ನಾರಿಯರಿಗೆ ಅವಕಾಶ ನೀಡಲು ಹಿಂದೇಟು
ನರಸಿಂಹರಾಜಪುರ: ಕಳೆದ 10 ವರ್ಷಗಳ ಹಿಂದೆ ಮಹಿಳೆಯರಿಗೆ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯ ಬಂದರೆ ಮಹಿಳೆಯರು ಸಬಲೀಕರಣರಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ, ಅದು ಸುಳ್ಳಾಗಿದೆ ಎಂದು ಕೊಪ್ಪದ ಹುಲ್ಲು ಮಗ್ಗೆಯ ಲೇಖಕಿ ಚಂದ್ರಕಲಾರಾವ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಷತ್ತಿನ ಆಶ್ರಯದಲ್ಲಿ ಭಾನುವಾರ ಮೆಣಸೂರಿನ ನಿವೃತ್ತ ಮುಖ್ಯ ಶಿಕ್ಷಕ ಕೆ. ಗಣಪತಿ ಅವರ ಮನೆಯ ಅಂಗಳದಲ್ಲಿ ನಡೆದ ಮಾಗುಂಡಿಯ ಕಾಫಿ ಬೆಳೆಗಾರ ಫಿಲೋಮಿನಾ ಪೆರಸ್ ಅವರ ದತ್ತಿ ಉಪನ್ಯಾಸದಲ್ಲಿ ಮಹಿಳಾ ಸಬಲೀಕರಣ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಹಿಂದೇಟು: ಪ್ರಸ್ತುತ ಮಹಿಳೆಯರು ಶಿಕ್ಷಣ ಪಡೆದಿದ್ದಾರೆ. ಆರ್ಥಿಕವಾಗಿ ಸದೃಢರಾಗಿದ್ದಾರೆ. ಆದರೂ ಮಹಿಳೆಯರ ಮೇಲೆ ದೌರ್ಜನ್ಯ ಮುಂದುವರಿಯುತ್ತಿದೆ.
ಕೆಲವು ಬಾರಿ ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದರೆ ಇನ್ನೂ ಕೆಲವು ಪ್ರಕರಣಗಳಲ್ಲಿ ಮಹಿಳೆಯರ ಮೇಲೆ ಮಹಿಳೆಯರೆ ದೌರ್ಜನ್ಯ ಮಾಡುತ್ತಿದ್ದಾರೆ.
ಮಹಿಳೆಯರಿಗೆ ರಾಜಕೀಯ ಮೀಸಲಾತಿಯನ್ನು ಶೇ. 33 ರಷ್ಟು ನೀಡಲಾಗಿದ್ದರೂ ಮಹಿಳೆಯರ ಹಿಂದೆ ಪುರುಷರೆ ನಿಂತು ಅಧಿಕಾರ ಚಲಾಯಿಸುತ್ತಿದ್ದಾರೆ. ಮಹಿಳೆಯರಿಗೆ ಎಲ್ಲರೂ ಗೌರವ ಕೊಡುತ್ತಿದ್ದಾರೆ. ಆದರೆ, ಅವಕಾಶ ಕೊಡಲು ಮಾತ್ರ ಹಿಂದೇಟು ಹಾಕುತ್ತಾರೆ ಎಂದು ಟೀಕಿಸಿದರು.
ಗೌರವದ ಜತೆಗೆ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡಬೇಕು. ಮಹಿಳೆಯರು ಸಹ ತಮಗೆ ನೀಡಿದ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಬ್ಬಣ್ಣ ನಾಡಿಗ್ ಸಮಾರಂಭ ಉದ್ಘಾಟಿಸಿ ಮಾತನಾಡಿ, 1915ರಲ್ಲಿ ರಾಜ್ಯದಲ್ಲಿ ಕರ್ನಾಟಕ ಸಂಘ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡಿಗರ ಸ್ವಾಯುತ್ತ ಸಂಸ್ಥೆಯು ನಂತರ ಕನ್ನಡ ಸಾಹಿತ್ಯ ಪರಿಷತ್ ಆಗಿ ಬೆಳವಣಿಗೆ ಹೊಂದಿ ಈಗ ಶತಮಾನದ ಹೊಸ್ತಿಲಲ್ಲಿದೆ ಎಂದರು.
15 ಸಾವಿರಕ್ಕೆ ಏರಿಕೆ: ಪ್ರಾಸ್ತಾವಿಕವಾಗಿ ಮಾತನಾಡಿದ ತಾ. ಕಸಾಪ ಗೌರವ ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ, 10 ಸಾವಿರ ದತ್ತಿಯಾಗಿ ನೀಡಿದರೆ ದಾನಿಗಳ ಆಶಯದಂತೆ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುತ್ತಿದೆ.
ಪ್ರಸ್ತುತ ವರ್ಷದಿಂದ ದತ್ತಿಯನ್ನು 15 ಸಾವಿರಕ್ಕೆ ಏರಿಸಲಾಗಿದೆ. ತಾಲೂಕಿನಲ್ಲಿ 10 ದತ್ತಿಗಳಿದ್ದು, ಈ ವರ್ಷ ಈಗಾಗಲೇ 9 ದತ್ತಿ ಉಪನ್ಯಾಸ ಮುಗಿಸಿದ್ದೇವೆ. ಈ ವರ್ಷ ರಾಜ್ಯ ಕಸಾಪ ಅಧ್ಯಕ್ಷರ ಆಶಯದಂತೆ ದತ್ತಿ ದಾನಿಗಳ ಮನೆಯಂಗಳದಲ್ಲೇ ದತ್ತಿ ಉಪನ್ಯಾಸ ಏರ್ಪಡಿಸಿದ್ದೇವೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಕೆ.ಗಣಪತಿ, ಕಸಾಪ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ, ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷೆ ಶ್ಯಾಮಲ ಸತೀಶ್, ತಾ. ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ಕೆ. ಬಸವರಾಜ್ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ರಾಜಕುಮಾರ್ ಸ್ವಾಗತಿಸಿದರು. ಮೋಗಣ್ಣ ಗೌಡ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

