ಸಂತರ ವಿಚಾರಧಾರೆ ಅನುಷ್ಠಾನವಾಗಲಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 19
ಸಂತರು, ಮಹಾತ್ಮರು, ದಾರ್ಶನಿಕರ ವ್ಯಕ್ತಿಪೂಜೆ ಮಾಡುವ ಬದಲು ಅವರ ತತ್ತ್ವ, ಸಿದ್ಧಾಂತ ಮತ್ತು ವಿಚಾರಧಾರೆಗಳ ಅನುಷ್ಠಾನವಾಗಬೇಕು ಎಂದು ಶಾಸಕ ಸಿ.ಟಿ. ರವಿ ಸಲಹೆ ಮಾಡಿದ್ದಾರೆ.
ನ್ಯೂ ಗುಡ್ಲಕ್ ಜೆಂಟ್ಸ್ ಪಾರ್ಲರ್ ಮತ್ತು ದೇಶಭಕ್ತ ಯುವ ವೃಂದ ನಗರದ ಮಾರ್ಕೆಟ್ ರಸ್ತೆ ಸಮೀಪದ ಮೀನುಗಲ್ಲಿಯಲ್ಲಿ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂತರು, ಮಹಾತ್ಮರು ಮತ್ತು ದಾರ್ಶನಿಕರ ವ್ಯಕ್ತಿಪೂಜೆ ನಡೆಯುತ್ತಿದೆ. ಆದರೆ, ಅವರ ತತ್ವ ಸಿದ್ಧಾಂತ ಹಾಗೂ ವಿಚಾರಧಾರೆಗಳ ಅನುಷ್ಠಾನವಾಗುತ್ತಿಲ್ಲ. ಅಂಬೇಡ್ಕರ್ ಅವರ ಜಯಂತಿ ಆಚರಣೆ ನಿರಂತರವಾಗಿ ನಡೆಯುತ್ತಿದೆ. ಆದರೆ, ಅವರು ಕಂಡ ಸಮಾನತೆ ಮತ್ತು ಸಮಾಜ ಸುಧಾರಣೆಯ ಕನಸು ಇದುವರೆಗೂ ನನಸಾಗಿಲ್ಲ ಎಂದು ವಿಷಾದಿಸಿದರು.
ಆಚರಣೆಗೆ ಅರ್ಥ: ಅಂಬೇಡ್ಕರ್ ಅವರು ಕಂಡ ಸಮಾಜ ಸುಧಾರಣೆ ಮತ್ತು ಸಮಾನತೆಯ ಕನಸು ನನಸಾದಾಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ, ದೇಶದಲ್ಲಿರುವ ದಲಿತರು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯಾಗಬೇಕಾದರೆ ಆ ವರ್ಗದ ಜನರು ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕು ಎಂದರು.
ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್. ಅನಿಲ್ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆತಾಗ ಮಾತ್ರ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. ವಕೀಲರ ರಾಷ್ಟ್ರೀಯ ಪರಿಷತ್ತಿನ ಉಪಾಧ್ಯಕ್ಷ ಎಸ್.ಎಲ್. ಬೋಜೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳೆಯೊಬ್ಬರು ಇತ್ತಿಚೆಗೆ ಬಸ್ನಲ್ಲಿ ಬಿಟ್ಟು ಹೋಗಿದ್ದ ಒಡವೆಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ರವೀಶ್ಕುಮಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ದೇಶಭಕ್ತ ಯುವವೃಂದದ ಅಧ್ಯಕ್ಷ ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜೆ. ಸತ್ಯನಾರಾಯಣ, ತೀರ್ಥಹಳ್ಳಿ ಜಗದೀಶ್, ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷ ಅನಿಲ್ ಆನಂದ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಡಿ.ಎ. ಶ್ರೀನಿವಾಸ್, ನ್ಯಾಯವಾದಿ ದೊಡ್ಡಯ್ಯ, ಬಜರಂಗಳದಳದ ಸಂಚಾಲಕ ಯೋಗೀಶ್ ರಾಜ್ ಅರಸ್ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

