ಚಿಕ್ಕಮಗಳೂರು

ರಾಷ್ಟ್ರಕವಿ ಕುವೆಂಪು ಯುಗದ ಕವಿ

Published On :

ಕ.ಪ್ರ. ವಾರ್ತೆ  ಚಿಕ್ಕಮಗಳೂರು ಮಾ.27
ತನ್ನ ಕೃತಿಗಳ ಶ್ರೇಷ್ಠ ಸಾಧನೆಯಿಂದ ವಿಷಯ ವ್ಯಾಪ್ತಿಯಿಂದ ಹಾಗೂ ಚಿಂತನಶೀಲತೆಯಿಂದ ಸಾಹಿತ್ಯ ಕ್ಷಿತಿಜವನ್ನು ವಿಸ್ತರಿಸುವ ಮೂಲಕ ಕುವೆಂಪು ಯುಗದ ಕವಿಯಾಗಿದ್ದಾರೆ ಎಂದು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಹೇಳಿದರು.
ನಗರದ ಎಂಎಲ್‌ಎಂಎನ್ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಏರ್ಪಡಿಸಿದ್ದ ದಡೇದ್ ಮತ್ತು ಜೆ.ಪಿ. ಕೃಷ್ಣೇಗೌಡರ ದತ್ತಿ ಉಪನ್ಯಾಸದಲ್ಲಿ ಕುವೆಂಪು ಸಾಹಿತ್ಯ ಕುರಿತು ಮಾತನಾಡಿ, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಶ್ರೇಷ್ಠ ದರ್ಜೆಯ ಕೃತಿಗಳನ್ನು ರಚಿಸುವುದರ ಮೂಲಕ, ಸಾಧನೆಯ ಉಚ್ಚ ಶಿಖರ ಮೆಟ್ಟಿದ ಕುವೆಂಪು, ಸಮಕಾಲೀನ ಸಾಹಿತಿಗಳ ಮೇಲೆ ಪ್ರಭಾವ ಬೀರುವುದರ ಮುಖೇನ, ಕನ್ನಡಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆಯುವುದರ ಮೂಲಕ ಈ ಯುಗವನ್ನು ತಮ್ಮ ಯುಗವನ್ನಾಗಿ ಮಾಡಿಕೊಂಡಿದ್ದಾರೆ ಎಂದರು.
ಅಪೂರ್ವ ರತ್ನಮಣಿ: ಆಂಗ್ಲ ಕವಿಯೊಬ್ಬರು ಕುವೆಂಪು ಅವರಿಗೆ ಮೊದ ಮೊದಲು ಇಂಗ್ಲಿಷ್ ಭಾಷೆಯ ಮೇಲಿದ್ದ ವ್ಯಾಮೋಹದ ಪರದೆಯನ್ನು ಸರಿಸಿದ ತರುವಾಯ ಕನ್ನಡ ಸಾಹಿತ್ಯಕ್ಕೆ ಓರ್ವ ಅಪೂರ್ವ ರತ್ನಮಣಿ ದೊರೆತಂತಾಯಿತು. ವಿಮರ್ಶೆ, ನಾಟಕ, ಖಂಡಕಾವ್ಯ, ಕಾದಂಬರಿ, ಸಣ್ಣ ಕಥೆ, ಮಹಾಕಾವ್ಯ, ಮಹಾ ಕಾದಂಬರಿ ರಚಿಸಿದ ಮಹಾನ್ ಕವಿ, ಕಾವ್ಯ ಕಲೆಯನ್ನು ಕುವೆಂಪು ಎಷ್ಟು ಗಂಭೀರವಾಗಿ ತೆಗೆದುಕೊಂಡರೋ, ಅಷ್ಟೇ ಗಂಭೀರವಾಗಿ ಗದ್ಯ ಬರವಣಿಗೆಯನ್ನು ತೆಗೆದುಕೊಂಡಿದ್ದರು ಎಂದು ಹೇಳಿದರು.
ಸಮಾಜಕ್ಕೆ ಪ್ರಸ್ತುತ: ಬಂಡಾಯ ಧ್ವನಿ ಕುಂವೆಪು ಅವರ ಎಲ್ಲಾ ಕಾದಂಬರಿಗಳಲ್ಲಿ ಅನುರಣಿಸುತ್ತೆ. ನಿರಂಕುಶಮತಿಗಳಾಗಿ ಎಂಬ ಅವರ ಭಾಷಣ ವೈಚಾರಿಕವಾದದ್ದು, ಇವರ ಕನ್ನಡಪ್ರೇಮ, ಅನಿಕೇತನ ಪರಿಕಲ್ಪನೆ, ವಿಶ್ವಮಾನವ ಸಂದೇಶ ಇಂದಿನ ತಲ್ಲಣಗೊಂಡಿರುವ ಸಮಾಜಕ್ಕೆ ಪ್ರಸ್ತುತ ಎನಿಸುತ್ತದೆ.
ಕುವೆಂಪು  ಅವರ ಕೃತಿಗಳು ಆಂಗ್ಲ ಭಾಷೆಗೆ ತರ್ಜುಮೆಗೊಂಡಿದ್ದರೆ, ನೊಬೆಲ್ ಪ್ರಶಸ್ತಿಗೂ ಅವರು ಭಾಜನರಾಗುತ್ತಿದ್ದರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜ್ಯೋತಿ ಕೃಷ್ಣ ಅವರು, ತಮ್ಮ ತಂದೆಯವರು ವೈದ್ಯರಾಗಿ, ನಿರ್ದೇಶಕರಾಗಿ ಗಣನೀಯವಾಗಿ ಸೇವೆ ಸಲ್ಲಿಸಿದವರು ಎಂದರು.
ವೈದ್ಯೆ ಡಾ. ಶುಭಾ ವಿಜಯ್ ಮಾತನಾಡಿ, ಡಾ. ದಡೇದ್ ಅವರು ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಮಾನವೀಯ ಗುಣ ಬೆಳೆಸಿಕೊಳ್ಳುವಂತೆ ಬೋಧಿಸಿದ್ದರು ಎಂದರು.
ಶ್ರೇಷ್ಠ ಸಾಹಿತಿ: ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ ಜಗದ ರಸಋಷಿಯಾಗಿ ಹೆಸರು ಮಾಡಿದ ಶ್ರೇಷ್ಠ ಸಾಹಿತಿ ಮತ್ತು ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಮೊದಲಿಗರಾಗಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾ.ಸು. ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಸಿ. ಮೂರ್ತಿ ಅವರು ಉಪಸ್ಥಿತರಿದ್ದರು. ವಾಣಿ ಚಂದ್ರಯ್ಯ ನಾಯ್ಡು ಸ್ವಾಗತಿಸಿದರು. ಬಿ.ಆರ್. ಜಗದೀಶ್ ನಿರೂಪಿಸಿದರು. ಉಪನ್ಯಾಸಕ ಬೆಳ್ಳಿಯಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.