ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಮಾ.27
ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ತಾಲೂಕಿನ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಬರುವ ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಸಮರೋಪಾದಿಯಲ್ಲಿ ಕಾಮಗಾರಿ ನಡೆಯದೆ ಹೋದರೆ ಮೇ ತಿಂಗಳ ನಂತರ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಸುದ್ದಿಗೋಷ್ಠಿಯಲ್ಲಿ ಗುರುವಾರ ಎಚ್ಚರಿಕೆ ನೀಡಿದರು.
ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ಬಿರಂಜಿ ಹಳ್ಳದ ನೀರನ್ನು ಮತ್ತೀಕೆರೆ ಗ್ರಾಮದ ಬಳಿ ಏತ ನೀರಾವರಿ ಮೂಲಕ ಮಳಲೂರು ಭಾಗದ ರೈತರ 1500 ಎಕರೆ ಪ್ರದೇಶಕ್ಕೆ ನೀರೊದಗಿಸುವ ಈ ಯೋಜನೆಗೆ 1998ರಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, 2.53 ಕೋಟಿ ವೆಚ್ಚದ ಈ ಕಾಮಗಾರಿ 9 ಕೋಟಿಗೆ ಏರಿದೆ. ಕಾಲಮಿತಿಯೊಳಗೆ ಈವರೆಗೆ ಕಾಮಗಾರಿ ನಡೆದಿಲ್ಲ ಎಂದರು.
ರೈತರಲ್ಲಿ ನಿರಾಶೆ: ಕಳೆದ ಹಲವಾರು ವರ್ಷಗಳಿಂದ ಮಳಲೂರು ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಮಳೆಯ ಪ್ರಮಾಣ ಕಡಿಮೆಯಾಗಿ ಯಾವುದೇ ಬೆಳೆ ರೈತರ ಕೈಗೆ ಬಂದಿಲ್ಲ. ಮಲೆನಾಡಿನ ಸೆರಗಿನಲ್ಲೇ ಇರುವ ಮಳಲೂರು, ಕಂಬಿಹಳ್ಳಿ, ಬಿಗ್ಗನಹಳ್ಳಿ, ಕಲ್ಲಹಳ್ಳಿ, ತಗಡೂರು, ಬಿಕ್ಕೇಮನೆ, ಸಿರಗಾಪುರ, ಕದ್ರಿಮಿದ್ರಿ, ಕೆ.ಆರ್. ಪೇಟೆ ಗ್ರಾಮಗಳು ಶಾಶ್ವತ ಬರಗಾಲದಿಂದ ತತ್ತರಿಸುತ್ತಿದೆ. ಈ ಯೋಜನೆ ಪೂರ್ಣಗೊಂಡಿದ್ದರೆ ರೈತರ ಭೂಮಿಗೆ ನೀರುಣಿಸಿ, ಭೂಮಿಯನ್ನು ಹಸಿರು ಮಾಡಬಹುದಾಗಿತ್ತು. ಜನ- ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಬಹುದಾಗಿತ್ತು. ಆದರೆ, ಕಾಮಗಾರಿಯ ಆಮೆ ನಡಿಗೆಯ ವೇಗ ರೈತರನ್ನು ನಿರಾಶೆ ಮಾಡಿಸಿದೆ ಎಂದು ಹೇಳಿದರು.
ಮೇ ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳದೆ ಹೋದರೆ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಕೆ. ಕೃಷ್ಣೇಗೌಡ, ಜಿಲ್ಲಾ ಸಹ ಕಾರ್ಯದರ್ಶಿ ಎಂ.ಎನ್. ರಮೇಶ್ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಕೆ. ಶಶಿಧರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

