ನೆಮ್ಮದಿಗೆ ಸತ್ಯ, ಧರ್ಮ ಪಾಲನೆ ಅಗತ್ಯ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಮೇ 20
ಭಗವಂತನ ಆರಾಧನೆಗೆ ಭಕ್ತಿ ಮುಖ್ಯವಾಗಿದ್ದು, ನಿರ್ಮಲ ಮನಸ್ಸು, ಪ್ರತಿಫಲಾಪೇಕ್ಷೆ ಇಲ್ಲದೆ ಸಮರ್ಪಿಸುವ ಭಕ್ತಿಗೆ ದೇವರು ಒಲಿಯುತ್ತಾನೆ ಎಂದು ರಂಭಾಪುರಿ ಶಾಖಾಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಖಾಂಡ್ಯ ಹೋಬಳಿ ಬಿದರೆ ಗ್ರಾಮದ ಬ್ಯಾಡಿಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿದ್ದೇಶ್ವರಸ್ವಾಮಿ ನೂತನ ದೇವಾಲಯದ ಪ್ರಾರಂಭೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸತ್ಯ, ಧರ್ಮ, ನಿಷ್ಠೆ ಪಾಲನೆ ಮಾಡುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಲಭಿಸಲು ಸಾಧ್ಯ. ಭಾರತೀಯರಿಗೆ ಅಧ್ಯಾತ್ಮದ ಮಹತ್ವ ತಿಳಿಸಬೇಕಾದರೆ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯಬೇಕು. ಆಧ್ಯಾತ್ಮಿಕ ಅರ್ಥದಲ್ಲಿ ಭಾರತದ ಋಷಿ- ಮುನಿಗಳು ಬದುಕಿನ ರೀತಿ ಕಲ್ಪಿಸಿದ್ದಾರೆ. ಮಲೆನಾಡಿನ ಸುತ್ತಮುತ್ತಲಿನ ಪರಿಸರದಲ್ಲಿ ಋಷಿ- ಮುನಿಗಳು ತಪಸ್ಸು ಮಾಡಿದ ನೆಲೆಬೀಡಾಗಿದೆ. ಇಂತಹ ಭೂಮಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ನಾವು ಮುನ್ನಡೆಯಬೇಕು ಎಂದರು.
ಬೇರುಗಂಡಿ ಬೃಹನ್ಮಠದ ರೇಣುಕಾ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪ್ರತಿ ಗ್ರಾಮಗಳಲ್ಲಿ ದೇವಾಲಯಗಳು ನಿರ್ಮಾಣವಾಗುವುದರಿಂದ ಜನರಲ್ಲಿ ಆಧ್ಯಾತ್ಮಿಕ ಶಕ್ತಿ ಹೆಚ್ಚುತ್ತದೆ. ಗ್ರಾಮಸ್ಥರು ಹಾಗೂ ದಾನಿಗಳಿಂದ ಕುಗ್ರಾಮದಲ್ಲಿ ಸುಂದರ ಸಿದ್ದೇಶ್ವರ ದೇವಾಲಯ ನಿರ್ಮಾಣವಾಗಿದ್ದು, ಜನರು ಗುರುವಿನ ಮಾರ್ಗದರ್ಶನದಂತೆ ನಡೆದು ಜೀವನದಲ್ಲಿ ಸತ್ಯ, ಧರ್ಮ ಪಾಲಿಸಬೇಕೆಂದು ಹೇಳಿದರು.
ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ರೇವಣ್ಣಗೌಡ ಮಾತನಾಡಿ, ಹಲವು ವರ್ಷಗಳ ಹಿಂದೆ ಗ್ರಾಮಸ್ಥರ ಸಂಕಲ್ಪದಿಂದ ಸಿದ್ದೇಶ್ವರ ದೇವಾಲಯ ನಿರ್ಮಾಣ ಕಾರ್ಯ ಆರಂಭಗೊಂಡು ಪ್ರತಿಯೊಬ್ಬರ ಸಹಕಾರದಿಂದ ಪೂರ್ಣಗೊಂಡಿದ್ದರಿಂದ ಗ್ರಾಮಸ್ಥರ ಆಶಯ ಈಡೇರಿದಂತಾಗಿದೆ ಎಂದರು.
ಕಡೇದಿನ ವಿಗ್ರಹ ಪ್ರತಿಷ್ಠೆ, ಅಷ್ಟಬಂಧ, ಪ್ರಾಣ ಪ್ರತಿಷ್ಠೆ, ಮಂತ್ರೋಪದೇಶ, ಅಭಿಷೇಕ, ಬ್ರಹ್ಮಕಲಶಾಭಿಷೇಕ, ರಾಜೋಪಚಾರ ಪೂಜಾ, ಶಿಖರಪ್ರತಿಷ್ಠೆ, ಪೂರ್ಣಾಹುತಿ, ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಜಿ. ನಟರಾಜಗೌಡ, ಜಿಪಂ ಸದಸ್ಯ ನಾಗರಾಜ್, ಸುಂದರಶೆಟ್ಟಿ, ಬಿ.ಎಂ. ರಾಮೇಗೌಡ, ಬಿ.ಕೆ. ಮುಳ್ಳೇಗೌಡ, ಬಾಸಾಪುರ ಬೋಜೆಗೌಡ, ಬಿ.ಪಿ. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

