ನದಿ ದಡದಲ್ಲಿದ್ದರೂ ನೀರಿಗೆ ಪರದಾಟ
ಕ.ಪ್ರ.ವಾರ್ತೆ ಶೃಂಗೇರಿ ಮೇ 1
ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಕುರಾದಮನೆ ಪರಿಶಿಷ್ಟ ಕಾಲೋನಿಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ, ಕುಡಿಯುವ ನೀರಿನ ಸಮಸ್ಯೆ ಜ್ವಲಂತವಾಗಿಯೇ ಉಳಿದಿದ್ದು, ಹಲವು ಸರ್ಕಾರ, ಜನಪ್ರತಿನಿಧಿಗಳು ಬಂದು ಹೋದರೂ ಇಲ್ಲಿನ ಸಮಸ್ಯೆ ಮಾತ್ರ ಹಾಗೆಯೇ ಇದೆ.
ಬೋರ್‌ವೆಲ್, ನಲ್ಲಿಗಳು ತುಕ್ಕುಹಿಡಿದು ನಿಂತಿವೆ. ಪೈಪ್‌ಲೈನ್ ಇದ್ದರೂ, ಪ್ರಯೋಜನಕ್ಕೆ ಬಾರದಾಗಿದೆ. ಇಲ್ಲಿ ಕನಿಷ್ಠ ಒಂದು ಹೊತ್ತು ಕುಡಿಯುವ ನೀರು ಬರುವುದಿಲ್ಲ.
ಈ ಕಾಲೋನಿಯಲ್ಲಿ ಕುಡಿಯುವ ನೀರಿನ ಮೂಲವೆಂದರೆ ಓಬಿರಾಯನ ಕಾಲದ ಬಾವಿಯೊಂದಿದೆ. ಬೇಸಿಗೆಯಲ್ಲಿ ದೂರದ ತುಂಗಾ ನದಿಯ ನೀರು, ಮಳೆಗಾಲದಲ್ಲಿ ಮಳೆ ನೀರೇ ಗತಿ. ಮಳೆಗಾಲದಲ್ಲಿ ತುಂಗಾ ನದಿಯಲ್ಲಿ ಪ್ರವಾಹ ತುಂಬಿ ಹರಿಯುವುದರಿಂದ ನೀರು ತುಂಬಲು ಸಾಧ್ಯವಿಲ್ಲ. ಆದ್ದರಿಂದ ಮಳೆ ನೀರನ್ನೇ ಅವಲಂಬಿಸಬೇಕು.
ಸವಾಲು: ಇಲ್ಲಿನ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆ ಗ್ರಾಮ ಸಭೆ, ಜನಸ್ಪಂದನ ಸಭೆಗಳಿಗೆ ಒಂದು ಸವಾಲಾಗಿಯೇ ಉಳಿದಿದೆ. ಈ ಬಗ್ಗೆ ಕಾಲೋನಿ ನಿವಾಸಿಗಳು ಸಾಕಷ್ಟು ಬಾರಿ ಮನವಿ, ಗ್ರಾಮಸಭೆ, ಜನಸ್ಪಂದನ ಸಭೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಸ್ಥಳೀಯ ಗ್ರಾಪಂ ಈ ಬಗ್ಗೆ ಗಮನ ಸೆಳೆದಾಗ ತಾವು ಏನೂ ಮಾಡಲಾಗುವುದಿಲ್ಲ ಎಂಬ ಅಸಹಾಯಕತೆ ತೋರಿಸುತ್ತದೆ.
ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ದಶಕದ ಸಮಸ್ಯೆ. ಮೂಲಸೌಕರ್ಯಗಳಲ್ಲಿ ಪ್ರಮುಖವಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಹಲವು ವರ್ಷದಿಂದ ಪರದಾಡುತ್ತಿದ್ದರೂ ಸರ್ಕಾರ, ಜನಪ್ರತಿನಿಧಿಗಳು ಸ್ಪಂದಿಸದಿರುವುದು ನಿಜಕ್ಕೂ ಆಶ್ಚರ್ಯವಾಗಿದೆ.
ನದಿ ದಡದಲ್ಲೇ ನೀರಿನ ಕೊರತೆ: ಟ್ಯಾಂಕ್, ನಲ್ಲಿ, ಪೈಪ್‌ಲೈನ್‌ಗಳಿವೆ. ಆದರೆ ಅವು ಇರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ತುಂಗಾನದಿ ದಡದಲ್ಲಿದ್ದರೂ ಸಮರ್ಪಕ ಕುಡಿಯುವ ನೀರು ಪೋರೈಸದೇ ನಿರ್ಲಕ್ಷ್ಯ ವಹಿಸುತ್ತಾ ಬಂದಿರುವುದು ಸರ್ಕಾರದ ಅಸಡ್ಡೆ, ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಇಲ್ಲಿರುವ ಓಬಿರಾಯನ ಕಾಲದ ಬಾವಿ ಸುಣ್ಣಬಣ್ಣ ಕಳೆದುಕೊಂಡು, ಹೂಳು ತುಂಬಿ ಸಾಕಷ್ಟು ವರ್ಷಗಳೇ ಕಳೆದಿವೆ. ಅದರ ದುರಸ್ಥಿಯೂ ಇಲ್ಲ.
ವ್ಯವಸ್ಥೆಯ ದುರಂತ: ತಾಪಂ ಕೆಡಿಪಿ ಸಭೆಗಳಲ್ಲಿ ಎಲ್ಲಾ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ವರದಿ ತಯಾರಿಸುತ್ತಾರೆ.
ಚರ್ಚಿಸುತ್ತಾರೆ ಆದರೆ ಹಲವು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿರುವ ಇಂತಹ ಅದೆಷ್ಟೋ ಕಾಲೋನಿ, ಗ್ರಾಮಗಳ ನಿವಾಸಿಗಳು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಿರುವುದು ಅವರ ಕಣ್ಣಿಗೆ ಬೀಳದಿರುವುದು, ವ್ಯವಸ್ಥೆಯ ಒಂದು ದುರಂತವೇ ಸರಿ.
ಇನ್ನು ಪಕ್ಕದ ಗ್ರಾಮವಾದ ನೆಮ್ಮಾರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಮುಂದುವರೆದಿದೆ. ಬೆಳಗಿನ ಹೊತ್ತು ಒಂದು ಗಂಟೆಗಳ ಕಾಲ ನೀರಿನ ಸೌಲಭ್ಯವಿದೆ. ಇಲ್ಲಿಯೂ ಮಳೆಗಾಲದಲ್ಲಿ ಮಳೆ ನೀರೇ ಗತಿ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಸರ್ಕಾರ ಇತ್ತ ಗಮನ ಹರಿಸಿ ಹಲವು ವರ್ಷದಿಂದ ಸಮರ್ಪಕ ಕುಡಿಯುವ ನೀರಿನಿಂದ ವಂಚಿತವಾಗಿರುವ ಈ ಕಾಲನಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ, ಜ್ವಲಂತ ಸಮಸ್ಯೆ ಪರಿಹರಿಸಬೇಕಿದೆ.
ಈ ಬಗ್ಗೆ ಕಾಲೊನಿ ನಿವಾಸಿಗಳಾದ ಗೋಪಾಲ, ಶಾಂತಮ್ಮ, ಸತೀಶ, ಸಿಂಗಮ್ಮ ಮೊದಲಾದವರು ಇಲ್ಲಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

