ಕಾಫಿ ನಾಡಿನಲ್ಲಿ ಬಿಜೆಪಿ ವಿಜಯೋತ್ಸವ
ಚಿಕ್ಕಮಗಳೂರು: ದೇಶದ ನೂತನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕಾಫಿಯ ನಾಡಿನಲ್ಲಿ ವಿಜಯೋತ್ಸವ ನಡೆಯಿತು.
ತಮ್ಮ ಪಕ್ಷದ ಕೇಂದ್ರದಲ್ಲಿ ಆಡಳಿತಕ್ಕೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುವುದು ಪಕ್ಷದ ಕರ್ತವ್ಯ, ಇದೊಂದು ಸಹಜ ಎನಿಸಬಹುದು. ಆದರೆ, ಈ ಬಾರಿ ನಗರದಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ, ಕೇಕ್ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಒಂದು ದಶಕಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. ದೇಶದಲ್ಲಿ ಬೀಸಿದ ಅಲೆ ಕಾಫಿಯ ನಾಡಿಗೂ ತಟ್ಟಿತ್ತು. ನರೇಂದ್ರ ಮೋದಿ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸಾರ್ವಜನಿಕರಿಗೆ ಪರದೆಯೊಂದರ ಮೇಲೆ ಪ್ರಮಾಣವಚನದ ನೇರ ಪ್ರಸಾರ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಇದೇ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಉಚಿತವಾಗಿ ಟೀ ವಿತರಣೆ ಮಾಡಿದರು. ವಿಜಯೋತ್ಸವದಲ್ಲಿ ನಗರಸಭಾಧ್ಯಕ್ಷ ಪುಷ್ಪರಾಜ್, ಉಪಾಧ್ಯಕ್ಷ ಅಪ್ಸರ್ ಅಹಮದ್, ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಅಬ್ದುಲ್ ಖುರೇಶಿ, ದೇವರಾಜ್ ಶೆಟ್ಟಿ, ಜಿಪಂ ಸದಸ್ಯೆ ಭಾಗ್ಯ ರಂಗನಾಥ್, ವೆಂಕಟೇಶ್, ಕನಕರಾಜ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಗರದ ವಿವಿಧೆಡೆ ಸಾರ್ವಜನಿಕರು ಪಟಾಕಿ ಸಿಡಿಸಿದರು. ಇಲ್ಲಿನ ಆಜಾದ್ ಪಾರ್ಕ್ ವೃತ್ತದಲ್ಲಿರುವ ನಗರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಯುವಕರು ಸಾರ್ವಜನಿಕರಿಗೆ ಕೇಕ್ ವಿತರಿಸಿ ಸಂಭ್ರಮಿಸಿದರು. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಗುಜರಾತ್ ಮಾದರಿ ಅಭಿವೃದ್ಧಿ: ಜೀವರಾಜ್
ನರಸಿಂಹರಾಜಪುರ: ನರೇಂದ್ರ ಮೋದಿ ಅವರು ಗುಜರಾತ್ ಮಾದರಿಯಲ್ಲೇ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನೆಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು. ಅವರು ಸೋಮವಾರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯ ಪ್ರಯುಕ್ತ 'ನಮೋ ಟೀ ಸ್ಟಾಲ್' ಉದ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶದವರು ಅಕ್ರಮವಾಗಿ ಬಂಧಿಸಿಟ್ಟುಕೊಂಡಿದ್ದ ಭಾರತ ದೇಶದ ಮೀನುಗಾರರನ್ನು ಬಿಡುಗಡೆ ಮಾಡಿದ್ದಾರೆ. ಮೋದಿ ಅವರಂತ ಪ್ರಬಲ ವ್ಯಕ್ತಿ ಪ್ರಧಾನಮಂತ್ರಿ ಆಗುತ್ತಿರುವಾಗ ಸಿಕ್ಕಿದ ಮೊದಲ ವಿಜಯ ಇದಾಗಿದೆ. ರಾಜ್ಯದ ಮೂರು ಸಂಸದರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ. 2ನೇ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.
ಮೋದಿ ಸಚಿವ ಸಂಪುಟದಲ್ಲಿ 7 ಮಹಿಳೆಯರಿಗೆ ಸ್ಥಾನ ಸಿಕ್ಕಿದೆ. ಬಿಜೆಪಿ ಸರ್ಕಾರವು ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುತ್ತದೆ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ಪಕ್ಷದವರು ಮುಂದಿನ ದಿನಗಳಲ್ಲಿ ದ್ವೇಷದ ರಾಜಕಾರಣ ಬಿಟ್ಟು ದೇಶದ ಅಭಿವೃದ್ಧಿಗೆ ಶ್ರಮಿಸಲಿ. ಕಾಂಗ್ರೆಸ್ ಪಕ್ಷವು ಮುಳುಗುವ ಹಡಗಾದಿದೆ. ಇದೇ ರೀತಿ ದ್ವೇಷದ ರಾಜಕಾರಣ ಮುಂದುವರಿಸಿದರೆ ಮುಂದೊಂದು ದಿನ ಕಾಂಗ್ರೆಸ್ ಪಕ್ಷವೇ ರಾಷ್ಟ್ರದಲ್ಲಿ ಇಲ್ಲದಂತೆ ಆಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಡಿ.ಎನ್. ಜೀವರಾಜ್ ತಿಳಿಸಿದರು.
ಬಿಜೆಪಿ ಮುಖಂಡ ಪಿ.ಜೆ. ಆಂಟೋನಿ ಮಾತನಾಡಿದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಸುಜಾತ, ಜೆ.ಜಿ.ನಾಗರಾಜ್, ವೈ.ಎಸ್. ಗಣೇಶ್, ಮುತ್ತಿನಕೊಪ್ಪ ಗೋಪಾಲ್, ಬಿ.ಎಸ್. ಆಶೀಶ್ಕುಮಾರ್, ಮೂಡಬಾಗಿಲು ನಾಗೇಶ್, ಜಯರಾಂ, ಮಂಜುನಾಥ್ ಲಾಡ್ ಮುಂತಾದವರಿದ್ದರು.
ಇದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಲ್ಸಿಡಿ ಸ್ಕ್ರೀನ್ ಮೂಲಕ ಮೋದಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಿಜೆಪಿ ಕಾರ್ಯಕರ್ತರು ವೀಕ್ಷಿಸಿದರು.
ಅಭಿವೃದ್ಧಿ ಪರ್ವ ಆರಂಭ
ಬಾಳೆಹೊನ್ನೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ದೇಶದೆಲ್ಲೆಡೆ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ ಎಂದು ನರಸಿಂಹರಾಜಪುರ ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ ಹೇಳಿದ್ದಾರೆ.
ದೆಹಲಿಯಲ್ಲಿ ಸೋಮವಾರ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಜೇಸಿ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು. ಮೋದಿ ದೇಶದಲ್ಲೇ ಪ್ರಥಮ ಬಾರಿಗೆ 'ಕನಿಷ್ಠ ಸಂಪುಟ, ಗರಿಷ್ಠ ಆಡಳಿತ' ಎಂಬ ಸಂದೇಶದಡಿ ಸಂಪುಟ ರಚಿಸಿದ್ದು, ಉತ್ತಮ ಹಾಗೂ ಸ್ವಚ್ಛ ಆಡಳಿತ ನಡೆಸಲು ಮುನ್ನುಡಿ ಬರೆದಿದ್ದಾರೆ. ಅನುಭವಿ ನಾಯಕರನ್ನು ಸಂಪುಟಕ್ಕೆ ಗಣನೆಗೆ ತೆಗೆದುಕೊಂಡಿರುವುದು ಸಹ ಅಭಿವೃದ್ಧಿಗೆ ಪೂರಕವಾಗಲಿದೆ. ರಾಜ್ಯದಿಂದ ಮೂವರು ಸಂಸದರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದರಿಂದ ರಾಜ್ಯದ ಹಲವು ಸಮಸ್ಯೆಗಳು ಬಗೆಹರಿಯಲಿವೆ. ಒಟ್ಟಾರೆ ಮುಂಬರುವ 5 ವರ್ಷಗಳಲ್ಲಿ ದೇಶದ ಚಿತ್ರಣವೇ ಬದಲಾಗಲಿದೆ. ವಿಶ್ವವೇ ಇತ್ತ ತಿರುಗಿ ನೋಡಲಿದೆ ಎಂದು ಅವರು ಹೇಳಿದರು.
ತಾಲೂಕು ವಕ್ತಾರ ಬಿ.ಜಗದೀಶ್ಚಂದ್ರ ಮಾತನಾಡಿ, ಮಧ್ಯಮ ವರ್ಗದಲ್ಲಿ ಜನಿಸಿ, ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬರು ದೇಶದ ಉನ್ನತ ಹುದ್ದೆಗೆ ಏರುತ್ತಿರುವುದು ಬದಲಾವಣೆಗೆ ಮುನ್ನುಡಿ ಬರೆದಂತಾಗಿದೆ. ಜನಸಾಮಾನ್ಯರ ಕಷ್ಟಗಳನ್ನು ಅರಿತ ನಮೋ ದೇಶದ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲಿದ್ದಾರೆ ಎಂದರು. ಸ್ಥಳೀಯ ಜೇಸಿ ವೃತ್ತದಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ನಮೋ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದೃಶ್ಯಗಳನ್ನು ಬೃಹತ್ ಎಲ್ಸಿಡಿ ಪರದೆ ಮೂಲಕ ಪ್ರದರ್ಶಿಸಲಾಯಿತು. ನಮೋ ಟೀ ಸ್ಟಾಲ್ ತೆರೆದು ನೆರೆದಿದ್ದ ಮೋದಿ ಅಭಿಮಾನಿಗಳಿಗೆ ಚಹಾ ವಿತರಿಸಲಾಯಿತು. ಸಂಜೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕಾರ್ಯಕರ್ತರು, ನಮೋ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಹೋಬಳಿ ಅಧ್ಯಕ್ಷ ಕೆ.ಕೆ. ವೆಂಕಟೇಶ್, ತಾಪಂ ಸದಸ್ಯೆ ಉಮಾ, ಪ್ರಭಾಕರ್, ಗ್ರಾ.ಪಂ. ಸದಸ್ಯರಾದ ಮಹೇಂದ್ರ, ಇಬ್ರಾಹಿಂ ಶಫಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಶ್ರಫ್, ಡಿ.ಎನ್. ಸುವರ್ಣ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

