ಚಿಕ್ಕಮಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ನಗರ

Published On :

ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿಯಿತು. ಸುಮಾರು 1 ಗಂಟೆಗೂ ಹೆಚ್ಚು ಮಳೆ ಸುರಿದ್ದರಿಂದ ಇಲ್ಲಿನ ವಿಜಯನಗರ ಸೇರಿದಂತೆ ಸುತ್ತಮುತ್ತಲ ತಗ್ಗಿನ ಪ್ರದೇಶಗಳಲ್ಲಿ ನೀರು ಕಾಲುವೆಯಂತೆ ಹರಿಯುತ್ತಿತ್ತು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಮಾತ್ರವಲ್ಲ ಪಾದಚಾರಿಗಳಿಗೂ ಅಡಚಣೆಯಾಗಿತ್ತು.
ಮಧ್ಯಾಹ್ನ 3.45ಕ್ಕೆ ಆರಂಭವಾದ ಭಾರೀ ಮಳೆ ಜನಜೀವನ ಅಸ್ತವ್ಯಸ್ಥ ಮಾಡಿತ್ತು. ಚಿಕ್ಕಪುಟ್ಟ ಚರಂಡಿಗಳು ಇರುವ ಕಡೆಗಳಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಒಳಚರಂಡಿ ಕಾಮಗಾರಿ ನಡೆದ ಪ್ರದೇಶಗಳಲ್ಲಿ ನೀರು ನಿಂತಿತ್ತು. ಇಲ್ಲಿನ ಐ.ಜಿ. ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನೀರು ನಿಂತಿದ್ದರಿಂದ ವಾಹನಗಳಿಗೆ ತೊಂದರೆಯಾಯಿತು.
ನಗರದ ಹೃದಯ ಭಾಗದಲ್ಲಿರುವ ವಿಜಯನಗರ, ಜಯನಗರ ಬಡಾವಣೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಕಾಲುವೆ ಹಾದುಹೋಗಿದೆ. ಈ ಕಾಲುವೆಯಲ್ಲಿ ನಗರದ ಚರಂಡಿಗಳ ನೀರು ಹರಿದು ಹೋಗುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿದೆ. ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಈ ಕಾಲುವೆ ತುಂಬಿ, ಚರಂಡಿಯ ನೀರು ವಿಜಯನಗರದ ಸೈಂಟ್ ಮೇರಿಸ್ ಶಾಲೆಯ ರಸ್ತೆಯಲ್ಲಿ ಹಾದು ಹೋಗುತ್ತಿದ್ದು. ಆಸುಪಾಸಿನ ಮನೆಗಳಿಗೆ ಕಲುಷಿತ ನೀರು ನುಗ್ಗಿತ್ತು.
ಬಡಾವಣೆಯ ನಿವಾಸಿಗರು ನೀರನ್ನು ಹೊರ ಹಾಕುತ್ತಿರುವುದು ಹಲವೆಡೆ ಕಂಡುಬಂದಿತು. ಈ ರಸ್ತೆಯಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ಪ್ಲಾಸ್ಟಿಕ್ ಸೇರಿದಂತೆ ಇತರೆ ವಸ್ತುಗಳು ಕೊಳಚೆ ನೀರಿನೊಂದಿಗೆ ಸೇರಿಕೊಂಡು ಮನೆಯ ಮುಂಭಾಗದಲ್ಲಿ ನಿಂತಿದ್ದು, ಈ ಭಾಗದ ಜನರು ಸಣ್ಣ ನೀರಾವರಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದರು.
ನಗರದಲ್ಲಿ ಜೋರು ಮಳೆ ಬಂದರೆ ಇದೇ ಪರಿಸ್ಥಿತಿ, ಇಲ್ಲಿನ ಕಾಲುವೆಯ ಹೂಳು ತೆಗೆದು ನೀರು ಸರಾಗವಾಗಿ ಹೋಗುವಂತಹ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಜಯನಗರ ನಿವಾಸಿಗರು ದೂಷಿಸಿದರು.
ಈ ಪರಿಸ್ಥಿತಿಯನ್ನು ಅರಿತ ನಗರಸಭಾ ಅಧ್ಯಕ್ಷ ಪುಷ್ಪರಾಜ್ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಸಹಾಯದಿಂದ ನೀರನ್ನು ಬೇರೆಡೆಗೆ ಹರಿದು ಹೋಗುವ ವ್ಯವಸ್ಥೆ ಮಾಡಿದರು. ವಿಜಯನಗರದ ತಗ್ಗಿನಲ್ಲಿರುವ ಮೈದಾನ ಕೊಳಚೆ ನೀರಿನಿಂದ ತುಂಬಿತ್ತು.
ಮುಂದುವರೆದ ಮಳೆ:  ಕಳೆದ ಒಂದು ವಾರದಿಂದ ಹಲವೆಡೆ ಮಳೆ ಬರುತ್ತಿದ್ದು, ಜಿಲ್ಲೆಯ ಮಲೆನಾಡಿಗಿಂತ ಬಯಲುಸೀಮೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಬಾರಿ ಮುಂಗಾರು ಮಳೆ ಬಾರದೆ ಕುಡಿಯುವ ನೀರು, ಜಾನುವಾರುಗಳ ಮೇವಿನಿಂದ ತತ್ತರಿಸುತ್ತಿರುವ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಬಯಲು ಭಾಗದಲ್ಲಿ ಆಗಾಗ ಮಳೆ ಬರುತ್ತಿರುವುದರಿಂದ ರೈತರ ಮೊಗದಲ್ಲಿ ಹರ್ಷ ಕಾಣುತ್ತಿದೆ.
ತರೀಕೆರೆ ತಾಲೂಕಿನ ಶಿವನಿ ಹಾಗೂ ಅಜ್ಜಂಪುರ ಹೋಬಳಿಗಳಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿರುವುದರಿಂದ ಆ ಭಾಗದ ಕೆರೆಗಳು ನೀರು ಕಂಡಿವೆ. ತರೀಕೆರೆ ತಾಲೂಕಿನಲ್ಲಿರುವ ಬುಕ್ಕಾಂಬೂದಿಯಲ್ಲಿ ಕಳೆದ 24 ಗಂಟೆಗಳಲ್ಲಿ 44.2 ಮಿ.ಮೀ., ಹುಣಸಘಟ್ಟದಲ್ಲಿ 57.5 ಮಿ.ಮೀ., ಲಿಂಗದಹಳ್ಳಿಯಲ್ಲಿ 33.9 ಮಿ.ಮೀ., ತ್ಯಾಗದಬಾಗಿಯಲ್ಲಿ 31.4 ಮಿ.ಮೀ. ಮಳೆ ಬಂದಿದೆ.
ಬರಪೀಡಿತ ಕಡೂರು ತಾಲೂಕಿನಲ್ಲೂ ಆಗಾಗ ಮಳೆ ಬರುತ್ತಿದೆ. ಸೋಮವಾರ ಸಂಜೆ ಬೀರೂರು ಹಾಗೂ ಕಡೂರು ಪಟ್ಟಣಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಬಂದಿದ್ದು, ಬೀರೂರು ಪಟ್ಟಣದಲ್ಲಿ ಕಳೆದ 24 ಗಂಟೆಗಳಲ್ಲಿ 44.8 ಮಿ.ಮೀ., ಕಡೂರಿನಲ್ಲಿ 8.8 ಮಿ.ಮೀ. ಮಳೆಬಂದಿದೆ. ಕಡೂರು ತಾಲೂಕಿನ ಪಂಚನಹಳ್ಳಿ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದೆ. ಈ ತಾಲೂಕಿನ ಕೆರೆ ಕಟ್ಟೆಗಳು ನೀರು ಕಂಡಿದ್ದು, ಇದರಿಂದಾಗಿ ಜಾನುವಾರುಗಳಿಗೆ ಕುಡಿಯಲಿಕ್ಕೆ ಈ ನೀರು ಬಳಕೆ ಮಾಡಿಕೊಳ್ಳಲು ಅನುಕೂಲವಾಗಿದೆ.
ಚಿಕ್ಕಮಗಳೂರು ಪಟ್ಟಣದಲ್ಲಿ ಕಳೆದ 24 ಗಂಟೆಗಳಲ್ಲಿ 1.2 ಮಿ.ಮೀ., ವಸ್ತಾರೆಯಲ್ಲಿ 38 ಮಿ.ಮೀ., ಮೂಡಿಗೆರೆಯಲ್ಲಿ 16.9 ಮಿ.ಮೀ. ಮಳೆ ಬಂದಿದೆ.  ಮೂಡಿಗೆರೆ ಹಾಗೂ ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.