೋಗಿ ಪಕ್ಷದ ಪ್ರಚಾರ ಮಾಡಬೇಕು ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್, ಮುಖಂಡ ಕೆ. ಭರತ್ ಮಾತನಾಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಈಶ್ವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಸೋಮೇಗೌಡ, ಭೈರೇಗೌಡ ಉಪಸ್ಥಿತರಿದ್ದರು.
'ಕಾಂಗ್ರೆಸ್, ಬಿಜೆಪಿ ನಿರ್ನಾಮ ಖಚಿತ'
ತರೀಕೆರೆ: ಕಾಂಗ್ರೆಸ್ ಮತ್ತು ಬಿಜೆಪಿ ನಿರ್ನಾಮ ಮಾಡಲು ತೃತೀಯಶಕ್ತಿ ಉದಯ ಖಂಡಿತ ಎಂದು ಜೆಡಿಎಸ್ ಪಕ್ಷದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಅಬ್ಯರ್ಥಿ ಧನಂಜಯಕುಮಾರ್ ತಿಳಿಸಿದ್ದಾರೆ.
ಇಲ್ಲಿನ ಜಾತ್ಯತೀತ ಜನತಾದಳ ತಾಲೂಕು ಘಟಕ ವತಿಯಿಂದ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಜಾತ್ಯತೀತ ಜನತಾದಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾದೇಶಿಕ ಶಕ್ತಿಗಳು ಬಲವಾಗುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಜನರನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರನ್ನು ಪ್ರತ್ಯೇಕ ಮಾಡುವುದು ಬೇಡ. ಅವರ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ ಬೇಡ. ಕಾಂಗ್ರೆಸ್ ಶಕೆ ಮುಗಿದಿದೆ. ತೃತೀಯಶಕ್ತಿಗೆ ಹೆಚ್ಚು ಬೆಂಬಲ ಕೊಡಬೇಕು ಎಂಬ ಭಾವನೆ ಜನರಲ್ಲಿದೆ ಎಂದರು.
ಧನಂಜಯ ಸಮರ್ಥ ನಾಯಕ: ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ ಧನಂಜಯಕುಮಾರ್ ಸಮರ್ಥ ನಾಯಕರಾಗಿದ್ದಾರೆ. 4 ಬಾರಿ ಸಂಸತ್ ಸದಸ್ಯರಾಗಿ ಅಪಾರ ಅನುಭವ ಅವರಿಗಿದೆ. ಜನರ ಕಷ್ಟ-ಸುಖಕ್ಕೆ ಕಾಂಗ್ರೆಸ್ ಬಿಜೆಪಿ ಸ್ಪಂದಿಸಿಲ್ಲ ಎಂದರು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ತಾಲೂಕು ಘಟಕದ ಅಧ್ಯಕ್ಷ ಎಂ.ನರೇಂದ್ರ, ಜಿಲ್ಲಾಧ್ಯಕ್ಷ ಮಂಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್, ರಾಜೇಂದ್ರ, ಮಾಜಿ ಪುರಸಭಾಧ್ಯಕ್ಷ ಟಿ.ಆರ್. ನಾಗರಾಜ್, ಅಜ್ಜಂಪುರ ಶಿವಾನಂದ್, ಜಾಕೀರ್ ಹುಸೇನ್ ಮಾತನಾಡಿದರು.
ತಾ.ಪಂ. ಮಾಜಿ ಸದಸ್ಯ ಎಸ್.ಎ. ಕೃಷ್ಣಪ್ಪ, ರಫೀಕ್, ಪಕ್ಷದ ಕಾರ್ಯಕರ್ತರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸ್ವಾರ್ಥಿಗಳ ಪಾಲಾದ ಬಿಜೆಪಿ
ತರೀಕೆರೆ: ಬಿಜೆಪಿ ಪಕ್ಷ ಇದೀಗ ಸ್ವಾರ್ಥ ಜನರ ಕೈಲಿ ಸಿಕ್ಕಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿ ಧನಂಜಯಕುಮಾರ್ ಅರೋಪಿಸಿದ್ದಾರೆ. ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ರಾಜಕೀಯವಾಗಿ ಬಿ.ಎಸ್.ಯಡಿಯೂರಪ್ಪ ಅವರ ಹಿತಬಯಸಿ ಹೇಳುತ್ತಿದ್ದೇನೆ. ಬಿಜೆಪಿ ಕೆಲವೇ ಸ್ವಾರ್ಥ ಜನರ ಕೈಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

